ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪರಿಹಾರ ವಿಚಾರದಲ್ಲಿ ಸರ್ಕಾರ ವಿಫಲ: ಸತೀಶ ಜಾರಕಿಹೊಳಿ ಟೀಕೆ

ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಟೀಕೆ
Last Updated 18 ಅಕ್ಟೋಬರ್ 2020, 14:41 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಜಿಲ್ಲಾಡಳಿತಗಳ ಬಳಿ ಹಣವಿಲ್ಲ. ಸಂತ್ರಸ್ತರಿಗೆ ನೆರವು ಕಲ್ಪಿಸಿಲ್ಲ. ಇದು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿನ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಕ್ಯಾಂಟೀನ್ ಉದ್ಘಾಟನೆ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಇಲ್ಲಿ ಅತಿ ಹೆಚ್ಚು ಸಚಿವರಿದ್ದರೂ ಯಾರೂ ಜನರ ಕೈಗೆ ಸಿಗುತ್ತಿಲ್ಲ. ನನಗೆ ವಯಸ್ಸಾಗಿದೆ. ಹೀಗಾಗಿ, ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಆದರೆ, ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇದು ಅವರ ವೈಫಲ್ಯ. ಈ ಸರ್ಕಾರದ ವಿರುದ್ಧ ಜನ ಸಿಡಿದೇಳಲಿದ್ದಾರೆ. ಒಂದೆಡೆ ರಾಜ್ಯ ಸರ್ಕಾರ ಮಲಗಿದ್ದರೆ, ಇನ್ನೊಂದೆಡೆ ಕೇಂದ್ರ ಅನುದಾನ ನೀಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಸರ್ಕಾರದ ಮೇಲಿನ ಸಿಟ್ಟನ್ನು ಜನರು ಉಪ ಚುನಾವಣೆಗಳಲ್ಲಿ ತೋರಿಸಲಿದ್ದಾರೆ’ ಎಂದರು.

‘ಕಾರ್ಯಕರ್ತರು ಹಾಗೂ ಬಡ ಜನರಿಗೆ ಅನಕೂಲವಾಗಲೆಂದು ಕಡಿಮೆ ದರದಲ್ಲಿ ಗುಣಮಟ್ಟದ ಊಟ ಮತ್ತು ಉಪಾಹಾರ ಒದಗಿಸುವ ಕ್ಯಾಂಟೀನ್ ಆರಂಭಿಸಿದ್ದೇವೆ’ ಎಂದು ತಿಳಿಸಿದರು.

ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕ ಅಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಮುಖಂಡರು ಇದ್ದರು.

‘ಪೂಜಾ ಗಾಂಧಿ ಗೆಲ್ಲಿಸಿದರಾ?’
‘ಆರ್.ಆರ್‌. ನಗರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಖಚಿತವಾಗಿದೆ. ಅವು ಕಾಂಗ್ರೆಸ್ ಪಾಲಾಗಲಿವೆ’ ಎಂದು ಸತೀಶ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಚಲನಚಿತ್ರ ನಟರಿಂದ ಪ್ರಚಾರ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರಚಾರ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ, ಸೆಲಬ್ರಿಟಿಗಳನ್ನು ನೋಡಿ ಜನ ಮತ ಹಾಕುವುದಿಲ್ಲ. ಚಲನಚಿತ್ರ ನಟಿ ಪೂಜಾ ಗಾಂಧಿ ರಾಯಚೂರಿನಲ್ಲಿ ಸ್ಪರ್ಧಿಸಿದ್ದರು. ಮತದಾರರು ಅವರನ್ನು ಗೆಲ್ಲಿಸಿದರಾ?’ ಎಂದು ಕೇಳಿದರು.

‘ನನ್ನ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಅವರಿಗೆ ರಾಜಕೀಯ ತರಬೇತಿ ಅಗತ್ಯವಿದೆ. ಇಬ್ಬರೂ ಘಟಪ್ರಭಾದಲ್ಲಿರುವ ಸೇವಾದಳ ಕೇಂದ್ರದಲ್ಲಿ ತರಬೇತಿ ಪಡೆಯಲಿದ್ದಾರೆ. ಬಳಿಕ ರಾಜಕೀಯ ಪ್ರವೇಶಿಸಲಿದ್ದಾರೆ’ ಎಂದು ತಿಳಿಸಿದರು.

ಮಹಿಳಾ ದನಿ ಅಡಗಿಸಲಾಗುವುದಿಲ್ಲ: ಲಕ್ಷ್ಮಿ
‘ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ತೊಂದರೆ ಕೊಡಲು ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ. ಮಹಿಳಾ ದನಿ ಅಡಗಿಸಲು ಸಾಧ್ಯವಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಕೊರೊನಾ ಹಾಗೂ ಪ್ರವಾಹದಿಂದ ಜನರು ಬಹಳ ತೊಂದರೆಯಲ್ಲಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಪ್ರಧಾನಿ ₹ 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಪ್ರಕಟಿಸಿದರು. ಅದರಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಸರ್ಕಾರವೂ ಹೇಳುತ್ತಿಲ್ಲ’ ಎಂದು ಟೀಕಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಯಾರು ಅಭ್ಯರ್ಥಿಯಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

‘ಡಿಸೆಂಬರ್‌ನಲ್ಲಿ ನಡೆಯಲಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹೋದರ, ಪುತ್ರ ಸೇರಿದಂತೆ ಕುಟುಂಬದ ಯಾರೊಬ್ಬರೂ ಸ್ಪರ್ಧಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

***

ನನ್ನ ಕ್ಷೇತ್ರಕ್ಕೆ ಅನುದಾನ ತರಲಾಗದಂತೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇದೆಲ್ಲವೂ ರಾಜಕೀಯ. ಎಲ್ಲವನ್ನೂ ಮೆಟ್ಟಿ ಮುನ್ನಡೆಯುತ್ತೇನೆ.
–ಲಕ್ಷ್ಮಿ ಹೆಬ್ಬಾಳಕರ, ಶಾಸಕಿ, ಗ್ರಾಮೀಣ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT