ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಬೆಳಗಾವಿಯಲ್ಲಿಲ್ಲ ಪ್ರಯೋಗಾಲಯ!

ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ನಗರವಿದು
Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ವಿದೇಶಿಯರು ಕೂಡ ಬಂದು ಹೋಗುವ ನಗರದಲ್ಲಿ ಕೊರೊನಾ ವೈರಾಣು ಸೋಂಕು ದೃಢಪಡಿಸಿಕೊಳ್ಳಲು ನಡೆಸುವ ಪರೀಕ್ಷಾ ಕಾರ್ಯಕ್ಕೆ ಬೇಕಾಗುವ ಪ್ರಯೋಗಾಗಲಯೇ ಇಲ್ಲ! ರಾಜ್ಯದಲ್ಲಿ ಸೋಂಕು ಕಾಲಿಟ್ಟಿದ್ದರೂ ಮುಂಜಾಗ್ರತಾ ಕ್ರಮವಾಗಿ ಅಗತ್ಯವಾಗಿರುವ ಲ್ಯಾಬ್‌ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲದಿರುವುದು ಕಳವಳ ಮೂಡಿಸಿದೆ.

ಪ್ರಯೋಗಾಲಯ ಇಲ್ಲದಿರುವುದು, ಕೊರೊನಾ ವೈರಾಣು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷೆಗೆ ತೊಡಕಾಗಿ ಪರಿಣಮಿಸಿದೆ. ಪರೀಕ್ಷೆಗಾಗಿ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ ಕಳುಹಿಸಬೇಕಾದ ಅನಿವಾರ್ಯತೆ ಇದೆ. ಅಲ್ಲಿಗೆ ಮಾದರಿಗಳನ್ನು ಕಳುಹಿಸಿ ವರದಿಗಳನ್ನು ಪಡೆಯಲು ಮೂರ್ನಾಲ್ಕು ದಿನಗಳಾದರೂ ಬೇಕಾಗುತ್ತವೆ. ಅಲ್ಲಿಯವರೆಗೆ ಕಾಯಬೇಕಾಗುತ್ತದೆ. ಈ ಅವಧಿಯಲ್ಲಿ ಶಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಆತಂಕದಲ್ಲಿಯೇ ಇರಬೇಕಾಗುತ್ತದೆ. ಅಲ್ಲದೇ, ವೈದ್ಯರು ನಿರ್ದಿಷ್ಟ ಚಿಕಿತ್ಸೆ ಕೊಡುವುದಕ್ಕೂ ತೊಡಕಾಗುತ್ತಿದೆ ಎನ್ನಲಾಗುತ್ತಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡನ್ನೇನೋ ಆರಂಭಿಸಲಾಗಿದೆ. ಕೆಲವು ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿದೆ. ಇದಕ್ಕೆ ತಕ್ಕಂತೆ ಪ್ರಯೋಗಾಲಯವನ್ನೂ ಆರಂಭಿಸಿದರೆ, ದೊಡ್ಡ ಜಿಲ್ಲೆಯಲ್ಲಿ ಕೊರೊನಾ ಆತಂಕವನ್ನು ಸಮರ್ಥವಾಗಿ ಎದುರಿಸುವುದಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ವೈದ್ಯರು.

ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ವಿಭಾಗೀಯ ಸಹನಿರ್ದೆಶಕ ಡಾ.ಅಪ್ಪಾಸಾಹೇಬ ಎಂ.ನರಟ್ಟಿ, ‘ಸದ್ಯದ ಪರಿಸ್ಥಿತಿಯಲ್ಲಿ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಬೇಕಾಗಿದೆ. ಅಲ್ಲಿಂದ ವರದಿ ಪಡೆಯುವುದು ಬಹಳ ತಡವಾಗುವುದಿಲ್ಲ. ವರದಿಯನ್ನು ಇ–ಮೇಲ್‌ ಕಳುಹಿಸುತ್ತಾರೆ. ಆದರೂ ಇಲ್ಲಿಗೆ ಪ್ರತ್ಯೇಕವಾದ ಪ್ರಯೋಗಾಲಯದ ಅಗತ್ಯವಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ದೊರೆಯಬಹುದು’ ಎಂದು ತಿಳಿಸಿದರು.

‘ವ್ಯಕ್ತಿಯ ದೇಹ ತಾಪ ಪತ್ತೆ ಹಚ್ಚಲು ಬೇಕಾಗುವ ‘ಥರ್ಮಲ್‌ ಗನ್‌’ ಅನ್ನು ಸಾಂಬ್ರಾ ವಿಮಾನನಿಲ್ದಾಣದಲ್ಲಿ ಬಳಸಲಾಗುತ್ತಿದೆ. ಇದರಿಂದ ನಿಖರ ಮಾಹಿತಿ ದೊರೆಯುತ್ತದೆ. ಅಂತೆಯೇ ಇವು ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯ ಇವೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಲ್ಯಾಬ್ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

‘ಇತರ ನಿಲ್ದಾಣಗಳಲ್ಲೂ ನಡೆಯಲಿ’

ಸಾಂಬ್ರಾ ವಿಮಾನ ನಿಲ್ದಾಣದಿಂದ ಹಲವು ನಗರಗಳಿಗೆ ವಿಮಾನಗಳು ಹಾರಾಡುತ್ತಿವೆ. ನಗರದ ವಿವಿಧ ಕಂಪನಿಗಳು, ಕಾರ್ಖಾನೆಗಳಿಗೆ ಬೇರೆ ಬೇರೆ ಕಡೆಯಿಂದ ಪ್ರತಿನಿಧಿಗಳು ಬರುತ್ತಾರೆ. ಅಲ್ಲಿ ತಪಾಸಣೆಗೆ ಕ್ರಮ ವಹಿಸಲಾಗಿದೆ. ಆದರೆ, ಬಸ್‌ಗಳು ಹಾಗೂ ರೈಲುಗಳಲ್ಲಿ ಬರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆ ನಡೆಯದಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ರೈಲು ನಿಲ್ದಾಣದಲ್ಲಿ, ಸಹಾಯವಾಣಿಯನ್ನಷ್ಟೇ ಸ್ಥಾಪಿಸಲಾಗಿದೆ. ಸಿಬ್ಬಂದಿ ಆರೋಗ್ಯದ ಸಲಹೆಗಳನ್ನಷ್ಟೇ ನೀಡುವುದು ಕಂಡುಬರುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಭೇಟಿ ನೀಡಿದ್ದರಿಂದ, ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸ್ಕೀನಿಂಗ್ ಮಷಿನ್‌ ಅಳವಡಿಕೆ ಮಾಡಲಾಗಿದೆ. ಕೊರೊನಾ ಸೋಂಕು ಶಂಕಿತರನ್ನು ಗುರುತಿಸುವ ಯಂತ್ರವಿದು. ಕೊರೊನಾ ವೈರಸ್ ಹಾವಳಿ ಇದ್ದರೂ ವಿಮಾನನಿಲ್ದಾಣದಲ್ಲಿ ಈವರೆಗೂ ಸ್ಕೀನಿಂಗ್ ಮಷಿನ್ ಅಳವಡಿಸಿರಲಿಲ್ಲ. ಇನ್ಫ್ರಾರೆಡ್ ಥರ್ಮಾಮೀಟರ್ ಯಂತ್ರವನ್ನು ಈಗ ಬಳಸಲಾಗುತ್ತಿದೆ. ಅಂತೆಯೇ, ಈ ಕ್ರಮವನ್ನು ರೈಲು ಮತ್ತು ಬಸ್‌ ನಿಲ್ದಾಣಗಳಲ್ಲೂ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT