ಬುಧವಾರ, ಸೆಪ್ಟೆಂಬರ್ 29, 2021
20 °C
ಲಾಕ್‌ಡೌನ್‌ನಿಂದ ಮದ್ಯ ಸಿಗದ ಪರಿಣಾಮ; ವ್ಯಸನಿಗಳ ಆರೋಗ್ಯ ಸುಧಾರಣೆ!

ಬೆಳಗಾವಿ | ಕುಟುಂಬದಲ್ಲಿ ಬದಲಾವಣೆ ತಂದ ‘ಅನಿವಾರ್ಯತೆ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊರೊನಾ ಹರಡುವುದನ್ನು ನಿಯಂತ್ರಿಸಲು ಘೋಷಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟ ನಿಷೇಧಿಸಿರುವುದರಿಂದ ಬಹಳಷ್ಟು ವ್ಯಸನಿಗಳು ‘ಅನಿವಾರ್ಯ’ವಾಗಿ ಮದ್ಯದಿಂದ ದೂರ ಉಳಿದಿದ್ದಾರೆ. ಇದರಿಂದ ಅವರ ಕುಟುಂಬದಲ್ಲಿ ‘ನೆಮ್ಮದಿ’ ನೆಲೆಯೂರಿದೆ.

ಜಿಲ್ಲೆಯಲ್ಲಿ ಒಂದು ತಿಂಗಳಿಂದಲೂ ಮದ್ಯ ಸಿಗುತ್ತಿಲ್ಲ. ಪರಿಣಾಮ, ಆರಂಭದ ಕೆಲವು ದಿನಗಳಲ್ಲಿ ಖಿನ್ನತೆಗೆ ಒಳಗಾಗಿದ್ದ ಮದ್ಯಪ್ರಿಯರು ಕ್ರಮೇಣ ಪರಿಸ್ಥಿತಿಗೆ ‘ಹೊಂದಿ’ಕೊಂಡಿದ್ದಾರೆ. ಇದರಿಂದ ಅವರ ಆರೋಗ್ಯದಲ್ಲೂ ಸುಧಾರಣೆ ಕಂಡುಬಂದಿದೆ. ಮನೆಗಳಲ್ಲಿ ನಡೆಯುತ್ತಿದ್ದ ಗಲಾಟೆಗೂ ‘ಬ್ರೇಕ್‌’ ಬಿದ್ದಿದ್ದು, ಬದಲಾವಣೆಯ ಗಾಳಿ ಬೀಸುತ್ತಿದೆ. ಮದ್ಯದ ಚಟಕ್ಕೆ ಒಳಗಾಗಿದ್ದ ಹಲವರಿಗೆ ಪರಿವರ್ತನೆಯತ್ತ ಮನಸ್ಸು ತುಡಿಯುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನಡೆಸಿದ ಸಮೀಕ್ಷೆಯಲ್ಲಿ ಜನರು ಹೇಳಿಕೊಂಡಿದ್ದಾರೆ.

ಕಳ್ಳಭಟ್ಟಿ ಘಮಲು: ಎಲ್ಲೆಡೆ ಮದ್ಯದ ಅಂಗಡಿಗಳು ಮುಚ್ಚಿರುವುದರಿಂದ ಬಹಳಷ್ಟು ಕುಟುಂಬಗಳಲ್ಲಿ ನೆಮ್ಮದಿಯ ಬಾಗಿಲು ತೆರೆದುಕೊಂಡಿದೆ. ಈ ಲಾಕ್‌ಡೌನ್‌ ಒಂದರ್ಥದಲ್ಲಿ ಮದ್ಯವರ್ಜನ ಶಿಬಿರದಂತೆ ಕೆಲಸ ಮಾಡಿದ್ದು ಬಹಳಷ್ಟು ಮಂದಿ ಖಿನ್ನತೆಯಿಂದ ಹೊರಬಂದಿದ್ದಾರೆ. ಮದ್ಯಕ್ಕೆಂದು ವೆಚ್ಚ ಮಾಡುವುದು ನಿಂತಿದೆ.

ಲಾಕ್‌ಡೌನ್‌ ನಡುವೆಯೂ ಅಲ್ಲಲ್ಲಿ ಅಕ್ರಮವಾಗಿ ಸಿಗುತ್ತಿರುವ ಕಳ್ಳಭಟ್ಟಿಯು ವ್ಯಸನಿಗಳು ‘ವ್ಯಸನ ಮುಕ್ತರಾಗುವುದಕ್ಕೆ ಅವಕಾಶ ಕೊಡುತ್ತಿಲ್ಲ’ ಎನ್ನುವುದು ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಿಂದ ಗೊತ್ತಾಗುತ್ತಿದೆ.

ಅನಿಸಿಕೆಗಳು: ‘ದಿನಗೂಲಿ ಕೆಲಸ ಮಾಡುವ ನನಗೆ 20 ವರ್ಷಗಳಿಂದ ಕುಡಿತದ ಚಟವಿದೆ. ದುಡಿದ ಹಣದಲ್ಲಿ ಮದ್ಯಕ್ಕಾಗಿ ₹ 50ರಿಂದ ₹60 ಖರ್ಚಾಗುತ್ತಿತ್ತು. ಲಾಕ್‌ಡೌನ್‌ನಿಂದ ಮದ್ಯದ ಅಂಗಡಿಗಳನ್ನು ಮುಚ್ಚಿದ್ದರಿಂದ ತುಂಬಾ ಸಂಕಟವಾಯಿತು.‌ ಮೊದ ಮೊದಲು ಸರಿಯಾಗಿ ಊಟ ಸೇರುತ್ತಿರಲಿಲ್ಲ. ಕುಟುಂಬದವರೊಂದಿಗೆ ಸಿಡಿಮಿಡಿ ಮಾಡುತ್ತಿದ್ದೆ. ಆದರೆ, ಇತ್ತೀಚೆಗೆ ಕುಡಿಯದಿದ್ದರೂ ಏನೂ ಪರಿಣಾಮ ಬೀರುತ್ತಿಲ್ಲ. ಮದ್ಯದ ಅಂಗಡಿಗಳು ತೆರೆದಿದ್ದರೆ ಚಟಕ್ಕಾಗಿ ಸಾವಿರಾರು ರೂಪಾಯಿ ಸಾಲ ಮಾಡಬೇಕಾಗುತ್ತಿತ್ತು. ಈಗ ಹಣ ಉಳಿತಾಯದ ಜೊತೆಗೆ ದುಶ್ಚಟ ಬಿಡಲು ಅವಕಾಶ ಸಿಕ್ಕಂತಾಗಿದೆ. ಚಟದಿಂದ ದೂರವಿರಲು ಮಾನಸಿಕವಾಗಿ ಸಿದ್ಧತೆ ನಡೆಸಿದ್ದೇನೆ’ ಎಂದು ಚಿಕ್ಕೋಡಿಯ ಕಲ್ಲಪ್ಪ ಅನಿಸಿಕೆ ಹಂಚಿಕೊಂಡರು.

‘ತಿಂಗಳಿಂದ ಬಾರ್‌ಗಳು ಬಂದ್ ಆಗಿ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಇದು ನಾನು ಮದ್ಯದಿಂದ ದೂರವಿರಲು ಸಹಕಾರಿಯಾಗಿದೆ. ಹಣವೂ ಉಳಿತಾಯವಾಗುತ್ತಿದೆ. ಮುಂದೆ ಮದ್ಯ ಮಾರಾಟ ಶುರುವಾದರೂ ನಿತ್ಯ ಕುಡಿಯುವ ಬದಲು ಆಗೊಮ್ಮೆ ಈಗೊಮ್ಮೆ ಕುಡಿಯಲು ಚಿಂತಿಸಿದ್ದೇನೆ’ ಎಂದು ಅಥಣಿಯ ಹಣಮಂತ ಮಾದರ ತಿಳಿಸಿದರು.

‘ಪತಿಯು ಕುಡಿದು ಬಂದರೆ ಭಯದ ವಾತಾವರಣ ಇರುತ್ತಿತ್ತು. ಮನೆಯವರೊಂದಿಗೆ ಬೆರೆಯುತ್ತಿರಲಿಲ್ಲ. ನಮ್ಮೊಂದಿಗೆ ಊಟ ಮಾಡುವುದು ಕೂಡ ಅಪರೂಪವಾಗಿತ್ತು. ಈಗ ಅವರು ಕುಡಿಯದೆ ಇರುವುದರಿಂದ ನಮ್ಮೊಂದಿಗೆ ನಗುತ್ತಾ ಮಾತನಾಡುತ್ತಾರೆ. ನಮ್ಮ ಜತೆ ಊಟ ಮಾಡಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ನೆಮ್ಮದಿ ಬಂದಿದೆ. ಮುಂದೆಯೂ ಹೀಗೆಯೇ ಇದ್ದರೆ ಚೆನ್ನಾಗಿರುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಥಣಿಯ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದರು.

‘ಒಳ್ಳೆಯದೇ ಆಗಿದೆ; ಕೆಟ್ಟದ್ದಾಗಿಲ್ಲ’
‘ಮದ್ಯ ನಿಷೇಧದಿಂದಾಗ ಪರಿಣಾಮವೇನು ಎನ್ನುವ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಜನಜಾಗೃತಿ ವೇದಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಸಮೀಕ್ಷೆ ನಡೆಸಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ. ಶೀನಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

* ಸಮೀಕ್ಷೆಯಲ್ಲಿ 9,400 ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಮದ್ಯಪಾನ ನಿಲ್ಲಿಸಿದ್ದರಿಂದ ಗ್ರಾಮದಲ್ಲಿ ಒಳ್ಳೆಯದಾಗಿದೆ ಎಂದು ಶೇ 60ರಷ್ಟು ಮಂದಿ ಮತ್ತು ತುಂಬಾ ಒಳ್ಳೆಯದಾಗಿದೆ ಎಂದು ಶೇ 38ರಷ್ಟು ಮಂದಿ ಹೇಳಿದ್ದಾರೆ.

* ‘ನಿಮ್ಮ ಪ್ರದೇಶದಲ್ಲಿ ಮದ್ಯ ಸಿಗದಿರುವುದರಿಂದ ಒಳ್ಳೆಯದಾಗಿದೆಯೇ’ ಎನ್ನುವುದಕ್ಕೆ ಶೇ 79 ಮಂದಿ ಒಳ್ಳೆಯದಾಗಿದೆ ಎಂದಿದ್ದಾರೆ.

* ಸಮಾಜದಲ್ಲಿ ಸಂತಸ ಹೆಚ್ಚಾಗಿದೆಯೆ ಎನ್ನುವುದಕ್ಕೆ ಶೇ 45ರಷ್ಟು ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ. ಕುಟುಂಬಗಳಿಗೆ ಒಳ್ಳೆಯದಾಗಿದೆ ಎಂದು ತಿಳಿಸಿದ್ದಾರೆ. ಗೊಂದಲ, ಗಲಾಟೆ ಅಥವಾ ಸಮಸ್ಯೆಯಾಗಿದೆಯೇ ಎನ್ನುವ ಪ್ರಶ್ನೆಗೆ ‘ಮದ್ಯ ಸಿಗದೆ ಇರುವುದರಿಂದ ಏನೂ ಸಮಸ್ಯೆಯಾಗಿಲ್ಲ’ ಎನ್ನುವ ಉತ್ತರ ನೀಡಿದ್ದಾರೆ.

* ಮದ್ಯಪಾನ ನಿಲ್ಲಿಸಿದ್ದರಿಂದ ಅವರ ನಡವಳಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಶೇ 40ರಷ್ಟು ಜನರು ಹೇಳಿದ್ದಾರೆ. ಅವರಿಗೆ ಮಾನಸಿಕವಾಗಿ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಶೇ 30ರಷ್ಟು ಮಂದಿ ಹೇಳಿದ್ದಾರೆ. ಶೇ 12ರಷ್ಟು ಮಂದಿ ಕಳ್ಳಭಟ್ಟಿ ಕುಡಿಯುತ್ತಿದ್ದಾರೆ ಎಂದಿದ್ದಾರೆ.

* ಸಮೀಕ್ಷೆಯಲ್ಲಿ ಜಿಲ್ಲೆಯ 800 ಮಂದಿ ಸೇರಿ ರಾಜ್ಯದ 10ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

* ‘ಮದ್ಯ ನಿಷೇಧದಿಂದ ಸಮಾಜದಲ್ಲಿ ಒಳ್ಳೆಯದಾಗಿಯೇ ಹೊರತು ಕೆಟ್ಟದಾಗಿಲ್ಲ’ ಎನ್ನುವುದು ಒಟ್ಟಾರೆ ಅಭಿಪ್ರಾಯ ವ್ಯಕ್ತವಾಗಿದೆ. ಮದ್ಯ ಅವಶ್ಯವೇನಲ್ಲ; ಅದನ್ನು ಶಾಶ್ವತವಾಗಿ ನಿಷೇಧ ಮಾಡಬಾರದೇಕೆ ಎನ್ನುವ ನಿಟ್ಟಿನಲ್ಲೂ ಆಗ್ರಹಗಳು ಕೇಳಿಬಂದಿವೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ವ್ಯಕ್ತವಾಗುತ್ತಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು