ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನ ಹಂಚಿಕೆ ತಾರತಮ್ಯ: ಆಕ್ರೋಶ

ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪ್ರತಿಧ್ವನಿಸಿದ ಬಜೆಟ್‌ ತಾರತಮ್ಯ ವಿಚಾರ
Published : 17 ಆಗಸ್ಟ್ 2024, 15:50 IST
Last Updated : 17 ಆಗಸ್ಟ್ 2024, 15:50 IST
ಫಾಲೋ ಮಾಡಿ
Comments

ಬೆಳಗಾವಿ: ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಎಲ್ಲ 58 ವಾರ್ಡ್‌ಗಳಿಗೂ ಅನುದಾನ ಸರಿಯಾಗಿ ಹಂಚಿಕೆ ಆಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು, ಆಡಳಿತಾರೂಢ ಪಕ್ಷವನ್ನು ತರಾಟೆ ತೆಗೆದುಕೊಂಡರು. ಆಯ್ದ 37 ವಾರ್ಡ್‌ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.

ಮೇಯರ್‌ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ಕೆಲಕಾಲ ಬಿಸಿ ಚರ್ಚೆ ನಡೆಯಿತು. 2022–23ನೇ ಸಾಲಿನ ಬಜೆಟ್‌ ಸಂಬಂಧಿಸಿ ಸರಿಯಾದ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದರಿಂದ ಪರಿಷತ್‌ ಸಭೆಯನ್ನು ಮಧ್ಯಾಹ್ನದ ವೇಳೆಗೆ ಮುಂದೂಡಲಾಯಿತು.

‘ಪಾಲಿಕೆಯ 58 ವಾರ್ಡ್‌ಗಳಿಗೂ ಬಜೆಟ್ ಸರಿಯಾಗಿ ಹಂಚಿಕೆ ಆಗಬೇಕು’ ಎಂದು ವಿಪಕ್ಷ ನಾಯಕ ಮುಜಮಿಲ್‌ ಡೋಣಿ ಪಟ್ಟು ಹಿಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ, ‘ಮೊದಲು ಸಭೆಯ ಅಜೆಂಡಾ ಪ್ರಕಾರ ಚರ್ಚೆ ನಡೆಸಬೇಕು. ನಂತರದಲ್ಲಿ ಅಭಿವೃದ್ಧಿ ಅನುದಾನದ ಬಗ್ಗೆ ಚರ್ಚಿಸೋಣ. ಈಗ ಯಾವುದೇ ಕಾರಣಕ್ಕೂ ಇದನ್ನು ಚರ್ಚೆ ಮಾಡುವುದು ಬೇಡ’ ಎಂದರು.

ಈ ವೇಳೆ ಎರಡೂ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ನಂತರ ವಿಪಕ್ಷ ಸದಸ್ಯರು ಬಜೆಟ್ ಅನುದಾನ ಹಂಚಿಕೆಯ ಬಗ್ಗೆ ಚರ್ಚೆ ಆಗಬೇಕು ಎಂದು ಪಟ್ಟು ಹಿಡಿದರು. ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕು ಎಂದರು.

ನಾಮನಿರ್ದೇಶಿತ ಸದಸ್ಯ ರಮೇಶ ಸೋಂಟಕ್ಕಿ ಮಾತನಾಡಿ, ‘ಸಾಮಾನ್ಯ ಸಭೆಗೂ ಮುನ್ನ ಪೂರ್ವಭಾವಿ ಸಭೆ ಮಾಡಿದ್ದರೆ ಈ ಗೊಂದಲ ಆಗುತ್ತಿರಲಿಲ್ಲ. ಹೀಗಾಗಿ ಈ ಸಭೆಯಲ್ಲಿ ಸ್ವಲೊ ಹೊತ್ತು ಮೊಟಕುಗೊಳಿಸಿ 15 ನಿಮಿಷಗಳ ಕಾಲ ಎಲ್ಲರೂ ಸೇರಿ ಮೇಯರ್ ಕೊಠಡಿಯಲ್ಲಿ ಸಭೆ ನಡೆಸಿದರೆ ಎಲ್ಲ ಗೊಂದಲವೂ ಬಗೆಹರಿಯುತ್ತದೆ. ನಂತರದಲ್ಲಿ ಪಾಲಿಕೆಯ ಸಾಮಾನ್ಯ  ನಡೆಸಬೇಕು’ ಎಂದು ಮನವಿ ಮಾಡಿದರು.

ಅಕ್ರಮದ ವಾಸನೆ: ‘ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ, ತೆರಿಗೆ ಸಂಗ್ರಹ ಸೇರಿ ಯಾವುದೇ ಖರ್ಚು, ವೆಚ್ಚಗಳ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಮೇಲ್ನೋಟಕ್ಕೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬುದು ಗೊತ್ತಾಗುತ್ತಿದೆ’ ಎಂದು ಪ್ರತಿಪಕ್ಷ ಸದಸ್ಯರು ಆರೋಪ ಮಾಡಿದರು.

‘ಪಾಲಿಕೆಗೆ ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿ (2022-23) ವಾರ್ಡ್‌ಗಳ ಅಭಿವೃದ್ಧಿಗೆ ₹5 ಕೋಟಿ ಮೀಸಲಿಡಲಾಗಿದೆ. ಆದರೆ, ಲೆಕ್ಕದಲ್ಲಿ ₹10 ಕೋಟಿ ಖರ್ಚು ತೋರಿಸಿದ್ದಾರೆ. ಇದರ ಸರಿಯಾದ ಲೆಕ್ಕ ಕೊಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಆಡಳಿತಾರೂಢ ಸದಸ್ಯರು ಪ್ರತಿಪಕ್ಷಗಳ ಸದಸ್ಯರ ವಾರ್ಡ್‌ಳಿಗೆ ₹6 ಕೋಟಿ ಆಡಳಿತಾರೂಢ ಸದಸ್ಯರ ವಾರ್ಡ್‌ಗಳಿಗೆ ₹4 ಕೋಟಿ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಆಸೀಫ್ ಸೇಠ್, ಉಪಮೇಯರ್ ಆನಂದ ಚವ್ಹಾಣ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.

ಇದೇ ವೇಳೆ ನಾಮನಿರ್ದೇಶಿತ ಐವರು ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು.

ಪಾಲಿಕೆಯಲ್ಲೂ ‘ನಾಯಿ’ ಹಾವಳಿ

ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಹಲವರಿಗೆ ಕಚ್ಚಿ ಗಾಯಗೊಳಿಸಿದ ಪ್ರಕರಣಗಳೂ ದಾಖಲಾಗಿವೆ. ಮಹಾನಗರ ಪಾಲಿಕೆಯಿಂದ ಬೀದಿನಾಯಿಗಳ ಹಾವಳಿ ತಪ್ಪಲಿಸಲು ಪ್ರತಿವರ್ಷ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡಲಾಗುತ್ತಿದೆ. ಆದರೂ ಪ್ರಯೋಜನವಾಗಿಲ್ಲ ಎಂಬ ವಿಷಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ‘ಶಸ್ತ್ರಚಿಕಿತ್ಸೆಗೆ ಒಳಪಡಿಸಿರುವ ಎಲ್ಲ ನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಿಡಬೇಕು ಅಥವಾ ಪ್ರತ್ಯೇಕ ಕೇಂದ್ರ ಸ್ಥಾಪನೆ ಮಾಡಬೇಕು’ ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಅಶೋಕ ದುಡಗುಂಟಿ ‘ಬೀದಿ ನಾಯಿಗಳ ನಿಯಂತ್ರಣದ ಜತೆಗೆ ಪ್ರತ್ಯೇಕ ಕೇಂದ್ರ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರವೇ ಕೇಂದ್ರಕ್ಕೆ ಸ್ಥಳ ಅಂತಿಮ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT