ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾಂಗ್ರೆಸ್ ನಾಯಕ, ಮಾಜಿ ಸಂಸದ ಎಸ್.ಬಿ. ಸಿದ್ನಾಳ ಇನ್ನಿಲ್ಲ

Last Updated 27 ಏಪ್ರಿಲ್ 2021, 7:44 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹಿರಿಯ ರಾಜಕಾರಣಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್‌.ಬಿ. ಸಿದ್ನಾಳ (85) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು (ಉದ್ಯಮಿಗಳಾದ ಶಶಿಕಾಂತ ಸಿದ್ನಾಳ ಹಾಗೂ ಶಿವಕಾಂತ ಸಿದ್ನಾಳ), ಪುತ್ರಿ, ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಇದ್ದಾರೆ. ಅಂತ್ಯಕ್ರಿಯೆಯು ಬೈಲಹೊಂಗಲ ತಾಲ್ಲೂಕು ಸಾಣಿಕೊಪ್ಪದ ತೋಟದಲ್ಲಿ ಸಂಜೆ ನೆರವೇರಿತು.

ಮೂಲತಃ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದವರಾದ ಅವರು ಇಲ್ಲಿನ ಮಹಾಂತೇಶ ನಗರದಲ್ಲಿ ವಾಸವಿದ್ದರು. ಸತತ 4 ಬಾರಿ ಅಂದರೆ 1980, 1984, 1989 ಹಾಗೂ 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಸಂಸದರಾಗಿದ್ದರು. ಕ್ಷೇತ್ರದಲ್ಲಿ ಮೊದಲ ಹ್ಯಾಟ್ರಿಕ್ ಗೆಲುವಿನ ದಾಖಲೆ ಮಾಡಿದ ಖ್ಯಾತಿಗೆ ಭಾಜನವಾಗಿದ್ದರು.

1980ರ ದಶಕದಲ್ಲಿ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾಗಿದ್ದರು. ಇಂದಿರಾ ಗಾಂಧಿ ಹಾಗೂ ಎಸ್‌. ನಿಜಲಿಂಗಪ್ಪ ಅವರ ಭಿನ್ನಮತದಿಂದ ಪಕ್ಷ ಇಬ್ಭಾಗವಾದಾಗ ಸಿದ್ನಾಳ ಅವರು ಇಂದಿರಾ ಗಾಂಧಿ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಕೇಂದ್ರ ಸಚಿವರಾಗುವ ಅವಕಾಶ ಅವರಿಗೆ ಸಿಗಲಿಲ್ಲ.

ವಯೋಸಹಜ ಕಾರಣದಿಂದಾಗಿ, ಇತ್ತೀಚಿನ ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

ಹೋದ ವರ್ಷ ಸೆ.8ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ‘ಎಐಸಿಸಿ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದ್ದರು. ಕಾಂಗ್ರೆಸ್‌ ವರಿಷ್ಠರಾದ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ದೇಶದಲ್ಲಿ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ. ಆಗ ಮಾತ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಾಧ್ಯವಾಗುತ್ತದೆ. ಆರ್‌ಎಸ್ಎಸ್‌ ಮಾದರಿಯಲ್ಲಿ ಕಾಂಗ್ರೆಸ್‌ನಲ್ಲಿ ಸೇವಾದಳವಿದೆ. ಆದರೆ, ಅದು ಸಕ್ರಿಯವಾಗಿಲ್ಲ. ಅದನ್ನು ಸೋನಿಯಾ ಗಾಂಧಿ ಅವರೇ ಹಾಳು ಮಾಡಿದ್ದಾರೆ. ಕಾಂಗ್ರೆಸ್‌ ಹಿಂದಿನಿಂದಲೂ ಗಾಂಧಿ ಕುಟುಂಬದ ಹಿಡಿತದಲ್ಲಿದೆ. ಈ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT