ಶುಕ್ರವಾರ, ಫೆಬ್ರವರಿ 26, 2021
29 °C
6 ಸ್ಥಳೀಯ ಸಂಸ್ಥೆಗಳು

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿ: ಕಾಂಗ್ರೆಸ್‌ ಬೆಂಬಲಿಗರ ಪ್ರಾಬಲ್ಯ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರು ಸ್ಥಳೀಯ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮೆರೆದಿದೆ. ಪಕ್ಷದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬಿಜೆಪಿಯವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಮೂರು ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ.

ಸಂಖ್ಯೆಯ ದೃಷ್ಟಿಯಿಂದ ನೋಡುವುದಾದರೆ 94 ಜನ ಕಾಂಗ್ರೆಸ್‌ ಬೆಂಬಲಿಗರು ಆಯ್ಕೆಯಾಗಿದ್ದರೆ, 55 ಜನ ಬಿಜೆಪಿ ಬೆಂಬಲಿಗರು ಇದ್ದಾರೆ. ಜೆಡಿಎಸ್‌ ಬೆಂಬಲಿಗರು 15 ಜನರಿದ್ದು, ಎಂಇಎಸ್‌ ಬೆಂಬಲಿಗರ ಸಂಖ್ಯೆ 5ರಷ್ಟಿದೆ. 9ಜನ ಪಕ್ಷೇತರರೂ ಆಯ್ಕೆಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಗೋಕಾಕ ನಗರಸಭೆ ಹಾಗೂ ಕೊಣ್ಣೂರು ಪುರಸಭೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಅಧಿಕಾರದ ಗದ್ದುಗೆ ಏರಲಿದ್ದಾರೆ. ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್‌ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲಿದೆ.

ಬಿಜೆಪಿ ತಕ್ಕ ಪೈಪೋಟಿ ನೀಡಿದ್ದು, ರಾಮದುರ್ಗ ಹಾಗೂ ಸವದತ್ತಿ ಪುರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಭಾವವಿರುವ ಮೂಡಲಗಿ ಪುರಸಭೆಯಲ್ಲಿ 11 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದೆ. ನಾಲ್ಕು ಜನ ಪಕ್ಷೇತರರು ಆಯ್ಕೆಯಾಗಿದ್ದು, ಇದರಲ್ಲಿ ಕೆಲವರು ಬಿಜೆಪಿ ಬೆಂಬಲಿಗರೂ ಇದ್ದಾರೆ. ಇವರ ಸಹಕಾರ ಪಡೆದು, ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ.

ಜಾರಕಿಹೊಳಿ ಪ್ರಾಬಲ್ಯ ಇನ್ನಷ್ಟು ಗಟ್ಟಿ

ಗೋಕಾಕ ನಗರಸಭೆಯ 31 ವಾರ್ಡ್‌ಗಳ ಪೈಕಿ ಆರು ವಾರ್ಡ್‌ಗಳಲ್ಲಿ ತಮ್ಮ ಬೆಂಬಲಿಗರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದರು. ಇನ್ನುಳಿದ ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ತಮ್ಮ ಬೆಂಬಲಿಗರಲ್ಲಿಯೇ ಒತ್ತಡ ಹೆಚ್ಚಾಗಿದ್ದ ಪರಿಣಾಮ ಚುನಾವಣೆಗೆ ಅನುವು ಮಾಡಿಕೊಟ್ಟರು.

11 ವಾರ್ಡ್‌ಗಳಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ಸದಸ್ಯರ ಪೈಕಿ ಒಬ್ಬರು ಮಾತ್ರ ಜಯಗಳಿಸಿದರು. ಕೊಣ್ಣೂರು ಪುರಸಭೆಯಲ್ಲಿ ಬಿಜೆಪಿಯಿಂದ ಯಾರೊಬ್ಬರೂ ಕಣಕ್ಕಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ಜಾರಕಿಹೊಳಿ ಪ್ರಭಾವ ಕಾಯ್ದುಕೊಂಡಿದ್ದಾರೆ.

ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರ ಪ್ರಭಾವ ಇರುವ ಮೂಡಲಗಿ ಪುರಸಭೆಯಲ್ಲಿ ಜೆಡಿಎಸ್‌ ಆಶ್ಚರ್ಯಕರ ಎನ್ನುವಂತೆ ಪೈಪೋಟಿ ನೀಡಿದೆ. 23 ವಾರ್ಡ್‌ಗಳ ಪೈಕಿ 8 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್‌ಗೆ ಒಂದೂ ಸ್ಥಾನ ಗೆಲ್ಲಲು ಬಿಟ್ಟಿಲ್ಲ. 11 ಸ್ಥಾನ ಪಡೆದಿರುವ ಬಿಜೆಪಿಗೆ ಬಹುಮತಕ್ಕೆ ಇನ್ನೂ ಒಂದು ಸ್ಥಾನದ ಅವಶ್ಯಕತೆ ಇದೆ. ಆಯ್ಕೆಯಾಗಿರುವ 4 ಜನ ಪಕ್ಷೇತರರ ಬೆಂಬಲ ಪಡೆದು, ಅಧಿಕಾರಕ್ಕೇರುವ ಸಾಧ್ಯತೆ ಇದೆ.

ರಾಮದುರ್ಗ ಹಾಗೂ ಸವದತ್ತಿಯಲ್ಲಿ ಸ್ಥಳೀಯ ಶಾಸಕರ ಸಂಘಟಿತ ಯತ್ನದ ಫಲವಾಗಿ ಬಿಜೆಪಿ ಬಹುಮತ ಪಡೆದಿದ್ದು, ಅಧಿಕಾರದ ಗದ್ದುಗೆ ಹಿಡಿಯಲಿದೆ. ಬೈಲಹೊಂಗಲದಲ್ಲಿ ಬಿಜೆಪಿ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಫಲವಾಗಿ ಕಾಂಗ್ರೆಸ್‌ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.

ಖಾನಾಪುರದಲ್ಲಿ ‘ಸಮ್ಮಿಶ್ರ’

ಖಾನಾಪುರ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊರಬಂದಿದ್ದ ರಫೀಕ್‌ ಖಾನಾಪುರೆ ಅವರು ಜೆಡಿಎಸ್‌ನ ನಾಸಿರ ಬಾಗವಾನ ಅವರಿಗೆ ಬೆಂಬಲ ನೀಡಿದ್ದರು. ಇದರ ಫಲವಾಗಿ ಜೆಡಿಎಸ್‌ ಬೆಂಬಲಿತ 7 ಸದಸ್ಯರು ಜಯಗಳಿಸಿದ್ದಾರೆ.

20 ವಾರ್ಡ್‌ಗಳಿರುವ ಇಲ್ಲಿ ಯಾವುದೇ ಪಕ್ಷದ ಬೆಂಬಲಿಗರಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಎಂಇಎಸ್‌ ಬೆಂಬಲಿತ 5, ಬಿಜೆಪಿ ಬೆಂಬಲಿತ 4 ಹಾಗೂ ಕಾಂಗ್ರೆಸ್‌ ಬೆಂಬಲಿತ 4 ಸದಸ್ಯರು ಜಯಗಳಿಸಿದ್ದಾರೆ. ಎರಡು ಪಕ್ಷಗಳ ಬೆಂಬಲಿಗರು ಸೇರಿಕೊಂಡು ‘ಸಮ್ಮಿಶ್ರ’ ಆಡಳಿತ ನಡೆಸುವ ಸಾಧ್ಯತೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು