ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಚೇತರಿಕೆಗೆ ನಿರ್ಮಾಣ ಕ್ಷೇತ್ರ ತವಕ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಹೊಡೆತ ಅನುಭವಿಸಿದ ‘ರಿಯಲ್ ಎಸ್ಟೇಟ್’
Last Updated 21 ಡಿಸೆಂಬರ್ 2020, 8:28 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಜರ್ಜರಿತವಾಗಿದ್ದ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ ಚೇತರಿಕೆಗೆ ತವಕಿಸುತ್ತಿದೆ.

ಅಲ್ಲಲ್ಲಿ ಕ್ರಮೇಣ ಕಾಮಗಾರಿಗಳು ಆರಂಭವಾಗುತ್ತಿದ್ದು, ಈ ರಂಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿದೆ. ಸ್ಥಗಿತಗೊಂಡಿದ್ದ ಯೋಜನೆಗಳು ಚುರುಕು ಪಡೆಯುತ್ತಿದ್ದು, ಕಟ್ಟಡಗಳು ಮೇಲೇಳುತ್ತಿರುವುದು ಕಂಡುಬರುತ್ತಿದೆ.

ಲಾಕ್‌ಡೌನ್ ವೇಳೆ ನಿರ್ಮಾಣ ಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿತ್ತು. ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಕಾರ್ಮಿಕರು ತವರಿನತ್ತ ಮರಳಿದ್ದರು. ಇರುವವರಿಗೂ ಕೆಲಸವಿರಲಿಲ್ಲ. ಸಾಮಗ್ರಿಗಳ ಸಾಗಣೆಯೂ ನಿಂತಿತ್ತು. ಇದೆಲ್ಲ ಕಾರಣಗಳಿಂದಾಗಿ ಹಲವು ತಿಂಗಳವರೆಗೆ ಕ್ಷೇತ್ರ ದೊಡ್ಡ ಪೆಟ್ಟು ತಿಂದಿದೆ. ಲಾಕ್‌ಡೌನ್‌ ತೆರವಾದ ನಂತರ ಪರಿಸ್ಥಿತಿ ಸುಧಾರಿಸುತ್ತಿದೆಯಾದರೂ, ಹಿಂದಿದ್ದಂತಹ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಬೇಕಾಗುತ್ತದೆ. ನಿರ್ಮಾಣ ಸಾಮಗ್ರಿ ಪೂರೈಕೆ ಹಳಿಗೆ ಬರುತ್ತಿದೆ. ಕಾರ್ಮಿಕರು ಕೂಡ ಮರಳುತ್ತಿದ್ದಾರೆ. ಇದರಿಂದಾಗಿ ಆಶಾದಾಯಕ ಬೆಳವಣಿಗೆ ನಿರೀಕ್ಷಿಸಬಹುದಾಗಿದೆ ಎನ್ನುವುದು ಬಿಲ್ಡರ್‌ಗಳ ಆಶಾವಾದವಾಗಿದೆ.

ಹೊಸದಿಲ್ಲ:

ನಿವೇಶನ, ಮನೆ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ಹೊಸದಾಗಿ ಖರೀದಿಸುವವರ ಪ್ರಮಾಣ ಕಡಿಮೆ ಇದೆ. ಲಾಕ್‌ಡೌನ್‌ ಹೊಡೆತದಿಂದ ನಷ್ಟ ಅನುಭವಿಸಿರುವ ಬಹುತೇಕರು, ಖರೀದಿ–ಹೂಡಿಕೆ ಮೊದಲಾದ ತಮ್ಮ ಯೋಜನೆಗಳನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಪರಿಣಾಮ, ಬಹಳಷ್ಟು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ಲಾಟ್‌ಗಳು ಖಾಲಿ ಇವೆ. ಹಲವು ಕಡೆಗಳಲ್ಲಿ ಮನೆಗಳು ಬಾಡಿಗೆಗಿದೆ ಎಂಬ ಬೋರ್ಡ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಇನ್ನೊಂದೆಡೆ, ಕಬ್ಬಿಣ, ಮರಳು, ಸಿಮೆಂಟ್ ಮೊದಲಾದ ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಿರುವುದು ಮತ್ತೊಂದು ಹೊಡೆತ ಕೊಟ್ಟಿದೆ.

‘ಕೋವಿಡ್ ಹೊಡೆತದಿಂದಾಗಿ ಪರಿಸ್ಥಿತಿ ಇನ್ನೂ ಸಂಪೂರ್ಣ ಸುಧಾರಿಸಿಲ್ಲ. ಮಾರ್ಕೆಟ್ ಮೇಲೆದ್ದಿಲ್ಲ. ಕೆಲಸಗಳು ಸ್ವಲ್ಪ ‍ಪ್ರಮಾಣದಲ್ಲಷ್ಟೆ ಆರಂಭವಾಗಿವೆ. ಪ್ರಗತಿಯಲ್ಲಿರುವ ಯೋಜನೆ ಪೂರ್ಣಗೊಳಿಸುವತ್ತ ಮಾತ್ರವೇ ಬಿಲ್ಡರ್‌ಗಳ ಚಿತ್ತವಿದೆ. ಹೊಸ ಯೋಜನೆ ಚಾಲೂ ಆಗುತ್ತಿಲ್ಲ. ನಗರದಲ್ಲಿ ಪೂರ್ಣಗೊಂಡಿರುವ ಹಾಗೂ ಮುಗಿಯುವ ಹಂತದಲ್ಲಿರುವ 2ಸಾವಿರಕ್ಕೂ ಹೆಚ್ಚಿನ ಪ್ಲಾಟ್‌ಗಳು ಖಾಲಿ ಇವೆ’ ಎಂದು ಬಿಲ್ಡರ್‌ ಸುನೀಲ್ ಚೌಗಲೆ ಪ್ರತಿಕ್ರಿಯಿಸಿದರು.

ಕ್ರೆಡಾಯ್ ಬೆಳಗಾವಿ ಘಟಕದ ಅಧ್ಯಕ್ಷ ರಾಜೇಶ್ ಹೆಡಾ, ‘ಕೋವಿಡ್ ಪರಿಣಾಮ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಸುಧಾರಿಸಿದೆ’ ಎಂದು ಪ್ರತಿಪಾದಿಸಿದರು. ಪುಣೆ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಕೆಲಸಕ್ಕಿದ್ದವರು ವಾಪಸಾಗಿದ್ದಾರೆ. ಇದರಿಂದಾಗಿ ಇಲ್ಲಿ ಮನೆಗಳ ಖರೀದಿಗೆ ಬೇಡಿಕೆ ಬಂದಿದೆ. ಜಾಗ ಹಾಗೂ ಗುಣಮಟ್ಟದ ಪ್ಲಾಟ್‌ಗಳಿಗೆ ಬೇಡಿಕೆಎ ಇದೆ. ಪ್ರಧಾನ ಮಂತ್ರಿ ಆವಾಸ್ ಮೊದಲಾದ ಯೋಜನೆಗಳ ಮೂಲಕ ಸರ್ಕಾರದಿಂದಲೂ ಪ್ರೋತ್ಸಾಹ ಸಿಗುತ್ತಿರುವುದರಿಂದ ಅನುಕೂಲವಾಗಿದೆ’ ಎನ್ನುತ್ತಾರೆ ಅವರು.

ಕಟ್ಟಡ ಕಾರ್ಮಿಕರಲ್ಲಿ ಮಂದಹಾಸ

ಮೂಡಲಗಿಯಲ್ಲಿ ಲಾಕ್‌ಡೌನ್‌ನಿಂದ ಕಟ್ಟಡ ಮತ್ತು ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದವು. ಸೆಂಟ್ರಿಂಗ್‌ ಕೆಲಸಗಾರರು, ಗೌಂಡಿಗಳು, ಕಾರ್ಪೆಂಟರ್‌ಗಳು ಕೆಲಸವಿಲ್ಲದೆ ಸಂಕಷ್ಟ ಅನುಭವಿಸಿದ್ದಾರೆ. ಕೆಲವು ಕಟ್ಟಡ ಕಾರ್ಮಿಕರು ಜೀವನ ನಿರ್ವಹಣೆಗಾಗಿ ತರಕಾರಿ, ಹಣ್ಣು, ಮಂಡಕ್ಕಿ ಮಾರಿದರು. 2 ತಿಂಗಳಿನಿಂದ ಲಾಕ್‌ಡೌನ್‌ ಸಡಲಿಕೆಯಿಂದ ನಿರ್ಮಾಣ ಕೆಲಸ ಭರದಿಂದ ಸಾಗಿವೆ. ಅಲ್ಲಲ್ಲಿ ಕೊಳವೆಬಾವಿ ತೆಗೆಸುವ ಕಾರ್ಯ ಸಾಗಿದೆ. ಕಟ್ಟಡ ಕಾರ್ಮಿಕರಿಗೆ ಸದ್ಯ ಬಿಡುವಿಲ್ಲದ ಕೆಲಸವಿದ್ದು, ಅವರ ಮೊಗದಲ್ಲಿ ಮೊದಲಿನ ಮಂದಹಾಸ ಮೂಡಿದೆ.

ಸಮಸ್ಯೆಗಳು ಅಂತ್ಯ ಕಂಡಿಲ್ಲ

ಸವದತ್ತಿಯಲ್ಲಿ ಸರ್ಕಾರಿ ಕಾಮಗಾರಿ ಸೇರಿ ರಿಯಲ್ ಎಸ್ಟೇಟ್, ಕಟ್ಟಡ, ಮನೆಗಳ ನಿರ್ಮಾಣ ಕಾಮಗಾರಿಗಳನ್ನು ನಂಬಿ ಉಪಜೀವನ ನಡೆಸುತ್ತಿದ್ದ ಕಾರ್ಮಿಕರ ಗೋಳು ಹೇಳತೀರದಾಗಿತ್ತು. ಸರ್ಕಾರ ಅನುದಾನ ಹಿಂತೆಗೆದ ಕಾರಣ ಕೆಲ ಕೆಲಸಗಳು ನಿಂತಿವೆ. ಪೂರ್ಣಗೊಂಡವುಗಳಿಗೆ ಬಿಲ್ ಪಾವತಿಯಾಗಿಲ್ಲ. ಇನ್ನೂ ಸಮಸ್ಯೆಗಳು ಪೂರ್ಣಪ್ರಮಾದಲ್ಲಿ ಪರಿಹಾರ ಕಂಡಿಲ್ಲ.

ಕೊಂಚ ಚೇತರಿಕೆಯಿಂದಾಗಿ ಕಾರ್ಮಿಕರಿಗೆ ಕೆಲಸ ಸಿಕ್ಕಿದೆ. ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳು ಕ್ರಮೇಣ ಆರಂಭವಾಗುತ್ತಿವೆ. ಕೂಲಿ ಕಾರ್ಮಿಕರು ಹಾಗೂ ಟಿಂಬರ್ ಮತ್ತು ಸಿಮೆಂಟ್‌ ಅಂಗಡಿಗಳ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದ್ದು ಅರ್ಥಿಕ ಚಟುವಟಿಕೆ ಗರಿಗೆದರುತ್ತಿದೆ.

ನಿರೀಕ್ಷಿತ ಮಟ್ಟದಲ್ಲಿಲ್ಲ

ಕಾರ್ಮಿಕರ ಕೊರತೆ ಮತ್ತು ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಚಿಕ್ಕೋಡಿ ಪರಿಸರದಲ್ಲಿ ನಿರ್ಮಾಣ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪುನರಾರಂಭಗೊಂಡಿಲ್ಲ.

ಹೊರ ರಾಜ್ಯಗಳ ಕಾರ್ಮಿಕರು ಲಾಕ್‌ಡೌನ್‌ ವೇಳೆ ತೆರಳಿದ್ದು, ವಾಪಸಾಗಿಲ್ಲ. ಜನರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮವೂ ಕುಸಿತ ಕಂಡಿದೆ. ನಿವೇಶನಗಳು ಮಾರಾಟವಾಗದೆ ಉದ್ಯಮಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಹುಕ್ಕೇರಿಯಲ್ಲಿ ಕುಸಿತ

ಹುಕ್ಕೇರಿಯಲ್ಲಿ ರಿಯಲ್ ಎಸ್ಟೇಟ್ ಕುಸಿದಿದೆ. ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳ ಅಮಾನ್ಯಕ್ಕೆ ಮುನ್ನ ಪ್ಲಾಟ್‌ಗಳು ಮಾರಾಟವಾಗಿದ್ದವು. ನಂತರ ವಹಿವಾಟು ಮಂದಗತಿಯಲ್ಲಿದೆ. ತಹಶೀಲ್ದಾರ್ ಕಚೇರಿ ಪಕ್ಕದ ಜಯನಗರ ಬಡಾವಣೆ ಬಳಿ, ಎಲಿಮುನ್ನೋಳಿ ರಸ್ತೆಗೆ ಹೊಂದಿಕೊಂಡಿರುವ, ಜಾಬಾಪುರ ಬಳಿ (ಕೆಇಬಿ ಹತ್ತಿರ), ಬೈಪಾಸ್ ರಸ್ತೆ ಸಮೀಪದಲ್ಲಿ ನಿವೇಶನಗಳು ಸೌಲಭ್ಯಗಳಿದ್ದರೂ ಮಾರಾಟವಾಗಿಲ್ಲ. ಸರ್ಕಾರಿ ನೌಕರರು ಬಿಟ್ಟರೆ ಉಳಿದವರು ನಿವೇಶನ ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಧೈರ್ಯ ತೋರಲಾಗದಂತಹ ಸ್ಥಿತಿ ಇದೆ.

‘ರಿಯಲ್ ಎಸ್ಟೇಟ್ ವ್ಯವಹಾರ ಮಂದಗತಿಯಲ್ಲಿದೆ. ಹೂಡಿಕೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. 2021ರ ಏಪ್ರಿಲ್‌ ನಂತರ ಚೇತರಿಕೆ ಕಾಣಬಹುದು’ ಎಂದು ಹುಕ್ಕೇರಿಯ ಉದ್ಯಮಿ ದಿನಕರ್ ಶೆಟ್ಟಿ ಹೇಳಿದರು.

‘ನೋಟು ಅಮಾನ್ಯಕ್ಕಿಂತ ಹಿಂದೆ ಜನರ ಬಳಿ ಹಣವಿತ್ತು. ಆದರೆ, ಬಳಿಕ ಹಣದ ಕೊರತೆಯಾದ ಕಾರಣ ರಿಯಲ್ ಎಸ್ಟೇಟ್ ವ್ಯವಹಾರ ಕುಸಿಯಿತು. ಹಣ ಹೂಡಿದವರು ಕೈಸುಟ್ಟುಕೊಂಡಿದ್ದಾರೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಜಯಗೌಡ ಪಾಟೀಲ ಪ್ರತಿಕ್ರಿಯಿಸಿದರು.

ರಾಯಬಾಗ

ರಾಯಬಾಗದಲ್ಲಿ ಲಾಕ್‌ಡೌನ್ ನಂತರ ರಿಯಲ್ ಎಸ್ಟೇಟ್ ಲಾಕ್ ಆಗಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸಾಮಗ್ರಿಗಳ ಉತ್ಪಾದನೆಗೆ ಬೇಕಾದ ಕಾರ್ಮಿಕರ ಕೊರತೆ ಇದಕ್ಕೆ ಕಾರಣ. ಕೃಷ್ಣಾ ನದಿ ದಂಡೆಯಲ್ಲಿರುವ ಕೆಲವು ಹಳ್ಳಿಗಳಲ್ಲಿ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಮನೆಗಳ ನಿರ್ಮಾಣ ಕಾಮಗಾರಿ ಮೇಲೂ ಹೊಡೆತ ಬಿದ್ದಿದೆ. ಹೀಗಾಗಿ, ಅವುಗಳು ಪೂರ್ಣಗೊಂಡಿಲ್ಲ.

ಖಾನಾಪುರದಲ್ಲಿ ನಿಧಾನವಾಗಿ ಚೇತರಿಕೆ

ಖಾನಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಉದ್ಯಮ ಇತ್ತೀಚೆಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಕಾರ್ಮಿಕ ವರ್ಗ ನಿಟ್ಟುಸಿರು ಬಿಟ್ಟಿದೆ.

ದೇವಸ್ಥಾನ, ವಾಣಿಜ್ಯ ಮಳಿಗೆಗಳು, ಮನೆ ಹಾಗೂ ಇತರ ಕಟ್ಟಡ ನಿರ್ಮಾಣ ಕಾಮಗಾರಿಗಳು ಚುರುಕು ಪಡೆದಿವೆ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ, ಹೊರ ರಾಜ್ಯದ ಕಾರ್ಮಿಕರ ಕೊರತೆ ಎದುರಾಗಿದೆ. ಪ್ರಮುಖ ಉದ್ಯಮವಾದ ಇಟ್ಟಿಗೆ ನಿರ್ಮಾಣ ಕಾರ್ಯವೂ ಚುರುಕಾಗಿದೆ. ಇದರಲ್ಲಿ ಲಕ್ಷಕ್ಕೂ ಅಧಿಕ ಕಾರ್ಮಿಕರು ತೊಡಗಿಸಿದ್ದಾರೆ.

ಕೆಲಸವಿಲ್ಲ; ಪರಿಹಾರವೂ ಸಿಕ್ಕಿಲ್ಲ

ಚನ್ನಮ್ಮನ ಕಿತ್ತೂರಲ್ಲಿ ಪಾತಾಳ ಕಂಡಿದ್ದ ರಿಯಲ್ ಎಸ್ಟೇಟ್ ಚೇತರಿಕೆ ಕಂಡಿಲ್ಲ. ಕಟ್ಟಡ ಕಾರ್ಮಿಕರ ಪರಿಸ್ಥಿತಿಯೂ ಸುಧಾರಿಸಿಲ್ಲ. ಕಬ್ಬಿಣ, ಮರಳಿನ ಧಾರಣೆಯಲ್ಲಿ ಭಾರಿ ಏರಿಕೆಯಾಗಿರುವುದು, ಕೆಲಸ ಪೂರ್ಣಗೊಳಿಸಲು ತೊಡಕಾಗಿದೆ ಎನ್ನುತ್ತಾರೆ ಸಾರ್ವಜನಿಕರು ಮತ್ತು ಗುತ್ತಿಗೆದಾರರು.

‘ಸರಿಯಾಗಿ ನಮಗೆ ಕೆಲಸ ದೊರೆಯುತ್ತಿಲ್ಲ. ಜನರ ಹತ್ತಿರವೂ ದುಡ್ಡಿಲ್ಲ. ಕಾರ್ಮಿಕ ಇಲಾಖೆಯಿಂದ ಆಹಾರದ ಕಿಟ್ ಕೊಟ್ಟರು. ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಘೋಷಿಸಿದ್ದರೂ ಕಟ್ಟಡ ಕಾರ್ಮಿಕರಾದ ನಮಗೆ ನಯಾಪೈಸೆ ಬಂದಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ’ ಎನ್ನುತ್ತಾರೆ ಫಕ್ಕೀರಪ್ಪ ಬಂಡಿವಡ್ಡರ.

‘₹ 39 ಇದ್ದ ಕೆ.ಜಿ. ಕಬ್ಬಿಣದ ದರ ₹ 54ಕ್ಕೆ ಏರಿದೆ. ಲಾರಿ ಮರಳಿಗೆ ₹36ಸಾವಿರ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದ ತೊಂದರೆಯಾಗಿದೆ’ ಎಂದು ಗುತ್ತಿಗೆದಾರ ರಮೇಶ ಮೊಕಾಶಿ ಪ್ರತಿಕ್ರಿಯಿಸಿದರು.

ನಿಂತ ಕೆಲಸಗಳು:

ಗೋಕಾಕದಲ್ಲಿ ಕೋವಿಡ್‌ನಿಂದಾಗಿ ನಿಂತಿದ್ದ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಕೆಲಸ ಮುಂದುವರಿಸಲು ಆರ್ಥಿಕ ಮತ್ತು ಅನಾರೋಗ್ಯದ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಜನರು.

‘ನಿವೇಶನ ಖರೀದಿಗೆ ಮಾಡಿದ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನೇ ಸಂಪೂರ್ಣವಾಗಿ ಪಾವತಿಸಿಲ್ಲ. ನಾನೂ ಮನೆ ನಿರ್ಮಾಣದ ಕನಸು ಕಂಡು ಆರಂಭಿಸಿದ್ದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿದೆ. ಪೂರ್ಣಗೊಳಿಸಲು ಆರ್ಥಿಕ ಶಕ್ತಿ ಇಲ್ಲದೆ ಚಿಂತೆಗೀಡಾಗಿದ್ದೇನೆ’ ಎಂದು ನಗರದ ಆಶ್ರಯ ಬಡಾವಣೆ ನಿವಾಸಿ ಯಲ್ಲಪ್ಪ ಭೀಮಶೆಪ್ಪ ಪಡದಲ್ಲಿ ತಿಳಿಸಿದರು.

ಪ್ರತಿಕ್ರಿಯೆಗಳು

* ಲಾಕ್‌ಡೌನ್‌ದಾಗ ಕಟ್ಟಡ ಕಾರ್ಮಿಕರಿಗೆ ಬಾಳ್‌ ತ್ರಾಸ್‌ ಆಗಿತ್ರೀ. ಎರಡ್ ತಿಂಗಳಿಂದ ಎಲ್ಲ ಕಡೆ ಕಟ್ಟಡ ಕೆಲಸ ಪ್ರಾರಂಭಗೊಂಡು, ಕೈತುಂಬಾ ಕೆಲಸ ಸಿಕ್ರಾವರೀ. ದಿನಾಲೂ ಒಂದಿಲ್ಲ ಒಂದು ಹೊಸ ಕಟ್ಟಡಕ್ಕಾಗಿ ಲೇಔಟ್‌ ಕೆಲಸ ಇರತೈತ್ರಿ.

– ಹಾಜಿ ರಫೀಕ್‌ ಖಡಗಾಂವಕರ, ಸೆಂಟ್ರಿಂಗ್‌ ಮೇಸ್ತ್ರಿ, ಮೂಡಲಗಿ

* ಲಾಕ್‌ಡೌನ್‌ಗಿಂತ ಮುಂಚೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಸಲೀಸಾಗಿ ನಡೆಯುತ್ತಿದ್ದವು. ಆದರೆ, ಈಗ ಕಟ್ಟಡ ಸಾಮಗ್ರಿಗಳು ದುಬಾರಿಯಾಗಿವೆ. ಕಾರ್ಮಿಕರ ಕೊರತೆ ಎದುರಾಗಿದೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕೈಗೊಂಡಿರುವ ಮಧ್ಯಮ ವರ್ಗದ ಜನರು ತೊಂದರೆಗೀಡಾಗಿದ್ದು, ಸಾಲದ ಹೊರೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯಿಂದಾಗಿ ಗುತ್ತಿಗೆದಾರ ಕಂಪನಿಗಳೂ ಆರ್ಥಿಕ ನಷ್ಟಕ್ಕೆ ಈಡಾಗುತ್ತಿವೆ

- ರಾಜ್ ಜಾಧವ, ವಿದ್ಯುತ್ ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT