ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೋವಿಡ್‌ 19 ಪೀಡಿತರ ಸಂಖ್ಯೆ 7ಕ್ಕೆ ಏರಿಕೆ

Last Updated 5 ಏಪ್ರಿಲ್ 2020, 14:30 IST
ಅಕ್ಷರ ಗಾತ್ರ

ಬೆಳಗಾವಿ: ಮತ್ತೆ ನಾಲ್ಕು ಜನ ಕೋವಿಡ್‌– 19 ಪೀಡಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇವರಲ್ಲಿ ಮೂರು ಜನ ಮಹಿಳೆಯರಿದ್ದಾರೆ. ಸೋಂಕಿತ ನಾಲ್ಕೂ ಜನರು ರಾಯಬಾಗ ತಾಲ್ಲೂಕಿನವರಾಗಿದ್ದಾರೆ. ಇದರೊಂದಿಗೆ ಪೀಡಿತರ ಒಟ್ಟು ಸಂಖ್ಯೆ ಏಳಕ್ಕೆ ಏರಿದಂತಾಗಿದೆ. ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.

ಒಬ್ಬ ಪುರುಷ ಹಾಗೂ ಮೂರು ಜನ ಮಹಿಳೆಯರೆಲ್ಲರೂ ದೆಹಲಿಯ ನಿಜಾಮುದ್ದೀನ್‌ನಲ್ಲಿ ಮಾರ್ಚ್‌ 13ರಿಂದ 18ರವರೆಗೆ ನಡೆದ ತಬ್ಲಿಘಿ ಧರ್ಮ ಸಭೆಯಲ್ಲಿ ಭಾಗವಹಿಸಿ 20ರಂದು ಮರಳಿಬಂದಿದ್ದರು. ಇವರಲ್ಲಿ ಸೋಂಕಿನ ಲಕ್ಷಣಗಳು ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ.

ಲಾಕ್‌ಡೌನ್‌– ಮತ್ತಷ್ಟು ಬಿಗಿ

ಕೋವಿಡ್‌– 19 ಮೂರು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್‌ ಮತ್ತಷ್ಟು ಬಿಗಿಗೊಳಿಸಲಾಗಿದೆ. ಆತಂಕಕ್ಕೊಳಗಾದ ಬಹುತೇಕ ಜನರು ಮನೆಯಿಂದ ಯಾರೂ ಆಚೆ ಬರಲಿಲ್ಲ. ವಾಹನಗಳು ರಸ್ತೆಗೆ ಇಳಿಯಲಿಲ್ಲ. ರಸ್ತೆಗಳು ನಿರ್ಜನವಾಗಿದ್ದು, ಸ್ಮಶಾನ ಮೌನ ಆವರಿಸಿತ್ತು

ಕಂಟ್ಯಾನ್ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿರುವ ಕ್ಯಾಂಪ್‌ ಸುತ್ತಮುತ್ತ ಬಿಗಿ ಪೊಲೀಸ್‌ ಪಹರೆ ಹಾಕಲಾಗಿದೆ. ಆತಂಕಕ್ಕೆ ಒಳಗಾದ ಜನರು ಸ್ವತಃ ಒಳ ಬರುವ ಹಾಗೂ ಹೊರ ಹೋಗುವ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಮುಳ್ಳುಗಂಟಿ ಹಾಕಿದ್ದಾರೆ, ದೊಡ್ಡ ದೊಡ್ಡ ಕಲ್ಲು ಹಾಕಿದ್ದಾರೆ, ಕೆಲವೆಡೆ ಗುಂಡಿಗಳನ್ನೂ ತೊಡಿದ್ದಾರೆ.

ಪೊಲೀಸ್‌, ವೈದ್ಯಕೀಯ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡುವವರಿಗೆ ಸಂಚರಿಸಲು ತೀವ್ರ ತೊಂದರೆಯಾಯಿತು. ಕೆಲವೆಡೆ ಪಡಿತರ ಸಾಗಿಸುತ್ತಿದ್ದ ವಾಹನಗಳಿಗೆ ತೊಂದರೆಯಾಯಿತು. ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ರಸ್ತೆ ತಡೆದರೆ ಕ್ರಮ

‘ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ ಅವಶ್ಯಕ ವಸ್ತುಗಳು ದೊರೆಯಲಿ ಎನ್ನುವ ಉದ್ದೇಶದಿಂದ ಪಡಿತರ ಸಾಗಿಸುವ ವಾಹನಗಳಿಗೆ ಅನುಮತಿ ನೀಡಲಾಗಿದೆ. ಪಡಿತರ ಚೀಟಿದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ರಸ್ತೆಗಳನ್ನು ಅಗೆಯುವ ಮೂಲಕ ಹಾಗೂ ಮುಳ್ಳು ಗಂಟಿ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ಯತ್ನಗಳು ಕಂಡುಬಂದಿವೆ. ಇದರಿಂದಾಗಿ ಪಡಿತರ ಸಾಗಿಸಲು ಅನಾನುಕೂಲವಾಗುತ್ತಿದೆ. ಪಡಿತರ ಸಾಗಾಟಕ್ಕೆ ತಡೆಯೊಡ್ಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೃತ್ಯದಲ್ಲಿ ಯಾರೂ ತೊಡಗಬಾರದು’ ಎಂದು ಡಾ.ಎಸ್‌.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಸಿಂಪರಣೆ

ಲಾಕ್‌ಡೌನ್‌ ಅವಧಿಯಲ್ಲೂ ಪೌರಕಾರ್ಮಿಕರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ರಸ್ತೆಯ ಮೇಲಿನ ಕಸಗೂಡಿಸುವುದು, ಕಸ ಸಾಗಿಸುವುದು ಹಾಗೂ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ಕ್ರಿಮಿನಾಶಕ ಸಿಂಪರಿಸುತ್ತಿದ್ದಾರೆ.

ಪ್ರಚಾರ

ಆಟೊ ಹಾಗೂ ಟಾಂಟಂ ಮೂಲಕ ಸ್ವಚ್ಛತೆ ಕಾಪಾಡಲು ಹಾಗೂ ಮನೆಯಿಂದ ಹೊರಬರದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಹಾಲು, ತರಕಾರಿ ಪೂರೈಕೆ

ಹಾಲು, ತರಕಾರಿ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುತ್ತಿಲ್ಲ. ಪೊಲೀಸ್‌ ಇಲಾಖೆಯು ಪಾಸ್‌ಗಳನ್ನು ನೀಡಿದ್ದು, ಅವುಗಳನ್ನು ಧರಿಸಿದ ವ್ಯಾಪಾರಸ್ಥರು ಬಡಾವಣೆಗಳಲ್ಲಿ ಸಂಚರಿಸಿ, ಮಾರಾಟ ಮಾಡುತ್ತಿದ್ದಾರೆ. ದಿನಸಿ ಅಂಗಡಿಗಳು ಕೆಲಸ ಸಮಯದವರೆಗೆ ತೆರೆದು, ವ್ಯಾಪಾರ ಮಾಡುತ್ತಿವೆ. ಆ ಸಮಯದಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ, ಮನೆಗೆ ವಾಪಸ್ಸಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT