ಭಾನುವಾರ, ಏಪ್ರಿಲ್ 5, 2020
19 °C
ವಿವಿಧ ಸಮಾಜದ ಮುಖಂಡರ ಸಭೆ ನಡೆಸಿದ ಜಿಲ್ಲಾಧಿಕಾರಿ

ಸಾಮೂಹಿಕ ಪ್ರಾರ್ಥನೆ: ನಿರ್ಬಂಧಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೊರೊನಾ ವೈರಾಣು ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಎಲ್ಲ ಧರ್ಮೀಯರೂ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪೂಜೆ ಅಥವಾ ಪ್ರಾರ್ಥನೆ ಕಾರ್ಯಕ್ರಮಗಳ ಮೇಲೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಕೋರಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟ್ರಸ್ಟ್ ಮತ್ತು ಆಡಳಿತ ಮಂಡಳಿಗಳು ದೇವಸ್ಥಾನಕ್ಕೆ ಬರುವ ಭಕ್ತರ ಮನವೊಲಿಸುವ ಮೂಲಕ ಜನದಟ್ಟಣೆ ನಿಯಂತ್ರಿಸಬೇಕು. ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು. ಸರ್ಕಾರದ ಜೊತೆ ಕೈಜೋಡಿಸಬೇಕು. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಕಾನೂನು ಮೂಲಕ ನಿಯಂತ್ರಣಕ್ಕೆ ಮುಂದಾಗಬೇಕಾಗುತ್ತದೆ’ ಎಂದು ತಿಳಿಸಿದರು.

‌‌‘ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಟೋಲ್ ಪ್ಲಾಜಾಗಳಲ್ಲಿ ಆರೋಗ್ಯ ತಪಾಸಣಾ ತಂಡಗಳನ್ನು ನಿಯೋಜಿಸಿ, ನಿಗಾ ವಹಿಸಲಾಗಿದೆ. ವಿದೇಶದಿಂದ ಬರುವವರ ಬಗ್ಗೆ ಕೇಂದ್ರೀಕೃತ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಾಗ್ಯೂ ಅಂತಹ ವ್ಯಕ್ತಿಗಳು ಜಿಲ್ಲೆಗೆ ಬಂದಾಗ ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಬೇಕು. ಇದರಿಂದ ವೈರಾಣು ಹರಡುವುದನ್ನು ತಡೆಗಟ್ಟುವುದು ಸುಲಭವಾಗುತ್ತದೆ’ ಎಂದು ಹೇಳಿದರು.

‘ಜನದಟ್ಟಣೆ ನಿರ್ಬಂಧಿಸಲು ಸರ್ಕಾರ ನೀಡಿರುವ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ವಿಧಿಸಲಾಗಿದೆಯೇ ಹೊರತು, ಸ್ವಾತಂತ್ರ್ಯಹರಣಕ್ಕಲ್ಲ. ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಎಲ್ಲರೂ ಸಹಕಾರ ಕೊಡಬೇಕು’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಅನವಶ್ಯವಾಗಿ ಜನದಟ್ಟಣೆ ಉಂಟು ಮಾಡದೆ ಪರಸ್ಪರ ಸೂಕ್ತ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವೈರಾಣುವಿನಿಂದ ರಕ್ಷಿಸಿಕೊಳ್ಳಬೇಕು. ಕೆಮ್ಮು ಇರುವವರು ಮಾತ್ರ ಮಾಸ್ಕ್ ಧರಿಸಬೇಕು. ‌ಒಂದು ಮಾಸ್ಕ್ ಅನ್ನು ಏಳೆಂಟು ಗಂಟೆ ಮಾತ್ರ ಧರಿಸಬೇಕು. ಹೆಚ್ಚಿನ ಅವಧಿಗೆ ಧರಿಸಿದರೆ ಅದರಿಂದಲೇ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಸಾರ್ವಜನಿಕರು ಸಹಾಯವಾಣಿ 104 ಅಥವಾ 0831–2524284 ಸಂಪರ್ಕಿಸಿ ಸಹಾಯ, ಮಾಹಿತಿ ಪಡೆಯಬಹುದು’ ಎಂದು ತಿಳಿಸಿದರು.

‘ಸಾಮೂಹಿಕವಾಗಿ ಬರುವ ಬದಲಿಗೆ ಮನೆಗಳಲ್ಲೇ ಪ್ರಾರ್ಥನೆ ಮಾಡುವ ಬಗ್ಗೆ ಜಮಾತ್‌ಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ವೈರಾಣು ಹರಡುವಿಕೆ ತಡೆಗಟ್ಟಲು ಸರ್ಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಬೆಂಬಲ ನೀಡಲಾಗುವುದು’ ಎಂದು ಮುಖಂಡರು ತಿಳಿಸಿದರು.

ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋದಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಾ.ಬಿ.ಎನ್. ತುಕ್ಕಾರ ಇದ್ದರು.

ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ 41 ಮಂದಿ ಮೇಲೆ ‘ನಿಗಾ’

‘54 ಜನರು ವಿದೇಶದಿಂದ ಜಿಲ್ಲೆಗೆ ಬಂದಿದ್ದಾರೆ. ಅವರಲ್ಲಿ ಮೂವರು 28 ದಿನಗಳ, 8 ಮಂದಿ 14 ದಿನಗಳ ನಿಗಾ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. 41 ಜನರು ಆರಂಭಿಕ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಎಲ್ಲರಿಗೂ ಅವರವರ ಮನೆಯಲ್ಲಿಯೇ ಇದ್ದಾರೆ. ಅಗತ್ಯ ಇರುವವರನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕರೆತರಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಮ್ಸ್, ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೊಲೇಷನ್ ವಾರ್ಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು