ಭಾನುವಾರ, ಏಪ್ರಿಲ್ 5, 2020
19 °C
ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ: ಬೆಳಗಾವಿ, ಚಿಕ್ಕೋಡಿ ವಿಭಾಗಗಳ ಮೇಲೂ ಎಫೆಕ್ಟ್‌

ಸಾರಿಗೆ ಸಂಸ್ಥೆಗಳಿಗೂ ನಷ್ಟ ತಂದ ‘ಕೊರೊನಾ ವೈರಸ್ ತಲ್ಲಣ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ‘ಕೊರೊನಾ‘ ವೈರಾಣು ಸೋಂಕು ಹರಡುವ ಭೀತಿ ಆವರಿಸಿರುವುದರಿಂದಾಗಿ ಬಹುತೇಕ ಜನರು ಬೇರೆ ಕಡೆಗಳಿಗೆ ಪ್ರಯಾಣ ಅಥವಾ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಪರಿಣಾಮ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ.

ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಚಿತ್ರಮಂದಿರಗಳು, ಶಾಲಾ–ಕಾಲೇಜುಗಳನ್ನು ಬಂದ್ ಮಾಡಲು ಸರ್ಕಾರ ಸೂಚಿಸಿದೆ. ಮದುವೆ, ಜಾತ್ರೆಗಳಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಜನ ಸೇರದಂತೆ ನಿರ್ಬಂಧ ವಿಧಿಸಿದೆ. ಹೀಗಾಗಿ, ಬಹಳ ಮಂದಿ ಹಳ್ಳಿಗಳ ಜನರು ನಗರಗಳಿಗೆ ಬರುತ್ತಿಲ್ಲ. ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಟಿಕೆಟ್‌ ಮುಂಗಡ ಕಾಯ್ದಿರಿಸುವುದು ಕಡಿಮೆಯಾಗುತ್ತಿದೆ. ಬುಕ್‌ ಆಗಿದ್ದನ್ನು ಕ್ಯಾನ್ಸಲ್‌ ಮಾಡಿಸುವುದೂ ಸಾಮಾನ್ಯವಾಗಿದೆ. ಹೀಗಾಗಿ, ಸಂಸ್ಥೆಯ ವರಮಾನ ಇಳಿಕೆಯ ಹಾದಿಯಲ್ಲಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆ: ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿಂದ ಪ್ರಯಾಣಿಕರ ಕೊರತೆ ಕಂಡುಬರುತ್ತಿರುವುದರಿಂದಾಗಿ, ಬಹಳಷ್ಟು ‘ಲಾಂಗ್‌ ರೂಟ್‌’ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಹಲವು ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಎಂದಿನಷ್ಟು ಪ್ರಮಾಣದಲ್ಲಿ ಕಂಡುಬರುತ್ತಿಲ್ಲ. ಸರ್ಕಾರ ವಿಧಿಸಿರುವ ‘ನಿರ್ಬಂಧ’ ತೆರವುಗೊಳ್ಳಲು ಇನ್ನೂ ನಾಲ್ಕೈದು ದಿನಗಳಾಗಲಿದೆ. ಹೀಗಾಗಿ, ಮುಂದಿನ ದಿನಗಳಲ್ಲೂ ಅಪಾರ ನಷ್ಟ ಉಂಟಾಗುವ ಸಾಧ್ಯತೆ ಇದೆ.

‘ಚಿಕ್ಕೋಡಿ ವಿಭಾಗದಿಂದ ನಿತ್ಯ 630 ರೂಟ್‌ಗಳಿಗೆ ಬಸ್‌ಗಳ (ಶೆಡ್ಯೂಲ್‌) ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಭಾನುವಾರ 30 ಶೆಡ್ಯೂಲ್‌ ಸ್ಥಗಿತಗೊಳಿಸಲಾಗಿತ್ತು. ಸೋಮವಾರ 20 ಕಡಿಮೆ ಮಾಡಲಾಗಿದೆ. ಇಲ್ಲಿಂದ ಬೆಂಗಳೂರಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿ ಶೆಡ್ಯೂಲ್‌ಗೆ ₹ 10ಸಾವಿರ ನಷ್ಟ ಉಂಟಾಗುತ್ತದೆ. ಹೀಗೆ ನೋಡಿದರೆ ನಿತ್ಯ ಸರಾಸರಿ ₹ 8ರಿಂದ 10ಲಕ್ಷ ನಷ್ಟ ಉಂಟಾಗುತ್ತಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗೃತಿಗೂ ಕ್ರಮ: ‘ಮುಂಜಾಗ್ರತಾ ಕ್ರಮವಾಗಿ ಡಿಪೊಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಒದಗಿಸಲಾಗಿದೆ. ಅದನ್ನು ಬಳಸುವಂತೆ ಚಾಲಕರು, ನಿರ್ವಾಹಕರಿಗೆ ತಿಳಿಸಲಾಗಿದೆ. ಬಸ್‌ ನಿಲ್ದಾಣಗಳಲ್ಲಿ ಸೋಪ್‌ ಇಡುವುದಕ್ಕೂ ಕ್ರಮ ವಹಿಸಲಾಗಿದೆ. ಬಸ್‌ಗಳ್ನು ನಿತ್ಯ ಸ್ವಚ್ಛಗೊಳಿಸಲಾಗುತ್ತಿದೆ. ನಿಲ್ದಾಣಗಳಲ್ಲಿ ಕೊರೊನಾ ಸೋಂಕಿನ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ದ್ವಿತೀಯ ಪಿಯುಸಿ ಸೇರಿದಂತೆ ಕೆಲವು ವರ್ಗಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಹೀಗಾಗಿ, ಸ್ಥಳೀಯವಾಗಿ ಎಲ್ಲ ರೂಟ್‌ಗಳಲ್ಲೂ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಲಾಂಗ್‌ ರೂಟ್‌ಗಳಿಗೆ ಟಿಕೆಟ್ ಬುಕ್ಕಿಂಗ್‌ ಆಧರಿಸಿ ನಿರ್ಧರಿಸಲಾಗುತ್ತಿದೆ. ಜಾತ್ರೆಗಳು, ಮದುವೆಗಳ ಸೀಸನ್‌ ಇದು. ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ನಿತ್ಯ ಸರಾಸರಿ ₹ 75ರಿಂದ ₹ 80 ಲಕ್ಷ ಆದಾಯ ಬರುತ್ತಿತ್ತು. ಕೊರೊನಾ ವೈರಾಣು ಸೋಂಕಿನ ಭೀತಿಯಿಂದಾಗಿ ಪ್ರಯಾಣಿಕರು ಕಡಿಮೆ ಆಗಿರುವುದರಿಂದ ₹ 10ರಿಂದ ₹ 15 ಲಕ್ಷ ನಷ್ಟ ಉಂಟಾಗುತ್ತಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಮಾಹಿತಿ ನೀಡಿದರು.

‘ಶಾಲೆ–ಕಾಲೇಜುಗಳಿಗೆ ರಜೆ ನೀಡಿದ್ದರೂ ಪೋಷಕರು ಮಕ್ಕಳೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿಲ್ಲ. ಹೀಗಾಗಿ, ಬಸ್‌ಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

‘ಮಾಸ್ಕ್‌’ಗಳಿಗೆ ತೀವ್ರ ಕೊರತೆ!

ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗೆ ಮಾಸ್ಕ್‌(ಮುಖಗವಸು)ಗಳನ್ನು ನೀಡಲು ಸಂಸ್ಥೆಯಿಂದ ಸೂಚನೆ ಬಂದಿದೆ. ಆದರೆ, ಲಭ್ಯತೆ ಇಲ್ಲವಾಗಿದೆ! ಹೀಗಾಗಿ, ಬಹಳಷ್ಟು ಮಂದಿ ನಿರ್ವಾಹಕರು ಹಾಗೂ ಚಾಲಕರು ಮಾಸ್ಕ್‌ಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯವಾಗಿದೆ. ಎರಡೂ ವಿಭಾಗಗಳಿಂದ ಸಾವಿರಾರು ಮಂದಿ ಸಿಬ್ಬಂದಿ ಇದ್ದಾರೆ, ಪೂರೈಕೆಯಾಗಿರುವುದು ನೂರಾರು ಮುಖಗವಸುಗಳು ಮಾತ್ರ!

‘300 ಮಾಸ್ಕ್‌ಗಳನ್ನು ತರಿಸಿದ್ದೇವೆ. ಇನ್ನೂ ಅಗತ್ಯವಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ತರಿಸಿಕೊಂಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಚಿಕ್ಕೋಡಿ  ನಿಯಂತ್ರಣಾಧಿಕಾರಿ ಶಶಿಧರ ತಿಳಿಸಿದರು. ಬೆಳಗಾವಿ ವಿಭಾಗದಿಂದ 5ಸಾವಿರ ಮಾಸ್ಕ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು