ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಯೋಜನೆ ಸಕಾಲಕ್ಕೆ ಪೂರ್ಣಗೊಳಿಸಿ’

ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ;
Last Updated 23 ಫೆಬ್ರುವರಿ 2020, 10:16 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಎರಡು ತಿಂಗಳಲ್ಲಿ ಪುನರಾರಂಭಿಸಬೇಕು. ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳನ್ನು ಸ್ಥಗಿತಗೊಳಿಸದೇ ಸಕಾಲಕ್ಕೆ ಪೂರ್ಣಗೊಳಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಶನಿವಾರ ನಡೆದ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ, ಮಲಪ್ರಭಾ ವಲಯ ಧಾರವಾಡದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಳ್ಳಾರಿ ನಾಲಾ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಸೂಚನೆ ನೀಡಿದರು.
ಇತ್ತೀಚಿನ ಪ್ರವಾಹ ಮತ್ತು ನೆರೆಹಾವಳಿಯಿಂದ ಬಳ್ಳಾರಿ ನಾಲಾದಿಂದ ತೀವ್ರ ಹಾನಿ ಸಂಭವಿಸಿದೆ. ಆದ್ದರಿಂದ ಈ ಯೋಜನೆಯಲ್ಲಿ ಇರಬಹುದಾದ ಲೋಪದೋಷಗಳ ಬಗ್ಗೆ ಮರುಪರಿಶೀಲಿಸಿ’ ಎಂದು ತಿಳಿಸಿದರು.

ಜಂಟಿ ಸಭೆ ಆಯೋಜಿಸಲು ಸೂಚನೆ

‘ಅರಣ್ಯ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳಿಗೆ ತೊಡಕಾಗುತ್ತಿರುವ ವಿಷಯಗಳ ಬಗ್ಗೆ ಚರ್ಚಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಜಂಟಿ ಸಭೆಯನ್ನು ಆಯೋಜಿಸಿ’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು

ಅದೇ ರೀತಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಕೂಡ ಪ್ರತ್ಯೇಕ ಸಭೆ ನಡೆಸುವಂತೆ ತಿಳಿಸಿದರು.

ಭೂಸ್ವಾಧೀನ ಕಚೇರಿ ಸ್ಥಳಾಂತರಕ್ಕೆ ನಿರ್ದೇಶನ

ಸದ್ಯಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಿರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವಂತೆ ಅವರು ತಿಳಿಸಿದರು.

ಸತ್ತಿಗೇರಿ ಏತ ನೀರಾವರಿ ಯೋಜನೆ ಕುರಿತು ಪ್ರಸ್ತಾಪಿಸಿದ ಶಾಸಕ ಆನಂದ ಮಾಮನಿ, ‘ಯೋಜನೆಗೆ ಅಗತ್ಯವಿರುವ 1.90 ಟಿ.ಎಂ.ಸಿ ನೀರನ್ನು ಕುಡಿಯುವ ಮತ್ತು ನೀರಾವರಿಗೆ ಹಂಚಿಕೆ ಮಾಡಲಾಗಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬಹುದು. ಈ ಬಗ್ಗೆ ಸೂಕ್ತ ವರದಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕಾಮಗಾರಿ ಮುಕ್ತಾಯಗೊಂಡಿರುವ ಪ್ರದೇಶದಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಗೊಳಿಸಬೇಕು’ ಎಂದು ಒತ್ತಾಯಿಸಿದರು.

ನಿಗಮದ ಕಾಮಗಾರಿಗಳಿಗಾಗಿಯೇ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದು ಎಂದು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ತಿಳಿಸಿದರು.

ಕೆರೆಗೆ ನೀರು ತುಂಬುವ ಯೋಜನೆ

‘ಕಿತ್ತೂರು- ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ 64 ಕೆರೆ ತುಂಬುವ ಯೋಜನೆಗಳ ಅನುಷ್ಠಾನ ವಿಳಂಬಗೊಳಿಸುತ್ತಿರುವ ಗುತ್ತಿಗೆದಾರರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಮತ್ತು ಮಹಾಂತೇಶ ದೊಡಗೌಡ್ರ ಒತ್ತಾಯಿಸಿದರು.

‘ಇಸ್ರೇಲ್ ಮಾದರಿಯಲ್ಲಿ ಕೊಟ್ಟಲಗಿ ಏತ ನೀರಾವರಿ ಯೋಜನೆ ಕೈಗೊಳ್ಳಬೇಕು. ಸಾಧ್ಯವಾದರೆ ತಜ್ಞರ ತಂಡ ಇಸ್ರೇಲ್ ಗೆ ಭೇಟಿ ನೀಡಿ ಸೂಕ್ತ ಯೋಜನೆ ರೂಪಿಸಬೇಕು’ ಎಂದು ಶಾಸಕ ಮಹೇಶ ಕುಮಠಳ್ಳಿ ಸಲಹೆ ನೀಡಿದರು.

‘ಗಟ್ಟಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಒಂದು ಜಲಾಶಯ ನಿರ್ಮಿಸಿದರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನೀರು ಸಂಗ್ರಹಗೊಳ್ಳುವುದರಿಂದ ಅರಣ್ಯ ಇಲಾಖೆಯ ಅನುಮೋದನೆ ಪಡೆಯುವುದು ಕಷ್ಟವಾಗುತ್ತದೆ’ ಎಂದು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ವಿವರಿಸಿದರು.

ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಿಲ್, ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು. ಜಲಸಂಪನ್ಮೂಲ ಇಲಾಖೆಯ ವಿಶೇಷಾಧಿಕಾರಿ ರುದ್ರಯ್ಯ, ಮಲಪ್ರಭಾ ವಲಯದ ಮುಖ್ಯ ಎಂಜಿನಿಯರ್ ಎಂ.ಕೆ‌.ಪೋತದಾರ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT