ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದ್ವೇಷ ರಾಜಕಾರಣದ ವಿರುದ್ಧ ನಿರಂತರ ಹೋರಾಟ: ಎಂ.ಬಿ. ಪಾಟೀಲ

Last Updated 22 ಜುಲೈ 2022, 9:26 IST
ಅಕ್ಷರ ಗಾತ್ರ

ಬೆಳಗಾವಿ:‌ ‘ಪ್ರಧಾನಿ ಮೋದಿ ಅವರು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದವರ ಮೇಲೆ ದ್ವೇಷ ಸಾಧಿಸುವ ಗುರಿ ಹೊಂದಿದ್ದಾರೆ. ಇದರ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದೇವೆ. ಈಗ ಜಿಲ್ಲೆಗಳಲ್ಲಿ ಮುಖಂಡರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

‘ನೆಹರೂ ಹಾಗೂ ಗಾಂಧಿ ಕುಟುಂಬಕ್ಕೆ ಭವ್ಯವಾದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಈ ಎರಡೂ ಕುಟುಂಬಗಳು ಬಹಳಷ್ಟು ತ್ಯಾಗ ಮಾಡಿವೆ. ‘ನ್ಯಾಷನಲ್‌ ಹೆರಾಲ್ಡ್’ ಪ್ರಕರಣದಲ್ಲಿ ಎಫ್‌ಐಆರ್ ಕೂಡ ಆಗಿಲ್ಲ. ಎಲ್ಲಿಯೂ ಹಣದ ವರ್ಗಾವಣೆ ಆಗಿಲ್ಲ. ಈ ವಿಚಾರ ಬಿಜೆಪಿಯವರಿಗೂ ಗೊತ್ತು. ಆದರೆ, ವಿರೋಧ ಪಕ್ಷದವರಿಗೆ ತೊಂದರೆ ಕೊಡಬೇಕು, ಸಂವಿಧಾನ ಅಳಿಸಿ ಹಾಕಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ’ ಎಂದೂ ಕಿಡಿ ಕಾರಿದರು.

‘ರಾಜ್ಯದ ಗುತ್ತಿಗೆದಾರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದರು. ಕರ್ನಾಟಕದಲ್ಲಿ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಸರ್ಕಾರವಿದೆ ಎಂದು ದೂರಿದರು. ಇದಾಗಿ ಒಂದು ವರ್ಷ ಕಳೆದರೂ ಪ್ರಧಾನಿ ತುಟಿ ಬಿಚ್ಚಿಲ್ಲ. ಬಿಜೆಪಿಯವರ ಮೇಲೆ ಐಟಿ, ಸಿಬಿಐ ದಾಳಿ ನಡೆಯುತ್ತಿಲ್ಲ. ಆದರೆ, ಕಾಂಗ್ರೆಸ್‌ ನಾಯಕರನ್ನು ಮಾತ್ರ ಗುರಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಿರ್ನಾಮವಾದರೆ ತಾವೇ ಸರ್ವಾಧಿಕಾರಿ ಆಗಿ ಮೆರೆಯಬಹುದು ಎಂಬ ದುರುದ್ದೇಶ ಮೋದಿ ಅವರಿಗೆ ಇದೆ’ ಎಂದೂ ಆರೋಪಿಸಿದರು.

‘ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಇಂಥದ್ದಕ್ಕೆ ಹೆದರುವುದಿಲ್ಲ. ನಾವೆಲ್ಲ ಒಗ್ಗಟ್ಟಿನಿಂದ ಅವರ ಬೆನ್ನಿಗೆ ನಿಂತಿದ್ದೇವೆ. ಹೋರಾಟ ಮುಂದುವರಿಯಲಿದೆ’ ಎಂದರು.

‘ಮೋದಿ ಸರ್ಕಾರ ಜನರನ್ನು ಸಾಯಲು ಕೂಡ ಬಿಡುತ್ತಿಲ್ಲ. ಸತ್ತವರನ್ನು ಸುಡುವುದಕ್ಕೂ ಶೇ 18ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಈ ಪುಣ್ಯಾತ್ಮರು ಹೇಳಿದ ಅಚ್ಛೆ ದಿನಗಳು ಇವು’ ಎಂದೂ ವ್ಯಂಗ್ಯ ಮಾಡಿದರು.

‘ಈಗ ಶ್ರೀಲಂಕಾಗೆ ಬಂದ ‍ಪರಿಸ್ಥಿತಿ ಮುಂದೆ ಭಾರತಕ್ಕೂ ಬರಬಾರದು. ಅಂದಾನಿ, ಅದಾನಿ ಎಂಬ ಇಬ್ಬರು ಶ್ರೀಮಂತರ ಮೇಲೆ ಮೋದಿ ಅವರು ದೇಶ ನಡೆಸುತ್ತಿದ್ದಾರೆ. ಆ ಇಬ್ಬರೂ ಕುಬೇರರಾಗುತ್ತ ಸಾಗಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಗ್ಗುತ್ತ ಸಾಗಿದೆ. ಮೋದಿ ಅವರ ಸಹವಾಸವೇ ಬೇಡ ಎನ್ನುವ ಮಟ್ಟಿಗೆ ದೇಶದ ಜನರಿಗೆ ಇವರು ಬೇಸರವಾಗಿದ್ದಾರೆ. ಮುಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಬರಲಿದೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

140 ಸೀಟ್ ಟಾರ್ಗೆಟ್‌

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 140 ಸೀಟ್‌ ಗೆಲ್ಲಿಸಬೇಕು ಎಂದು ರಾಹುಲ್‌ ಗಾಂಧಿ ಅವರು ಗುರಿ ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಪೂರ್ಣ ಪ್ರಮಾಣದ ಸರ್ಕಾರ ತರಲು ಸಿದ್ಧತೆ ನಡೆಸಿದ್ದೇವೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

‘ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಒಂದು ಮೈಲಿಗಲ್ಲು. ಗ್ರಾಮೀಣ ಪ್ರದೇಶದಿಂದ ಬಂದ ಅವರು ಪಕ್ಷಾತೀತ ನಾಯಕರಾಗಿ ಬೆಳೆದಿದ್ದಾರೆ’ ಎಂದರು.

‘ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರ ಸಾವಿನ ವಿಚಾರದಲ್ಲಿ ಶಾಸಕ ಕೆ.ಎಸ್‌. ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಪ್ರಕರಣದಲ್ಲಿ ಮುಖ್ಯವಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣವನ್ನೇ ದಾಖಲಿಸಿಲ್ಲ. ಹೀಗಾಗಿ, ಈಶ್ವರಪ್ಪ ಅವರು ಮತ್ತೆ ಮಂತ್ರಿ ಆಗುವುದರಲ್ಲಿ ಸಂದೇಹವಿಲ್ಲ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಈ ಸರ್ಕಾರವನ್ನು ಜನ ಕಿತ್ತೊಗೆಯಲಿದ್ದಾರೆ’ ಎಂದೂ ದೂರಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ವಿನಯ ಕುಲಕರ್ಣಿ, ಫಿರೋಜ್‌ ಸೇಠ್‌ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT