ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ವಿಚಾರವಾಗಿ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ: ರಮೇಶ ಜಾರಕಿಹೊಳಿ

Last Updated 1 ಮಾರ್ಚ್ 2021, 14:48 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಆದ್ದರಿಂದ ನ್ಯಾಯಾಲಯದಲ್ಲಿ ನಮಗೆ ಜಯ ಸಿಗುವ ಸಂಪೂರ್ಣ ವಿಶ್ವಾಸವಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕರ್ನಾಟಕವು ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಗೋವಾದಿಂದ ಸುಳ್ಳು ಅಫಿಡವಿಟ್‌ ಸಲ್ಲಿಕೆಯಾಗಿದೆ. ಹೀಗಾಗಿ ನ್ಯಾಯಾಲಯವು ವಾಸ್ತವ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದೆ. ಗೋವಾ ಹೇಳುವ ಪ್ರಕಾರ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಹೀಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕದ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದರು.

‘ಇದು ಅಂತರರಾಜ್ಯ ವ್ಯಾಜ್ಯ ಆಗಿರುವುದರಿಂದ ನಾವು ನೇರವಾಗಿ ನೀರನ್ನು ಹರಿಸಿಕೊಳ್ಳಲು ಬರುವುದಿಲ್ಲ. ಇದಕ್ಕೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗುತ್ತದೆ. ಅನುಮತಿ ನೀಡುವಂತೆ ಪದೇ ಪದೇ ಒತ್ತಡ ಹೇರಲಾಗುತ್ತಿದ್ದು, ಮುಂದಿನ ವಾರ ಮತ್ತೊಮ್ಮೆ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮತ್ತೊಮ್ಮೆ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

‘ಮಹದಾಯಿ ನದಿಯಲ್ಲಿ ನಮಗೆ ಹಂಚಿಕೆ ಆಗಿರುವ ನೀರು ಪಡೆದುಕೊಳ್ಳುವ ಸಂಬಂಧ ಮುಖ್ಯಮಂತ್ರಿ ಹೋದ ಬಜೆಟ್‌ನಲ್ಲಿ ₹ 500 ಕೋಟಿ ನಿಗದಿಪಡಿಸಿದ್ದರು. ಆದರೆ, ಸಿಡಬ್ಲ್ಯುಸಿ ಅನುಮತಿ ದೊರೆಯದಿರುವುದು, ಕೋವಿಡ್–19 ಮೊದಲಾದ ಕಾರಣಗಳಿಂದ ಅನುದಾನ ಬಳಕೆ ಸಾಧ್ಯವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಜಂಟಿ ನಿರೀಕ್ಷಣಾ ಸಮಿತಿಗೆ ನೇಮಕ

ಬೆಳಗಾವಿ: ಕರ್ನಾಟಕವು ಕಳಸಾ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ಅಕ್ರಮವಾಗಿ ನೀರು ಹರಿಸಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸದ ಹಿನ್ನೆಲೆಯಲ್ಲಿ, ಜಂಟಿ ನಿರೀಕ್ಷಣಾ ಸಮಿತಿಗೆ ಕರ್ನಾಟಕದಿಂದ ಮಲಪ್ರಭಾ ಎಡದಂತೆ ಕಾಲುವೆ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೃಷ್ಣೋಜಿರಾವ್ ಅವರನ್ನು ನೇಮಕ ಮಾಡಲಾಗಿದೆ.

ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೂವರು ಸದಸ್ಯರ ಜಂಟಿ ಸಮಿತಿಗೆ ನಿಮ್ಮ ರಾಜ್ಯದ ಪ್ರತಿನಿಧಿಸುವ ಸದಸ್ಯರ ಮಾಹಿತಿ ಒದಗಿಸಿ ಸಮನ್ವಯ ಮೂಡಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹದಾಯಿ ಕಣಿವೆ ಸ್ಥಳಕ್ಕೆ ಶೀಘ್ರದಲ್ಲೇ ಭೇಟಿ ನೀಡಬಹುದು ಎಂಬ ಪ್ರಸ್ತಾವ ಸಲ್ಲಿಸಿದೆ. ಸಮಿತಿಯ ಸಮನ್ವಯಕ್ಕಾಗಿ ಹಿಡಕಲ್‌ ಜಿಆರ್‌ಬಿಸಿ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಆರ್‌.ಬಿ. ದ್ಯಾಮನ್ನವರ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT