ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಸಮಾಜ ಒಗ್ಗೂಡಿಸಿಕೊಂಡು ಹೋಗುತ್ತೇವೆ: ಲಕ್ಷ್ಮಿ ಹೆಬ್ಬಾಳಕರ

Last Updated 16 ಜುಲೈ 2021, 13:53 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್ ಪಕ್ಷ ಬಸವಾದಿ ಶರಣರ ತತ್ವಗಳ ಅಡಿಪಾಯ ಮತ್ತು ಜಾತ್ಯತೀತ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ಸಮಾಜದವರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು ಎನ್ನುವುದು ನಮ್ಮ ಧ್ಯೇಯ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮಾಜವೂ ಪಕ್ಷದ ಜೊತೆ ಬರುವಂತೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಶಾಸಕಿಯೂ ಆಗಿರುವ ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿನ ಶಿವಬಸವನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಶುಕ್ರವಾರ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಪಕ್ಷದಲ್ಲಿ ವಿಧಾನವಿದೆ. ಚುನಾವಣೆಯಲ್ಲಿ 124 ಸ್ಥಾನಗಳಲ್ಲಿ ಗೆದ್ದು ಬರಬೇಕು. ಬಳಿಕ ಶಾಸಕ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಹೈಕಮಾಂಡ್ ಜೊತೆಗೂಡಿ ಎಲ್ಲವೂ ನಿರ್ಧಾರವಾಗುತ್ತದೆ. ಇಷ್ಟು ಬೇಗ ಆ ಬಗ್ಗೆ ಚರ್ಚೆ ಉಚಿತವಲ್ಲ’ ಎಂದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲಾ ಲಿಂಗಾಯತರು ಸೇರಿದಂತೆ ಎಲ್ಲ ಸಮಾಜದ ಧ್ವನಿಯಾಗಿ ಕೆಲಸ ಮಾಡಿದೆ. ಲಿಂಗಾಯತ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಕೂಗು ನಮಗಂತೂ ಕೇಳಿಸುತ್ತಿಲ್ಲ. ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ನನ್ನನ್ನು ಸೇರಿ ಹಲವರನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿ ಜವಾಬ್ದಾರಿ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ನಾಯಕರಲ್ಲಿ ಕಾಲೆಳೆಯುವುದು ನಿಲ್ಲಬೇಕು’ ಎಂಬ ಮುಖಂಡ ಪ್ರಕಾಶ ಹುಕ್ಕೇರಿ ಹೇಳಿಕೆಗೆ, ‘ಅವರು ಹಿರಿಯ ಮುತ್ಸದ್ದಿ. ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸುವುದಿಲ್ಲ. ಅವರ ಮನದಾಳದ ಮಾತುಗಳನ್ನು ನೀವೇ ಮತ್ತೊಮ್ಮೆ ಕೇಳಿ ಸ್ಪಷ್ಪಪಡಿಸಿಕೊಳ್ಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT