ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೈನ್ಮೆಂಟ್ ಝೋನ್: ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ

ಸೋಂಕು ಹರಡದಂತೆ ತಡೆಯಲು ಸೂಚನೆ
Last Updated 10 ಏಪ್ರಿಲ್ 2020, 10:34 IST
ಅಕ್ಷರ ಗಾತ್ರ

ಬೆಳಗಾವಿ: ‘ಕೊರೊನಾ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿ ಸದ್ಯಕ್ಕೆ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಎಂಥದ್ದೆ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ಇನ್ನೊಬ್ಬರೊಂದಿಗೆ ಬೆರೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಾಕೀತು ಮಾಡಿದರು.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಒಂದೇ ಕುಟುಂಬದ ಮೂವರು ಸದಸ್ಯರಲ್ಲಿ ಸೋಂಕು ಕಂಡುಬಂದಿರುವುದರಿಂದ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು’ ಎಂದು ತಿಳಿಸಿದರು.

‘ಈಗಾಗಲೇ ಬಿಡುಗಡೆ ಆಗಿರುವ ಪಡಿತರ ಆಹಾರಧಾನ್ಯವನ್ನು ಶನಿವಾರ ಸಂಜೆಯೊಳಗೆ ಸಂಪೂರ್ಣವಾಗಿ ವಿತರಿಸಬೇಕು. ತಾಲ್ಲೂಕು ಮತ್ತಿತರ ಕೇಂದ್ರಗಳಲ್ಲಿ ಜನಸಂದಣಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇನ್ನಷ್ಟು ತಿಳಿವಳಿಕೆ ಮೂಡಿಸಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಫಾಗಿಂಗ್, ಪೌಡರ್ ಸಿಂಪಡಣೆ ಕಡ್ಡಾಯವಾಗಿ ಮಾಡಬೇಕು’ ಎಂದು ಸೂಚಿಸಿದರು.

‘ಆರೋಗ್ಯ ಇಲಾಖೆ ಅಧಿಕಾರಿಗಳು, ಕಂಟೈನ್ಮೆಂಟ್ ಝೋನ್‌ಗಳಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಪರಿಶೀಲಿಸಬೇಕು. ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿಕೊಂಡು ಪ್ರತಿ ಮನೆ‌ ಮನೆಗಳಿಗೆ ಭೇಟಿ ಸೋಂಕು ಲಕ್ಷಣಗಳ ಬಗ್ಗೆ ನಿರಂತರವಾಗಿ ಪರಿಶೀಲಿಸಿ ವರದಿ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ ನಿರ್ದೇಶನ ನೀಡಿದರು.

‘ಆರೋಗ್ಯ ಮತ್ತಿತರ ಇಲಾಖೆಯ ಸದಸ್ಯರನ್ನು ಒಳಗೊಂಡ ತಂಡವು ಪ್ರತಿ ಮನೆಯಲ್ಲಿ ಇರುವವರ ಸಮಗ್ರ ಮಾಹಿತಿ ಕಲೆ ಹಾಕಬೇಕು. ಜ್ವರ, ಡಯಾಬಿಟಿಸ್, ರಕ್ತದೊತ್ತಡ, ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯ ಸಮಸ್ಯೆ ಇದ್ದಲ್ಲಿ ತಕ್ಷಣವೇ ಜಿಲ್ಲಾಮಟ್ಟದ ತಂಡಕ್ಕೆ ಮಾಹಿತಿ ಸಲ್ಲಿಸಬೇಕು. ಜ್ವರ ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು’ ಎಂದು ಎಚ್ಚರಿಕೆ ನೀಡಿದರು.

‘ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಎಲ್ಲ ತಾಲ್ಲೂಕುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ’ ಎಂದರು.

‘ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಆಹಾರ ಸಾಮಗ್ರಿಗಳನ್ನು ಕಡ್ಡಾಯವಾಗಿ ಮನೆ ಮನೆಗಳಿಗೆ ತೆರಳಿ ವಿತರಿಸಬೇಕು. ಈ ಬಗ್ಗೆ ದೂರುಗಳು ಬಂದರೆ ಸಂಬಂಧಪಟ್ಟವರ ಮೇಲೆ ಕ್ರ‌ಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಸಾಧ್ಯವಿರುವ ಕಡೆಗಳಲ್ಲಿ ಉದ್ಯೋಗ ಖಾತ್ರಿ ಮೂಲಕವು ಜನರಿಗೆ ಉದ್ಯೋಗ ನೀಡುವ ಬಗ್ಗೆ ಪರಿಶೀಲಿಸಬೇಕು. ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರಪಾಲಿಕೆ ಆಯುಕ್ತ ಜಗದೀಶ್ ಕೆ‌.ಎಚ್., ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT