ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮುಕ್ತ, ನ್ಯಾಯಸಮ್ಮತ ಪರಿಷತ್ ಚುನಾವಣೆಗೆ ಆಗ್ರಹಿಸಿ ಕಾಂಗ್ರೆಸ್‌ ಮನವಿ

Last Updated 29 ನವೆಂಬರ್ 2021, 12:26 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಡಿ.10ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯನ್ನು ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕು. ಅಕ್ರಮಕ್ಕೆ ಅವಕಾಶ ಕೊಡಬಾರದು’ ಎಂದು ಒತ್ತಾಯಿಸಿ ಕಾಂಗ್ರೆಸ್ ನಿಯೋಗವು ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.

ಪಕ್ಷದ ಚುನಾವಣಾ ವೀಕ್ಷಕರಾದ ಎನ್.ಎ. ಹ್ಯಾರೀಸ್ ಮತ್ತು ಐವಾನ್ ಡಿಸೋಜಾ, ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ನಗರ ಘಟಕದ ಅಧ್ಯಕ್ಷ ರಾಜು ಸೇಠ್‌ ಚುನಾವಣಾಧಿಕಾರಿ ಭೇಟಿಯಾಗಿ ಚರ್ಚಿಸಿದರು.

‘ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ತಮ್ಮ ಗುಂಪಿನ ಅಭ್ಯರ್ಥಿಯನ್ನಾಗಿ ಲಖನ್‌ ಜಾರಕಿಹೊಳಿ ಕಣಕ್ಕಿಳಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಮೊದಲ ದಿನದಿಂದಲೂ ಅವರು ಕಾಂಗ್ರೆಸ್‌ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಆಕ್ರಮಣ ಮಾಡುತ್ತಲೇ ಬಂದಿದ್ದಾರೆ. ಚುನಾವಣಾ ಸಿಬ್ಬಂದಿಯು ಆಡಳಿತ ಪಕ್ಷದ ಅಭ್ಯರ್ಥಿ ಹಾಗೂ ಆ ಪಕ್ಷ ಬೆಂಬಲಿತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಇದು, ಗೋಕಾಕ, ಅರಭಾವಿ ಹಾಗೂ ರಾಯಬಾಗ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಪತ್ರದಲ್ಲಿ ದೂರಿದ್ದಾರೆ.

‘ಇತ್ತ ಗಮನಹರಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಬೇಕು’ ಎಂದು ಕೋರಿದ್ದಾರೆ.

‘ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯಬೇಕು. ಯಾವುದೇ ರೀತಿ ಅಕ್ರಮ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಮನವಿ ಸಲ್ಲಿಸಿದ್ದೇವೆ. 2–3 ಮತಕ್ಷೇತ್ರಗಳಲ್ಲಿ ಬೋಗಸ್ ಮತದಾನ ಮಾಡುತ್ತಾರೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಘಟನೆಗಳು ಮರುಕಳಿಸಬಾರದು. ಮತಗಟ್ಟೆಗಳಲ್ಲಿ ವಿಡಿಯೊ ವ್ಯವಸ್ಥೆ ಮಾಡಬೇಕು. ಸಾಧ್ಯವಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ನೇರಪ್ರಸಾರ ಮಾಡಬೇಕು’ ಎಂದು ಐವಾನ್ ಡಿಸೋಜಾ ಒತ್ತಾಯಿಸಿದರು.

‘ರಮೇಶ ಜಾರಕಿಹೊಳಿ ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಬೇಸರದಿಂದ ಪಕ್ಷೇತರ ಅಭ್ಯರ್ಥಿ ನಿಲ್ಲಿಸಿದ್ದಾರೆ. ವಾತಾವರಣ ನಮ್ಮ ಪರವಿದೆ. ಸಮಸ್ಯೆ ಇರುವುದು ಬಿಜೆಪಿಯವರಿಗೆ. ಅಲ್ಲಿ ಒಳಗೆ ಬೇಕಾದಷ್ಟು ರಾಜಕೀಯವಿದೆ. ರಮೇಶ ಮುಂದೇನು ಮಾಡುತ್ತಾರೆ ನೋಡಬೇಕು’ ಎಂದು ಹ್ಯಾರಿಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT