'ವಸತಿ ಯೋಜನೆ ಸಕಾಲಕ್ಕೆ ಪೂರ್ಣಗೊಳಿಸಿ'

7
ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಸುರೇಶ ಅಂಗಡಿ;

'ವಸತಿ ಯೋಜನೆ ಸಕಾಲಕ್ಕೆ ಪೂರ್ಣಗೊಳಿಸಿ'

Published:
Updated:
ಬೆಳಗಾವಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಭೆಯ ಅಧ್ಯಕ್ಷತೆಯನ್ನು ಸಂಸದ ಸುರೇಶ ಅಂಗಡಿ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ರಾಮಚಂದ್ರನ್‌ ಉಪಸ್ಥಿತರಿದ್ದರು

ಬೆಳಗಾವಿ: ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಜನರಿಗೆ 2022ರ ವೇಳೆಗೆ ವಸತಿ ಒದಗಿಸಬೇಕೆಂದು ಕೇಂದ್ರ ಸರ್ಕಾರ ಉದ್ದೇಶವಾಗಿದ್ದು, ಅಧಿಕಾರಿಗಳು ಎಲ್ಲ ವಸತಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ಸುರೇಶ ಅಂಗಡಿ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಆವಾಸ್ ಯೋಜನೆ ಹಾಗೂ ವಾಜಪೇಯಿ ಆವಾಸ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಅವರು, ಬಡವರಿಗೆ ಮನೆ ಕಟ್ಟಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಎರಡು ಯೋಜನೆಗಳಡಿ ಒಟ್ಟು 23,000 ಅರ್ಜಿಗಳು ಬಂದಿದ್ದು, ಈಗಾಗಲೇ 15,000 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 7,000 ಅರ್ಜಿದಾರರನ್ನು ವಸತಿ ಯೋಜನೆಗೆ ಅರ್ಹರೆಂದು ಗುರುತಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

ಕೆಲವು ಭೂ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಮನೆ ನಿರ್ಮಿಸಿಕೊಡಲು ವಿಳಂಬವಾಗುತ್ತಿದೆ ಎಂದು ಕುರೇರ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಂಸದ ಸುರೇಶ ಅಂಗಡಿ ಅವರು, ಬೇರೆ ಕಡೆ ಲಭ್ಯವಿರುವ ಸರ್ಕಾರಿ ಜಮೀನು ಗುರುತಿಸಿ ಕಾಲಮಿತಿಯೊಳಗೆ ವಸತಿ ಯೋಜನೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು. ಈಗಾಗಲೇ ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಅಕ್ರಮ ವಲಸಿಗರೂ ಇರುವ ಸಾಧ್ಯತೆಗಳಿವೆ. ಸ್ಥಳೀಯ ಶಾಸಕರು ಹಾಗೂ ಮೇಯರ್ ಅವರ ಉಪಸ್ಥಿತಿಯಲ್ಲಿ ಮತ್ತೊಂದು ಸಭೆ ನಡೆಸಿ, ಪಟ್ಟಿ ಪರಿಷ್ಕರಿಸುವಂತೆ ಸಂಸದರು ಸೂಚನೆ ನೀಡಿದರು.

ಬೇಡಿಕೆಗೆ ತಕ್ಕಂತೆ ಉದ್ಯೋಗ ಖಾತ್ರಿ ಆಗಲಿ:
ಬೇಡಿಕೆ ಆಧರಿಸಿ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.  ಪ್ರಸಕ್ತ ವರ್ಷದಲ್ಲಿ ಬೆಳಗಾವಿ ಜಿಲ್ಲೆಗೆ 29.29 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಲಾಗಿದ್ದು, ಗುರಿ ಮೀರಿ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ತಿಳಿಸಿದರು. ಮನೆ ನಿರ್ಮಿಸುವ ವಿವಿಧ ಹಂತಗಳಲ್ಲಿ ನರೇಗಾ ಯೋಜನೆ ಅಡಿ 90 ದಿನಗಳ ಉದ್ಯೋಗಾವಕಾಶ ಕೂಡ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಶಾಲೆಗಳ ದುರಸ್ಥಿಗೆ ಸೂಚನೆ:
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಶತಮಾನ ಕಂಡ ಶಾಲೆಗಳ ಕಟ್ಟಡಗಳು ದುರಸ್ತಿಯಲ್ಲಿವೆ. ಇವುಗಳನ್ನು ರಿಪೇರಿ ಮಾಡಬೇಕು ಎಂದು ಸುರೇಶ ಅಂಗಡಿ ಸೂಚಿಸಿದರು.  ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿ ಮಾಡಿಸಬೇಕು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ಮಹಾನಗರ ಪಾಲಿಕೆ, ಆರೋಗ್ಯ, ಶಿಕ್ಷಣ, ಹೆಸ್ಕಾಂ, ಬಿ.ಎಸ್.ಎನ್.ಎಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !