ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಹಕ್ಕು: ಶಾಸಕರಿಗೆ ಇಚ್ಚಾಶಕ್ತಿಯ ಕೊರತೆ

ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಚಾಟಿ
Last Updated 11 ಫೆಬ್ರುವರಿ 2018, 13:08 IST
ಅಕ್ಷರ ಗಾತ್ರ

ಶಿವಮೊಗ್ಗ: ಶಾಸಕರ ಇಚ್ಛಾಶಕ್ತಿಯ ಕೊರತೆ, ಅಧಿಕಾರಿಗಳ ಮಂದಗತಿ ಧೋರಣೆ ಫಲವಾಗಿ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಭೂಹಕ್ಕು ದೊರಕಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭೂಹಕ್ಕಿನ ಹೋರಾಟದ ಮೂಲಕವೇ ರಾಜಕೀಯ ಪ್ರವೇಶಿಸಿದ್ದೆ. ಅಂದು ಸಮಾಜವಾದಿ ಚಿಂತಕರ ಜತೆ ಸೇರಿ ಭೂಮಾಲೀಕರ ವಿರುದ್ಧ ಹೋರಾಟ ನಡೆಸಿದ ಫಲವಾಗಿ ಅಂದು ಹಲವು ಭೂ ಸುಧರಣಾ ಕಾಯ್ದೆಗಳು ಜಾರಿಗೆ ಬಂದಿದ್ದವು. ಗೇಣಿದಾರರು ಭೂಹಕ್ಕು ಹೊಂದಲು ಸಾಧ್ಯವಾಯಿತು. ಈಗ ಭೂರಹಿತರಿಗೆ, ವಸತಿಹೀನರಿಗೆ ಭೂ ಹಕ್ಕು ದೊರಕಿಸಲು ಆಂದೋನದ ರೀತಿ ಕಾರ್ಯ ಸಾಗಿದೆ. ಅಧಿಕಾರಿಗಳು, ಶಾಸಕರಿಂದ ನಿರೀಕ್ಷಿತ ಸಹಕಾರ ದೊರಕಿದ್ದರೆ ಇನ್ನಷ್ಟು ವೇಗ ದೊರಕುತ್ತಿತ್ತು‘ ಎಂದು ಅಭಿಪ್ರಾಯಪಟ್ಟರು.

ಕಂದಾಯ ಸಚಿವನಾದ ನಂತರ ಬಗರ್‌ಹುಕುಂ ಅರ್ಜಿದಾರರಿಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೇನೆ. ಈವರೆಗೂ ರಾಜ್ಯದಲ್ಲಿ  6 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ 3 ಲಕ್ಷ ಅರ್ಜಿ ಇತ್ಯರ್ಥ ಮಾಡಲಾಗಿದೆ. 2 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ ಎಂದು ವಿವರ ನೀಡಿದರು.

ಕಾಂಗ್ರೆಸ್ ಸರ್ಕಾರ ಹಲವು ಬಾರಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ ಪರಿಣಾಮ ಬಡವರಿಗೆ, ಅರಣ್ಯವಾಸಿಗಳಿಗೆ, ದಲಿತ ಮತ್ತು ಹಿಂದುಳಿದ ವರ್ಷದ ಜನರಿಗೆ ಸಾಗುವಳಿ ಪತ್ರ ನೀಡಲು ಸಾಧ್ಯವಾಗಿದೆ. ಇರುವ ಕಾನೂನು ಬಳಸಿಕೊಂಡರೆ ಎಲ್ಲ ಅರಣ್ಯನಿವಾಸಿಗಳಿಗೂ ಹಕ್ಕುಪತ್ರ ನೀಡಬಹುದು. ಆದರೆ, ಬದ್ಧತೆ ಕೊರತೆಯಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದರು.

‘ಅಂದು ಉಳುವವನೇ ಭೂಮಿ ಒಡೆಯ. ಇಂದು ವಾಸಿಸುವವನೇ ಮನೆಯೊಡೆಯ. ಸರ್ಕಾರಿ ಹಾಗೂ ಖಾಸಗಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುವ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಕಾನೂನು ರೂಪಿಸಲಾಗಿದೆ. 94ಸಿ ಮತ್ತು 94ಸಿಸಿ ಅಡಿ ಇದಕ್ಕೆ ಅವಕಾಶವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಬಗರ್‌ಹುಕುಂ ಅರ್ಜಿಗಳು ಸಲ್ಲಿಕೆಯಾಗಿವೆ. ಕಾಲಕಾಲಕ್ಕೆ ಸಮಿತಿ ಸಭೆ ನಡೆಸಿ ಅರ್ಜಿ ಇತ್ಯರ್ಥಗೊಳಿಸಬೇಕು’ ಎಂದು ಸಲಹೆ ನೀಡಿದರು.

‘3 ವರ್ಷ ವಿಧಾನಸಭಾ ಅಧ್ಯಕ್ಷನಾಗಿ ಕೆಲಸ ಮಾಡಿದಾಗ ಯಾವ ಬಂಧವೂ ಇರಲಿಲ್ಲ. ರಾಜಕೀಯದಲ್ಲಿ ಹೆಚ್ಚು ಆಸಕ್ತಿ ತೋರಲಿಲ್ಲ. ಸಚಿವನಾದ ನಂತರ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಸಾಗರ ಕ್ಷೇತ್ರಕ್ಕೆ ಸುಮಾರು ₹ 279 ಕೋಟಿ ಅನುದಾನ ನೀಡಲಾಗಿದೆ. ವಸತಿ ಶಾಲೆಗಳು, ಮಿನಿ ವಿಧಾನಸೌಧ, ಪದವಿ ಕಾಲೇಜುಗಳು, ರಸ್ತೆ ಕಾಮಗಾರಿ ಕುಡಿಯುವ ನೀರು, ಸಣ್ಣ ನೀರಾವರಿ ಯೋಜನೆ, ನಗರೋತ್ಥಾನ, ಪ್ರವಾಸೋದ್ಯಮ, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಒಳಚರಂಡಿ, ಜೋಗ ಜಲಪಾತ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಎರಡು ವರ್ಷದ ಅವಧಿಯಲ್ಲಿ ನಿರ್ವಹಿಸಲಾಗಿದೆ ಎಂದು ವಿವರ ನೀಡಿದರು.
***
6 ಲಕ್ಷ
ರಾಜ್ಯದಲ್ಲಿ ಸಲ್ಲಿಕೆಯಾದ ಬಗರ್‌ಹುಕುಂ ಅರ್ಜಿಗಳು

3 ಲಕ್ಷ
ಇತ್ಯರ್ಥ ಮಾಡಲಾದ ಅರ್ಜಿಗಳು,

80 ಸಾವಿರ
ಜಿಲ್ಲೆಯಲ್ಲಿ ಸಲ್ಲಿಕೆಯಾದ ಬಗರ್‌ಹುಕುಂ ಅರ್ಜಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT