ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಭೀತಿ ಹಿನ್ನೆಲೆ: ದೇಹ, ಅಂಗಾಂಗ ದಾನ ಸ್ಥಗಿತ

Last Updated 24 ಜುಲೈ 2020, 19:32 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ, ಮೃತ ದೇಹ ಹಾಗೂ ನೇತ್ರಗಳು ಮತ್ತು ಚರ್ಮ ಸೇರಿದಂತೆ ಯಾವುದೇ ಅಂಗಾಂಗ ದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಕೋವಿಡ್–19 ದೃಢಪಟ್ಟು ಮೃತರಾದವರದ್ದು ಮಾತ್ರವಲ್ಲದೇ, ಸಹಜ ಸಾವಿಗೀಡಾದವರ ದೇಹಗಳನ್ನು ಕೂಡ ವೈದ್ಯಕೀಯ ಕಾಲೇಜುಗಳು ದಾನವಾಗಿ ಸ್ವೀಕರಿಸುತ್ತಿಲ್ಲ. ದೇಹ ದಾನ ಮಾಡುವುದಾಗಿಬದುಕಿದ್ದಾಗಲೇ ವಾಗ್ದಾನ ಮಾಡಿದ್ದವರ (ಬರೆದುಕೊಟ್ಟಿದ್ದವರ) ದೇಹಗಳನ್ನು ಕೂಡ ಪಡೆದುಕೊಳ್ಳಲಾಗುತ್ತಿಲ್ಲ.

ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಮೃತ ದೇಹಗಳನ್ನು ಕಾಲೇಜುಗಳು ಸ್ವೀಕರಿಸುತ್ತಿದ್ದವು.

ನಿಯಮದ ಪ್ರಕಾರ: ಕೋವಿಡ್–19ನಿಂದ ಮೃತರಾದವರ ಶವ ನಿರ್ವಹಣೆ ನಿಯಮಗಳ ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ. ಅಲ್ಲದೇ, ಯಾರು ಎಲ್ಲಿ ನಿಧನರಾಗುತ್ತಾರೋ ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಬೇಕು ಮತ್ತು ಬೇರೆ ಕಡೆಗೆ ಸಾಗಿಸುವಂತಿಲ್ಲ ಎಂದು ಸರ್ಕಾರದ ಆದೇಶ ಕೂಡ ಇದೆ. ಜೊತೆಗೆ, ಲಕ್ಷಣವಿ ಇಲ್ಲದವರಿಗೂ ಕೋವಿಡ್–19 ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೇಹ ಹಾಗೂ ಅಂಗಾಂಗ ದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್ ಸಂದರ್ಭದಲ್ಲಿ: ‘ದೇಹ ದಾನ ಮಾಡುವುದಾಗಿ ಮೊದಲೇ ಬರೆದು ಕೊಟ್ಟಿಲ್ಲದಿದ್ದರೂ, ವ್ಯಕ್ತಿಗೆ ಸಂಬಂಧಿಸಿದವರು ದೇಹ ದಾನಕ್ಕೆ ಮುಂದಾದ ಉದಾಹರಣೆಗಳೂ ಕೂಡ ಕೋವಿಡ್ ಸಂದರ್ಭದಲ್ಲಿ ಕಂಡುಬಂದಿವೆ! ಮರಣ ಪ್ರಮಾಣಪತ್ರ ಸಲ್ಲಿಸಿದರೆ ಹಾಗೂ ಕುಟುಂಬದವರು ಒಪ್ಪಿದರೆ, ಮುಂಚಿತವಾಗಿ ದಾನ ಮಾಡಿಲ್ಲದಿದ್ದರೂ ಮೃತ ದೇಹ ಪಡೆಯುವುದಕ್ಕೆ ನಿಯಮಗಳ ಪ್ರಕಾರ ವೈದ್ಯ ಕಾಲೇಜುಗಳಿಗೆ ಅವಕಾಶವಿದೆ. ಆದರೆ, ಅದನ್ನೂ ಸದ್ಯಕ್ಕೆ ನಿಲ್ಲಿಸಲಾಗಿದೆ’ ಎನ್ನುತ್ತಾರೆ ಕಾಲೇಜುಗಳವರು.

ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್‌ ಟ್ರಸ್ಟ್ ಮೂಲಕ ಜಿಲ್ಲೆಯಲ್ಲಿ ದೇಹ ದಾನ ಜಾಗೃತಿ ಮೂಡಿಸುತ್ತಿರುವ ವೈದ್ಯ ಡಾ.ಮಹಾಂತೇಶ ರಾಮಣ್ಣವರ ಅವರ ಪ್ರಕಾರ, ಜಿಲ್ಲೆಯೊಂದರಲ್ಲೇ ಮುಂಚಿತವಾಗಿ ಸಂಕಲ್ಪ ಮಾಡಿದವರು ಹಾಗೂ ಇತರರ ಒಟ್ಟು 32 ದೇಹಗಳನ್ನು ದಾನವಾಗಿ ಪಡೆಯಲಾಗಿಲ್ಲ.

ಮನವರಿಕೆ ಮಾಡುತ್ತಿದ್ದೇವೆ: ‘ನಮ್ಮ ಟ್ರಸ್ಟ್‌ ಮೂಲಕ ದೇಹ ದಾನ ವಾಗ್ದಾನ ಮಾಡಿದ್ದವರ ಕುಟುಂಬದವರು ಮೃಹ ದೇಹ ಒಯ್ಯುವಂತೆ ಸಂಪರ್ಕಿಸಿದ್ದರು. ಆದರೆ, ಈ ಪ್ರಕ್ರಿಯೆಯನ್ನು ಮಾರ್ಚ್‌ನಿಂದ ತಾತ್ಕಾಲಿಕವಾಗಿ ನಿಲ್ಲಿಸಿರುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಂತ್ಯಸಂಸ್ಕಾರವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ನೆರವೇರಿಸಬೇಕು. ಸಹಜ ಸಾವೇ ಆಗಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅಂತ್ಯಸಂಸ್ಕಾರದ ವೇಳೆ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಮಶಾನದಲ್ಲಿ 20ಕ್ಕಿಂತ ಹೆಚ್ಚಿನವರು ಸೇರಬಾರದು ಎಂದು ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕಾಗಿ ‘ಶ್ರದ್ಧಾಂಜಲಿ’ ವಾಟ್ಸ್‌ಆ್ಯಪ್‌ ಗ್ರೂ‍ಪ್‌ ಮಾಡಿದ್ದೇನೆ’ ಎಂದು ಡಾ.ಮಹಾಂತೇಶ ತಿಳಿಸಿದರು.

***

ಸದ್ಯಕ್ಕೆ ದೇಹ ಹಾಗೂ ಅಂಗಾಂಗ ದಾನ ಜಾಗೃತಿಯನ್ನೂ ನಿಲ್ಲಿಸಿದ್ದೇವೆ. ಕೊರೊನಾ ಸೋಂಕು ಸಮಸ್ಯೆ ನಿವಾರಣೆಯಾಗಿ, ಸರ್ಕಾರದಿಂದ ಮಾರ್ಗಸೂಚಿ ಬಂದ ಬಳಿಕ ಮೃತ ದೇಹಗಳನ್ನು ಟ್ರಸ್ಟ್‌ ಮೂಲಕ ಸ್ವೀಕರಿಸಿ ಅಗತ್ಯವಿರುವ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸಲಾಗುವುದು

– ಡಾ.ಮಹಾಂತೇಶ ರಾಮಣ್ಣವರ, ಡಾ.ರಾಮಣ್ಣವರ ಚಾರಿಟಬಲ್‌ ಟ್ರಸ್ಟ್‌, ಬೈಲಹೊಂಗಲ

ಕೋವಿಡ್‌ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ ಮೃಹದೇಹವನ್ನು ಸುಡಬೇಕು ಇಲ್ಲವೇ ಹೂಳಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೀಗಾಗಿ, ದೇಹ ಅಥವಾ ಅಂಗಾಂಗ ದಾನಕ್ಕೆ ಈಗ ಅವಕಾಶ ಇಲ್ಲ.

– ಡಾ.ಶಶಿಕಾಂತ ಮುನ್ಯಾಳ, ಡಿಎಚ್ಒ. ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT