ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್ ಬಳಿ ₹ 2,500 ಕೋಟಿ ಕೇಳಿದ್ಯಾರು, ಕಳುಹಿಸಿದ್ಯಾರು? –ಸಿದ್ದರಾಮಯ್ಯ

Last Updated 7 ಮೇ 2022, 6:02 IST
ಅಕ್ಷರ ಗಾತ್ರ

ಬೆಳಗಾವಿ: 'ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ₹ 2,500 ಕೋಟಿ ಕೇಳಿದವರಾರು,‌ ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಮುಖ್ಯಮಂತ್ರಿ ಅಥವಾ ಮಂತ್ರಿ ‌ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹೇಳಿದರು.

'ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ ₹ 2,500 ಕೋಟಿ ಕೇಳಿದ್ದರು ಎಂದು ಹೇಳಿದ್ದಾರೆ. ಯಾರು ಕೇಳಿದರು, ಕಳುಹಿಸಿದವರು ಯಾರು? ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‌ಎಷ್ಟು ಕೊಟ್ಟಿದ್ದರು ಎನ್ನುವುದು ತನಿಖೆ ಆಗಬೇಕು' ಎಂದರು.

'ಹಾಲಿ ಮಂತ್ರಿಯಾಗಿರುವವರು ಆ ಸ್ಥಾನಕ್ಕಾಗಿ ಕೊಟ್ಟಿದ್ದೆಷ್ಟು? ಯತ್ನಾಳ್‌ ಬಳಿಗೆ ಕಳುಹಿಸಿದ್ದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷರೋ? ಅಮಿತ್ ಶಾ ಕಳುಹಿಸಿದ್ದರೋ?' ಎಂದು ಕೇಳಿದರು.

'ಯತ್ನಾಳ್ ಹೇಳಿಕೆಯಲ್ಲಿ ಸತ್ಯವಿದೆ ಎಂದುಕೊಂಡಿದ್ದೇನೆ. ಬೊಮ್ಮಾಯಿ‌ ಎಷ್ಟು ಹಣ ಕೊಟ್ಟು ಬಂದರು? ಆ ಹಣ ಹೇಗೆ ಬಂತು ಎನ್ನುವುದು ಜನರಿಗೆ ಗೊತ್ತಾಗಬೇಕಿದೆ' ಎಂದರು.

ಬೆಳಗಾವಿಯಲ್ಲಿಸಿದ್ದರಾಮಯ್ಯ ಪತ್ರಿಕಾಗೋಷ್ಠಿ
ಬೆಳಗಾವಿಯಲ್ಲಿಸಿದ್ದರಾಮಯ್ಯ ಪತ್ರಿಕಾಗೋಷ್ಠಿ

'ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರ. ಇಷ್ಟೊಂದು ಹಗರಣ ಯಾವ ಕಾಲದಲ್ಲೂ‌ ಆಗಿರಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಭ್ರಷ್ಟಾಚಾರ ನೋಡಿರಲಿಲ್ಲ. ನೇಮಕಾತಿ ನಡೆಯುವ ಪ್ರತಿ‌ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಶೇ 40ರಷ್ಟು ಪರ್ಸೆಂಟೇಜ್ ಸರ್ಕಾರವಿದು' ಎಂದು ಆರೋಪಿಸಿದರು.

'ಪ್ರಧಾನಿ ನರೇಂದ್ರ ಮೋದಿ ಅವರು ತಿನ್ನೋಲ್ಲ; ತಿನ್ನಲು‌ ಬಿಡೋಲ್ಲ ಎನ್ನುತ್ತಾರೆ. ಆದರೆ, ಗುತ್ತಿಗೆದಾರರ‌ ಸಂಘ ನೀಡಿದ ದೂರನ್ನು ಗಂಭೀರವಾಗಿ ‌ಪರಿಗಣಿಸುತ್ತಿಲ್ಲ. ಇಲ್ಲಿ ನಡೆದಿರುವ ‌ಭ್ರಷ್ಟಾಚಾರವನ್ನು ಅವರು ಸಹಿಸಿಕೊಂಡಿರುವುದೇಕೆ? ತನಿಖೆ ನಡೆಸಬೇಕಿತ್ತಲ್ಲವೇ? ಇದೆಲ್ಲವನ್ನೂ ನೋಡಿದರೆ ಪ್ರಧಾನಿಯು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ‌ಕೊಡುತ್ತಿದ್ದಾರೆ ಎಂದು ಹೇಳದೆ ವಿಧಿ ಇಲ್ಲ' ಎಂದರು.

'ಪಿಎಸ್‌ಐ ಪರೀಕ್ಷಾ ಅಕ್ರಮದ ಬಗ್ಗೆನ್ಯಾಯಾಂಗ‌ ತನಿಖೆ ನಡೆಸಬೇಕು. ಏನೂ ಅಕ್ರಮ ನಡೆದಿಲ್ಲದಿದ್ದರೆ ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದೇಕೆ? ಮರು ಪರೀಕ್ಷೆಗೆ ಆದೇಶ ಮಾಡಿದ್ದೇಕೆ? ಇದು ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ‌ತೋರಿಸುತ್ತದೆ' ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT