ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಹಲವೆಡೆ ಸುತ್ತಾಡಿದ್ದ 13 ಮಂದಿಗೆ ಸೋಂಕು!

‘ಹಸಿರು ವಲಯ’ದಲ್ಲಿದ್ದ ಅಥಣಿಗೆ ಜಾರ್ಖಂಡ್ ‘ನಂಜು’
Last Updated 26 ಮೇ 2020, 16:44 IST
ಅಕ್ಷರ ಗಾತ್ರ

ಬೆಳಗಾವಿ/ ಅಥಣಿ: ಜಿಲ್ಲೆಯ 13 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 135ಕ್ಕೆ ಏರಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಪ್ರಕಟಿಸಿರುವ ಮಾಹಿತಿ ಪ್ರಕಾರ ಸೋಂಕಿತರು ಜಾರ್ಖಂಡ್ ಪ್ರವಾಸದ ಹಿನ್ನೆಲೆ ಉಳ್ಳವರಾಗಿದ್ದಾರೆ. ಅವರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿದೆ.

40 ಮಂದಿ ಹೋಗಿದ್ದರು:20 ದಿನಗಳ ಹಿಂದೆ ಜಾರ್ಖಂಡ್‌ನ ಧಾರ್ಮಿಕವೊಂದಕ್ಕೆ ಹೋಗಿ ಬಂದ 40 ಜನರ ಪೈಕಿ 13 ಮಂದಿಗೆ ಸೋಂಕು ದೃಢಪಟ್ಟಿದೆ. ಇವರು ಅಥಣಿ ಮತಕ್ಷೇತ್ರದ ಸವದಿ (8), ನಂದಗಾಂವ (3), ಜುಂಜುರವಾಡ ಮತ್ತು ಬೆಳ್ಳಂಕಿ ಗ್ರಾಮಗಳಿಗೆ (ತಲಾ ಒಬ್ಬರು) ಸೇರಿದವರಾಗಿದ್ದಾರೆ. ಈವರೆಗೆ ‘ಹಸಿರು ವಲಯ’ವೆಂದು ಗುರುತಿಸಿಕೊಂಡಿದ್ದ ತಾಲ್ಲೂಕಿನಲ್ಲಿ ಇದೇ ಮೊದಲಿಗೆ ಸೋಂಕು ಕಾಣಿಸಿಕೊಂಡಿದೆ.

ಮಂಗಳವಾರ ಬೆಳಿಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಗ್ರಾಮದವರೊಂದಿಗೆ ಸುತ್ತಮುತ್ತಲಿನ ಗ್ರಾಮಗಳವರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ‘ಜಾರ್ಖಂಡ್‌ನಿಂದ ಬಂದ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ತಾಲ್ಲೂಕು ಆಡಳಿತ ಯೋಜಿಸಿತ್ತು. ಆದರೆ, ಅದನ್ನು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕೈಬಿಟ್ಟಿದ್ದರು. ಅವರವರ ಮನೆಗಳಲ್ಲಿ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು’ ಎಂಬ ಮಾತುಗಳು ಕೇಳಿಬರುತ್ತಿವೆ.

ಹಲವು ಕಡೆ ಹೋಗಿದ್ದರು:‘ಹೋಂ ಕ್ವಾರಂಟೈನ್ ಇದ್ದವರ ಬಗ್ಗೆ ಆರೋಗ್ಯ ಇಲಾಖೆ ನಿಗಾ ವಹಿಸಲಿಲ್ಲ. ತಮ್ಮ ತೋಟದಲ್ಲಿ ಇರುತ್ತೇವೆ ಎಂದು ಹೇಳಿ ಹೋದವರು ಊರಲ್ಲಿ ಉಳಿದರು. ಅಕ್ಕ ಪಕ್ಕದ ಹಳ್ಳಿ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅಥಣಿ ಪಟ್ಟಣ, ಪಕ್ಕದ ಜಮಖಂಡಿ, ಬನಹಟ್ಟಿಗೂ ಭೇಟಿ ನೀಡಿದ್ದರು. ಖವಟಕೊಪ್ಪದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವುದಕ್ಕೆ ಮುನ್ನವೇ ಅವರು ಹೊರಗಡೆ ಓಡಾಡಿದ್ದಾರೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಸವಾಲು ತಾಲ್ಲೂಕು ಆಡಳಿತಕ್ಕೆ ಎದುರಾಗಿದೆ’ ಎನ್ನಲಾಗುತ್ತಿದೆ.

‘ಸೋಂಕಿತರ ಪೈಕಿ ಒಬ್ಬ ಸವದಿ ಎಂದು ವಿಳಾಸ ನೀಡಿದ್ದಾರೆ. ವಾಸ್ತವವಾಗಿ ಅವರು ತಾಲ್ಲೂಕಿನ ಖವಟಕೊಪ್ಪದವರು. ಅವರು ಹೋಂ ಕ್ವಾರಂಟೈನ್‌ನಲ್ಲಿ ಇರದೆ ಪ್ರವಾಸದ ಸವಿನೆನಪಿಗಾಗಿ ಭೋಜನ ಕೂಟ ಆಯೋಜಿಸಿದ್ದರು. ಇದರಲ್ಲಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಕ್ಷೌರವನ್ನೂ ಮಾಡಿಸಿಕೊಂಡಿದ್ದಾರೆ’ ಎಂದು ತಿಳಿದುಬಂದಿದೆ.

‘ನಾಲ್ಕೈದು ದಿನಗಳ ಹಿಂದೆಯಷ್ಟೇ ಅವರ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆಯಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯೆ ನೀಡಲು ಆರೋಗ್ಯ ಇಲಾಖೆ ತಾಲ್ಲೂಕು ಅಧಿಕಾರಿಗಳು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT