ಬುಧವಾರ, ಸೆಪ್ಟೆಂಬರ್ 29, 2021
21 °C
ಆನ್‌ಲೈನ್‌ ಸಭೆ ನಡೆಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಕ್ರಮ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಆಮ್ಲಜನಕ ಹಾಗೂ ಔಷಧಿ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸೋಂಕಿತರ ಆರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಧಿಕಾರಿಗಳ ಜೊತೆ ನಡೆದ ಆನ್‌ಲೈನ್ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಮ್ಸ್ (ಜಿಲ್ಲಾಸ್ಪತ್ರೆ) ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿವೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯನ್ನು ಮುಲಾಜಿಲ್ಲದೆ ಸೇವೆಯಿಂದ ಬಿಡುಗಡೆಗೊಳಿಸಬೇಕು’ ಎಂದು ಸೂಚಿಸಿದರು.

ಸಹಿಸಲಾಗುವುದಿಲ್ಲ: ‘ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ತವ್ಯಲೋಪ ಎಸಗುವ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ಸಹಿಸಲಾಗುವುದಿಲ್ಲ. ಬಿಮ್ಸ್ ನಿರ್ದೇಶಕರಿಗೆ ಇದು ಸಾಧ್ಯ ಆಗದಿದ್ದಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು; ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

‘ಕಪ್ಪು ಶಿಲೀಂಧ್ರ ಸೇರಿದಂತೆ ಸೋಂಕಿತರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ರೋಗಿಗಳು ಮೃತಪಟ್ಟರೆ ತಾಸಿನೊಳಗೆ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ ನೀಡಲು ಆದ್ಯತೆ ಕೊಡಬೇಕು’ ಎಂದು ಸೂಚಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿಸಿದ ಹಾಸಿಗೆಗಳು ಭರ್ತಿಯಾಗಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಕಳುಹಿಸಬೇಕು. ಅಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದರು.

ಕಾಮಗಾರಿ ಚುರುಕುಗೊಳಿಸಿ: ‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಲಾಕ್‌ಡೌನ್‌ ಸಂದರ್ಭ ಬಳಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸಬೇಕು. ಮುಗಿದಿರುವ ಕಾಮಗಾರಿಗಳ ನಿರ್ವಹಣೆಗೂ ಗಮನಹರಿಸಬೇಕು’ ಎಂದು ಸೂಚಿಸಿದರು.

ಸಂಸದೆ ಮಂಗಲಾ ಸುರೇಶ ಅಂಗಡಿ, ‘ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಪ್ರಮುಖ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ವಿ. ದರ್ಶನ್, ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಭಾಗವಹಿಸಿದ್ದರು.

‘ಸುವರ್ಣ ವಿಧಾನಸೌಧಕ್ಕೆ ಸೋಲಾರ್ ಪ್ಯಾನಲ್ ಅಳವಡಿಸಿ’
‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಿಡಿ ಬಿಡಿಯಾಗಿ ಸರ್ಕಾರಿ ಕಚೇರಿಗಳ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸುವ ಬದಲು ಸುವರ್ಣ ವಿಧಾನಸೌಧದ ಮೇಲೆ ಸೋಲಾರ್ ವಿದ್ಯುತ್ ಫಲಕಗಳನ್ನು ಅಳವಡಿಸುವುದು ಸೂಕ್ತ. ಈ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು. ಅಗತ್ಯ ಅನುಮತಿ ಕೊಡಿಸಲು ಕ್ರಮ ವಹಿಸಲಾಗುವುದು’ ಎಂದು ಸಚಿವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಅವರಿಗೆ ತಿಳಿಸಿದರು.

‘ನಗರದ ಕೋಟೆ ಕೆರೆಗೆ ಸುತ್ತಮುತ್ತಲ‌ ಬಡಾವಣೆಗಳ ಚರಂಡಿ ನೀರು ಸೇರದಂತೆ ನೋಡಿಕೊಳ್ಳಬೇಕು. ಕೆರೆ ಆವರಣದಲ್ಲಿ ಮಕ್ಕಳ ಉದ್ಯಾನ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

‘ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಆಯಾ ವರ್ಷವೇ ಪೂರ್ಣಗೊಳಿಸಬೇಕು. ಯೋಜನೆ ಜಾರಿಗೆ ಮುಂಚೆ ಕಡ್ಡಾಯವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದರು.

ಸೇವೆ ಪಡೆಯಿರಿ
ಕಪ್ಪು ಶಿಲೀಂಧ್ರ ಪ್ರಕರಣಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಬಿಮ್ಸ್ ವೈದ್ಯರ ಮೇಲಿನ ಹೊರೆ ಕಡಿಮೆಗೊಳಿಸಲು ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳಬೇಕು.
-ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು