ಜನಸ್ಫಂದನಾ ಸಭೆ ರದ್ದು: ಆಕ್ರೋಶ

7

ಜನಸ್ಫಂದನಾ ಸಭೆ ರದ್ದು: ಆಕ್ರೋಶ

Published:
Updated:
Deccan Herald

ಎಂ.ಕೆ.ಹುಬ್ಬಳ್ಳಿ: ಇಲ್ಲಿಗೆ ಸಮೀಪದ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಜನಸ್ಪಂದನಾ ಸಭೆಯು ಅಧಿಕಾರಿಗಳ ಗೈರು ಹಾಜರಿ ಪರಿಣಾಮ ರದ್ದಾಯಿತು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವ ಸಲುವಾಗಿ ಬೆಳಿಗ್ಗೆ 10ಕ್ಕೆ ಜನಸ್ಪಂದನಾ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಗೆ ಬೆರಳೆಣಿಕೆ ಅಧಿಕಾರಿಗಳು ಬಂದಿದ್ದರು. ಸಾಕಷ್ಟು ಸಮಯ ಕಾದು ಕುಳಿತರೂ ಅಧಿಕಾರಿಗಳು ಬಾರದ ಕಾರಣ ಸಭೆ ರದ್ದು ಮಾಡಲಾಯಿತು. 

ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೃಷಿ ಕೆಲಸ ಬಿಟ್ಟು ಬಂದಿದ್ದ ಗ್ರಾಮಸ್ಥರಿಗೆ ಇದರಿಂದ ನಿರಾಸೆಯಾಯಿತು. ಆಗ ಉಪ ತಹಶೀಲ್ದಾರ್‌ ಸೇರಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಸ್ಥಳೀಯ ಗ್ರಾಮಪಂಚಾಯ್ತಿ ಅಧಿಕಾರಿಗಳು, ಆರೋಗ್ಯ ಇಲಾಖೆ, ಕೆಇಬಿ, ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳನ್ನು ಸಭೆ ಕರೆಸುವಂತೆ ಪಟ್ಟು ಹಿಡಿದರು. ಗ್ರಾಮೀಣ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ ಎಂದು ಕಿಡಿಕಾರಿದರು.

ಸರ್ಕಾರದ ಯೋಜನೆಗಳಿಗಾಗಿ ಕಚೇರಿಗಳಿಗೆ ಅಲೆದು ಸುಸ್ತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುವ ನೀರು ಕಲುಷಿತವಾಗಿದೆ. ರಸ್ತೆ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆಗೆ ಬಂದರೆ ಇಲ್ಲಿ ಅಧಿಕಾರಿಗಳೇ ಇಲ್ಲ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಉಪತಹಶೀಲ್ದಾರ್‌ ಬಸವರಾಜ್‌ ಹುಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ತಡವಾಗಿ ಬಂದ ಸಾರಿಗೆ ಇಲಾಖೆಯ ಬೈಲಹೊಂಗಲ ಘಟಕದ ಅಧಿಕಾರಿ ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದರು.

‘ನೀವು ಪತ್ರದಲ್ಲಿ ಮಾತ್ರ ಬಸ್ ಓಡಿಸ್ತಿದ್ದೀರಾ. ಗ್ರಾಮಕ್ಕೆ ಬಸ್ ಸೌಲಭ್ಯ ನಿಂತು ವರ್ಷಗಳೇ ಕಳೆದಿವೆ. ಬಸ್‌ ಪುನರಾರಂಭಿಸಲು ಒತ್ತಾಯಿಸಿ ನೀಡಿದ ಮನವಿಗಳಿಗೆ ಏಕೆ ಸ್ಪಂದಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. 

ಆಗ ಆ ಅಧಿಕಾರಿ, ಸೋಮವಾರದಿಂದಲೇ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರಾದ ಶಾಂತೇಶ ಹುಬ್ಬಳ್ಳಿ, ನಾಗಪ್ಪ ಗಸ್ತಿ, ನೀಲಕಂಠ ಪಾಟೀಲ, ನಾಗನಗೌಡ ಹಿರೇಗೌಡ್ರ, ಬಸವರಾಜ ಚಿಕ್ಕಮಠ, ಚಂದ್ರಯ್ಯ ಹಿರೇಮಠ, ಶಿವನಪ್ಪ ಚಂದರಗಿ, ಸದಾನಂದ ಬೆಲ್ಲದ, ಬಾಳಯ್ಯ ಚಿಕ್ಕಮಠ, ಮಾರುತಿ ಹರಿಜನ, ಬಸಪ್ಪ, ರುದ್ರಗೌಡ ಪಾಟೀಲ, ಮಲ್ಲಪ್ಪ ಢವಳೇಶ, ಶಿದ್ಧಪ್ಪ ಕಮ್ಮಾರ, ಮಡ್ಡಯ್ಯ ಮಾನ್ಯದಮಠ, ಅರ್ಜುನ್‌ ಅಗಸಗಿ, ಬಸವರಾಜ ವಿಭೂತಿ, ಮಾರುತಿ ಹುದಲಿ, ಸಿದ್ಧನಗೌಡ ಪಾಟೀಲ, ರುದ್ರಪ್ಪ ಸಪ್ಪಡ್ಲಿ ಇದ್ದರು.

ಜನಸ್ಪಂದನಾ ಸಭೆ ಎಂಬುದು ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ವೇದಿಕೆ. ಆದರೆ, ಇಂತಹ ಸಭೆಗೆ ಅಧಿಕಾರಿಗಳು ಗೈರಾಗಿದ್ದು ತಪ್ಪು. ಗೈರಾದ ಅಧಿಕಾರಿಗಳಿಗೆ ತಕ್ಷಣ ಷೋಕಾಸ್ ನೊಟೀಸ್‌ ನೀಡಲು ಸೂಚಿಸಲಾಗುವುದು. ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ತಕ್ಷಣ ಜನಸ್ಪಂದನಾ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
- ಮಹಾಂತೇಶ ದೊಡಗೌಡರ, ಶಾಸಕ, ಕಿತ್ತೂರು ವಿಧಾನಸಭಾ ಕ್ಷೇತ್ರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !