ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ, ಮಾರುಕಟ್ಟೆಗೆ ಕೋವಿಡ್ ‘ಕಾರ್ಮೋಡ’

ಮೂರ್ತಿಕಾರರು, ವ್ಯಾಪಾರಿಗಳಿಗೆ ನಷ್ಟ; ಜೀವನ ನಿರ್ವಹಣೆಯೇ ಸವಾಲು
Last Updated 29 ಆಗಸ್ಟ್ 2021, 8:14 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶೋತ್ಸವ ಸಂಭ್ರಮಕ್ಕೆ ಈ ಬಾರಿಯೂ ಕೋವಿಡ್ ಕಾರ್ಮೋಡ ಕವಿದಿದೆ.

ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗಡಿ ನಾಡಿನಲ್ಲಿ ಪ್ರವಾಸೋದ್ಯಮ ಹಾಗೂ ಮಾರುಕಟ್ಟೆ ಚೇತರಿಕೆಗೆ ಚಿಮ್ಮುಹಲಗೆಯಂತಿರುವ ಗಣೇಶೋತ್ಸವದ ಮೇಲೆ ನಿರ್ಬಂಧಗಳ ಕರಿನೆರಳು ಬಿದ್ದಿರುವುದರಿಂದ, ಅದನ್ನೇ ನಂಬಿಕೊಂಡಿದ್ದ ಹಲವು ವರ್ಗದವರ ಬದುಕು ದುರ್ಬರವಾಗಿದೆ.

ಕೋವಿಡ್ ಮೊದಲನೇ ಅಲೆಯಿಂದಾಗಿ 2019ರಲ್ಲಿ ಹಾಗೂ 2ನೇ ಅಲೆಯಿಂದಾಗಿ ಹೋದ ವರ್ಷ ಸರಳವಾಗಿ ಹಬ್ಬವನ್ನು ಆಚರಿಸಲಾಗಿತ್ತು. ಈ ಬಾರಿಯೂ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧಿಸಿ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮನೆಗಳು ಹಾಗೂ ದೇವಸ್ಥಾನಗಳಿಗೆ ಸೀಮಿತಗೊಳಿಸಬೇಕು ಎಂದು ಷರತ್ತು ವಿಧಿಸಿದೆ. ಇದಕ್ಕೆ ಭಕ್ತ ವರ್ಗ ಮತ್ತು ವ್ಯಾಪಾರಿ ವಲಯದವರ ವಿರೋಧಕ್ಕೆ ಕಾರಣವಾಗಿದೆ.

ಈ ಹಬ್ಬದಲ್ಲಿ ವ್ಯಾಪಾರ–ವಹಿವಾಟಿನ ಮೂಲಕ ಆರ್ಥಿಕವಾಗಿ ಲಾಭ ಕಂಡುಕೊಳ್ಳುತ್ತಿದ್ದ ಮೂರ್ತಿಕಾರರು, ಬಟ್ಟೆಗಳು ಮೊದಲಾದವುಗಳ ವ್ಯಾಪಾರಿಗಳು ನಷ್ಟಕ್ಕೆ ಒಳಗಾಗಿದ್ದಾರೆ. ಎತ್ತರದ ಮೂರ್ತಿಗಳಿಗೆ ಅವಕಾಶ ಇಲ್ಲದೆ ಇರುವುದರಿಂದ ಮೂರ್ತಿಕಾರರು ಕಂಗಾಲಾಗಿದ್ದಾರೆ. ಸತತ 3ನೇ ವರ್ಷ ನಷ್ಟದ ಸುಳಿಗೆ ಸಿಲುಕಿರುವುದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾರಾಂತ್ಯ (ಶನಿವಾರ ಹಾಗೂ ಭಾನುವಾರ) ಕರ್ಫ್ಯೂ ಕೂಡ ಜಾರಿಯಲ್ಲಿದೆ. ಇದರಿಂದಾಗಿ ಮಾರುಕಟ್ಟೆ ಚೇತರಿಕೆ ಕಾಣಲು ನೆರವಾಗಬಹುದಾಗಿದ್ದ ಹಬ್ಬವು ನಿರ್ಬಂಧಗಳಿಂದ ಕಳೆಗುಂದಿದೆ. ಮುಕ್ತ ಅವಕಾಶ ನೀಡಬೇಕು ಎನ್ನುವುದು ವ್ಯಾಪಾರಿಗಳು, ಮೂರ್ತಿಕಾರರು ಹಾಗೂ ಗಣೇಶ ಉತ್ಸವ ಆಚರಣೆ ಮಂಡಳಗಳವರ ಆಗ್ರಹವಾಗಿದೆ.

ಚಿಂತಾಜನಕವಾಗಿದೆ

ಸವದತ್ತಿ: ಕೆಲ ತಿಂಗಳು ಮೊದಲೇ ಮಣ್ಣು ತಂದು ಹದ ಮಾಡಬೇಕಿತ್ತು. ಕೋವಿಡ್ ಕಾರಣದಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಲಿಲ್ಲ. ಇದರಿಂದಾಗಿ ಅಗತ್ಯವಾದ ಮಣ್ಣು ತರಲಾಗಲಿಲ್ಲ. 200ರ ಬದಲು 60 ಗಣೇಶ ವಿಗ್ರಹಗಳ ತಯಾರಿ ನಡೆದಿದೆ. 8-10 ಅಡಿಗಳ ಮೂರ್ತಿಗಳಿಗೆ ಅವಕಾಶವಿಲ್ಲ. ಇದರಿಂದ ಮೂರ್ತಿಕಾರರ ಬದುಕು ಚಿಂತಾಜನಕವಾಗಿದೆ.

ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಲು ಪುರಸಭೆ ಆದೇಶಿಸಿದೆ. ದೊಡ್ಡ ವಿಗ್ರಹಗಳಿಗೆ ನಿಷೇಧ ವಿಧಿಸಿದೆ. ಪಟಾಕಿ ಹಾಗೂ ಬಟ್ಟೆ ವ್ಯಾಪಾರವೂ ಇದಕ್ಕೆ ಹೊರತಾಗಿಲ್ಲ.

‘ಬೇರೆ ಉದ್ಯೋಗ ಗೊತ್ತಿಲ್ಲ. ಹಿಂದೆ ವರ್ಷದಲ್ಲಿ ₹ 4 ಲಕ್ಷ ವರಮಾನ ಬರುತ್ತಿತ್ತು. ಈ ಬಾರಿ ₹ 60- ₹ 70ಸಾವಿರಕ್ಕೆ ಕುಸಿದಿದೆ. ಇದರಲ್ಲಿ ಕುಟುಂಬ ನಿರ್ವಹಣೆ ಕಷ್ಟ’ ಎಂದು ಮೂರ್ತಿಕಾರ ರವಿ ಹಾಳಕೇರಿ ತಿಳಿಸಿದರು.

ವಿಘ್ನ ತಂದೊಡ್ಡಿದ ಕೋವಿಡ್

ಖಾನಾಪುರ: ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್ ಕಾರಣದಿಂದಾಗಿ ಗಣೇಶನ ಪೂಜೆಗೆ ಹಲವಾರು ವಿಘ್ನಗಳು ಎದುರಾಗುತ್ತಿವೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿದೆ.

ವಿಗ್ರಹ ತಯಾರಕರು, ಪೆಂಡಾಲ್ ಹಾಕುವವರು, ಸೌಂಡ್ ಮತ್ತು ಲೈಟಿಂಗ್ ಸಿಸ್ಟನ್‌ನವರು, ಬಾಜಾ-ಭಜಂತ್ರಿಯವರು, ವಾಹನ ಮತ್ತು ಕ್ರೇನ್ ಮಾಲೀಕರು, ಪೆಂಡಾಲ್‌ ಹಾಕುವವರು ಮತ್ತು ಅಲಂಕಾರ ಮಾಡುವವರು, ಕಲಾವಿದರು ಸೇರಿದಂತೆ ಗಣೇಶೋತ್ಸವದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಕಂಡುಕೊಳ್ಳುತ್ತಿದ್ದ ಪ್ರತಿಯೊಬ್ಬರೂ ತೊಂದರೆಗೆ ಒಳಗಾಗಿದ್ದಾರೆ.

‘ಪ್ರತಿ ವರ್ಷ ನಾವು 20ರಿಂದ 25 ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು 5ರಿಂದ 8 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದೆವು. ಇವುಗಳ ಮಾರಾಟದಿಂದ ನಮಗೆ ಸಾವಿರಾರು ರೂಪಾಯಿ ಆದಾಯ ಬರುತಿತ್ತು. ಅದರಲ್ಲಿ ವರ್ಷವಿಡೀ ಕುಟುಂಬ ನಿರ್ವಹಣೆ ನಡೆಯುತಿತ್ತು. ಆದರೆ, ಈ ಸಲ ದೊಡ್ಡ ಮೂರ್ತಿಗಳಿಗೆ ಆರ್ಡರ್ ಬಂದಿಲ್ಲ. ಇದರಿಂದ ನಷ್ಟವಾಗಿದೆ’ ಎಂದು ತಾಲ್ಲೂಕಿನ ಖಾನಾಪುರದ ವಿಶ್ರಾಂತವಾಡಿ ಗ್ರಾಮದ ಮೂರ್ತಿ ತಯಾರಕ ಸಂದೀಪ ಕುಂಬಾರ ಅಳಲು ತೋಡಿಕೊಂಡರು.

ಸಂಭ್ರಮದೊಂದಿಗೆ ಗಳಿಕೆಯೂ ಮಾಯ

ಚನ್ನಮ್ಮನ ಕಿತ್ತೂರು: ಪ್ರತಿ ವರ್ಷ ಸಂಭ್ರಮದಿಂದ ಇರುತ್ತಿದ್ದ ಗಣೇಶೋತ್ಸವ ಈ ಬಾರಿ ಕಳೆಗುಂದಿದೆ. ದೇವಸ್ಥಾನ ಹಾಗೂ ಮನೆಯಲ್ಲಿ ಮಾತ್ರ ಗಣಪತಿ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಪೊಲೀಸರು ಕಟ್ಟಪ್ಪಣೆ ಮಾಡಿದ್ದಾರೆ. ಹೀಗಾಗಿ, 40ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಎತ್ತರದ ಮೂರ್ತಿಗಳ ಪ್ರತಿಷ್ಠಾಪನೆ ಕೈಬಿಡಲಾಗಿದೆ. ಕೆಲವು ಗುಡಿಗಳ ಆವರಣಕ್ಕೆ ಸ್ಥಳಾಂತರಗೊಂಡಿವೆ. ಮನರಂಜನೆ ಮತ್ತಿತರ ಕಾರ್ಯಕ್ರಮಗಳಿಗೆ ಕಡಿವಾಣ ಇದೆ.

‘ದೊಡ್ಡ ಮೂರ್ತಿ ಮಾಡಿದರೆ, ಹೆಚ್ಚು ಸಂಭ್ರಮವಿದ್ದರೆ ಮೂರ್ತಿಕಾರರಿಗೂ ಹೆಚ್ಚು ದುಡ್ಡು ಸಿಗುತ್ತಿತ್ತು. ಆದರೆ, ಸಂಭ್ರಮವೇ ಮಾಯವಾಗಿದ್ದರಿಂದ ಚಿಕ್ಕ ಮೂರ್ತಿಗಳಿಗೆ ಅನೇಕರು ಮಾರು ಹೋಗಿದ್ದಾರೆ. ಮೂರ್ತಿ ಸಿದ್ಧಪಡಿಸುವವರಿಗೆ ಹೆಚ್ಚು ಹಣವೂ ಸಿಗುತ್ತಿಲ್ಲ. ಪ್ರತಿ ಗಣೇಶ ಹಬ್ಬದ ನಿರೀಕ್ಷಿತ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಮೂರ್ತಿಕಾರ ಸಂಜೀವ್.

ಕುಟುಂಬ ಕಂಗಾಲು

ಮೂಡಲಗಿ: ಇಲ್ಲಿನ ಪತ್ತಾರ ಕುಟುಂಬದವರು ಹಲವು ದಶಕಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಮೂಡಲಗಿ, ಪಕ್ಕದ ಬಾಗಲಕೋಟೆ, ವಿಜಯಪುರದ ಜನರೂ ಮೂರ್ತಿಗಳಿಗಾಗಿ ಇಲ್ಲಿನ ಕಲಾವಿದರನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಗಣೇಶ ಹಬ್ಬಕ್ಕೆ 3–4 ತಿಂಗಳನಿಂದ ಪತ್ತಾರ ಓಣಿಯಲ್ಲಿ ಮೂರ್ತಿ ಮಾಡುವ ಸಿದ್ಧತೆ ಜೋರಾಗಿರುತ್ತದೆ. ಆದರೆ, ಕೋವಿಡ್‌ ಪರಿಸ್ಥಿತಿಯು ಈ ಕಲಾವಿದರಿಗೆ ತೊಂದರೆ ತಂದೊಡ್ಡಿದೆ.

ಸರ್ಕಾರ ಮಾರ್ಗಸೂಚಿ ವಿಧಿಸಿದ್ದರಿಂದಾಗಿ, ಮೂರ್ತಿಗಳಿಗೆ ಬೇಡಿಕೆ ಬಂದಿಲ್ಲ.

‘ಹೋದ ವರ್ಷವೂ ಮೂರ್ತಿ ಮಾಡುವ ಬಗ್ಗೆ ಆತಂಕ ಇತ್ತು. ಈ ವರ್ಷವೂ ಹಾಗೆಯೇ ಆಗಿದೆ. ಕಷ್ಟಪಟ್ಟು ಮಾಡಿದ ಮೂರ್ತಿಗಳು ಮಾರಾಟವಾದರೆ ನಮಗೆ ಒಂದಿಷ್ಟು ಹಣ ಉಳಿಯುತ್ತದೆ; ಇಲ್ಲವಾದರೆ ಕಷ್ಟವಾಗುತ್ತದೆ. ಕೋವಿಡ್‌ನಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಎರಡೂವರೆ ದಶಕದಿಂದ ಗಣೇಶ ಮೂರ್ತಿ ಮಾಡುತ್ತಿರುವ ವಿಲಾಸ ಪತ್ತಾರ ತಿಳಿಸಿದರು.

‘ಕೆಲವು ಕುಟುಂಬದವರು ಗಣಪತಿ ಮೂರ್ತಿಯನ್ನು ಕಾಯಂ ಆಗಿ ನಮ್ಮಲ್ಲೇ ಒಯ್ಯುವುದರಿಂದ ಅವರಿಗಾಗಿ ಸಿದ್ಧಪಡಿಸುತ್ತಿದ್ದೇವೆ. ಲಾಭ–ನಷ್ಟದ ಬಗ್ಗೆ ಯೋಚನೆ ಮಾಡೋದಿಲ್ಲರ್ರೀ. ಕುಟುಂಬದ ಕಾಯಕವನ್ನು ಮುಂದುವರಿಸುತ್ತಿದ್ದೇವೆ’ ಎಂದು 5 ದಶಕದಿಂದ ಮೂರ್ತಿ ಮಾಡುತ್ತಿರುವ ಶಿವಬೋಧ ಪತ್ತಾರ ಹೇಳಿದರು.

ಪ್ರತಿಕ್ರಿಯೆಗಳು

ಬಹಳ ನಷ್ಟ ಉಂಟಾಗಿದೆ

ಗಣೇಶ ಮೂರ್ತಿ ತಯಾರಿಸುವವವರಿಗೆ ಕೊರೊನಾದಿಂದಾಗಿ ಬಹಳ ನಷ್ಟವಾಗಿದೆ. ಎರಡು ವರ್ಷಗಳಿಂದಲೂ ತೊಂದರೆಯಾಗಿದೆ. ಶೆಡ್ ಬಾಡಿಗೆ ತುಂಬುವುದಕ್ಕೂ ಪರದಾಡುವಂತಾಗಿದೆ. ಈ ವರ್ಷವೂ 4 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿ ಮಾಡದಂತೆ ಸೂಚಿಸಲಾಗಿದೆ. ಇದರಲ್ಲಿ ನಮಗೆ ಅನುಕೂಲ ಆಗುವುದಿಲ್ಲ. ಹಾಕಿದ ಖರ್ಚು ಕೂಡ ಬರುವುದಿಲ್ಲ. ಕೆಲಸ ಮಾಡುವವರಿಗೆ ಸಂಬಳ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ.

ಮನೋಹರ ಪಾಟೀಲ, ಮೂರ್ತಿಕಾರ, ಬೆಳಗಾವಿ

ಶೇ 30ರಷ್ಟೂ ಆಗುತ್ತಿಲ್ಲ

ಕೊರೊನಾಕ್ಕಿಂತ ಆಗುತ್ತಿದ್ದ ವ್ಯಾಪಾರದಲ್ಲಿ ಶೇ 30ರಷ್ಟು ಕೂಡ ಈಗ ಆಗುತ್ತಿಲ್ಲ. ಕೆಲಸಗಾರರನ್ನು ಇಟ್ಟುಕೊಳ್ಳುವುದಕ್ಕೂ ತೊಂದರೆ ಆಗುತ್ತಿದೆ. ಬಟ್ಟೆಗಳನ್ನು ತರಿಸುವುದಕ್ಕೆ ಮನಸ್ಸಾಗದ ಸ್ಥಿತಿ ಇದೆ. ಇರುವವೂ ಹಾಳಾಗುತ್ತಿವೆ. ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿದೆ. ಜನರು ಖರೀದಿಗೆ ಬರುತ್ತಿಲ್ಲ.

ಅರ್ಜುನ ಹಲಗೇಕರ, ಬಟ್ಟೆ ವ್ಯಾಪಾರಿ, ಬೆಳಗಾವಿ

ಅವಕಾಶ ಕೊಡಬೇಕು

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಕೊಡಬೇಕು. ಇದರಿಂದ ಮೂರ್ತಿಕಾರರು, ವ್ಯಾಪಾರಿಗಳಿಗೆ ಸೇರಿದಂತೆ ಹಲವು ವರ್ಗದವರಿಗೆ ಅನುಕೂಲವಾಗುತ್ತದೆ. ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬರುತ್ತದೆ.

ರಮೇಶ ಸೊಂಟಕ್ಕಿ, ಕಾರ್ಯದರ್ಶಿ, ಮಧ್ಯವರ್ತಿ ಗಣೇಶೋತ್ಸವ ಮಂಡಳಿ, ಬೆಳಗಾವಿ

ಮಾರ್ಗಸೂಚಿ ಪಾಲಿಸಬೇಕು

ಕೋವಿಡ್ ಹರಡದಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಪಾಲಿಸಬೇಕು. ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು.

ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

(ಪ್ರಜಾವಾಣಿ ತಂಡ: ಬಸವರಾಜ ಶಿರಸಂಗಿ, ಪ್ರಸನ್ನ ಕುಲಕರ್ಣಿ, ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT