ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ‍ಜನರಿಂದ ಸಹಕಾರ

ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಜಪ್ತಿ
Last Updated 11 ಮೇ 2021, 15:04 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಲಾಕ್‌ಡೌನ್‌ನ 2ನೇ ದಿನವಾದ ಮಂಗಳವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ಮಾರ್ಗಸೂಚಿ ಪಾಲನೆ ಆಗುವಂತೆ ನಿಗಾ ವಹಿಸಿದರು.

ಅವಶ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿದ್ದ ಸಮಯವಾದ (ಬೆಳಿಗ್ಗೆ 10) ನಂತರವೂ ರಸ್ತೆಗೆ ಬರುತ್ತಿದ್ದವರನ್ನು ತಡೆದು ಕಾರಣ ಕೇಳುತ್ತಿದ್ದುದು ಹಾಗೂ ದಾಖಲೆಗಳನ್ನು ತಪಾಸಿಸುತ್ತಿದ್ದುದು ಕಂಡುಬಂತು. ಅನಗತ್ಯವಾಗಿ ರಸ್ತೆಗಿಳಿದವರಿಂದ ವಾಹನಗಳನ್ನು ಜಪ್ತಿ ಮಾಡಿದ ಘಟನೆಗಳೂ ವರದಿಯಾಗಿವೆ.

ನಗರವೂ ಸೇರಿದಂತೆ ಜಿಲ್ಲೆಯ ಕೆಲವೆಡೆ, ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಬೀಸಿದ್ದ ಘಟನೆಗಳು ಸೋಮವಾರ ವರದಿಯಾಗಿದ್ದವು. ಈ ಬಗ್ಗೆ ಜನಾಕ್ರೋಶ ವ್ಯಕ್ತವಾದ್ದರಿಂದ ಲಾಠಿ ಬೀಸುವ ಬದಲಿಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ಕೆ ಅವರು ಮಂಗಳವಾರ ಬಹುತೇಕ ಆದ್ಯತೆ ನೀಡಿದರು. ದಾಖಲೆಗಳನ್ನು ಕೇಳಿ ಸಕಾರಣವಿದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ಕೊಟ್ಟರು. ಸಕಾರಣವಿಲ್ಲದೆ ಸಂಚರಿಸುತ್ತಿದ್ದವರಿಗೆ ದಂಡ ವಿಧಿಸುವುದು ಅಥವಾ ವಾಹನ ಜಪ್ತಿ ಮೊದಲಾದ ಕಠಿಣ ಕ್ರಮಗಳನ್ನು ಕೈಗೊಂಡರು. ಅಲ್ಲಲ್ಲಿ ಕೆಲವರು ಲಾಠಿಯಿಂದ ಹೊಡೆಯುವುದನ್ನು ಮುಂದುವರಿಸಿದ್ದು ವರದಿಯಾಗಿದೆ.

ಬೆಳಿಗ್ಗೆ ಅಗತ್ಯ ವಸ್ತುಗಳನ್ನು ಖರೀದಿಸಿದ ಜನರು, 10 ಗಂಟೆಯ ನಂತರ ಮನೆಯಲ್ಲೇ ಉಳಿದು ಮಾರ್ಗಸೂಚಿ ಅನುಷ್ಠಾನಕ್ಕೆ ಪೊಲೀಸರಿಗೆ ಸಹಕರಿಸಿದರು. ಲಾಕ್‌ಡೌನ್‌ ನಡುವೆಯೂ ಸಂಜೆ ಹಳೆ ಪಿ.ಬಿ. ರಸ್ತೆಯಲ್ಲಿ ವಾಹನಗಳು ಕಂಡುಬಂದವು.

‘ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮಂಗಳವಾರ 60 ವಾಹನಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಮಾಸ್ಕ್‌ ಧರಿಸಿದ 230 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

‘ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವವರಿಗೆ ಪೊಲೀಸ್ ಮಹಾನಿರ್ದೇಶಕರ ಸೂಚನೆ ಮೇರೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ಕೆಲಸಗಳಿಗೆ ಹೋಗುವವರಿಗೆ ತೊಂದರೆ ಇಲ್ಲ. ಅದನ್ನೇ ನೆಪ ಮಾಡಿಕೊಂಡು ವಾಹನಗಳಲ್ಲಿ ಓಡಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿವೇಚನೆಯಿಂದ ವರ್ತಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕೋವಿಡ್ ಹರಡುವುದನ್ನು ತಡೆಯಲೇಬೇಕಾದ ಅನಿವಾರ್ಯತೆ ಇರುವುದರಿಂದ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಕೋರಿದರು.

ವಕೀಲರ ‍ಪ್ರತಿಕ್ರಿಯೆಗಳು

ಲಾಠಿಪ್ರಹಾರಕ್ಕೆ ಅಧಿಕಾರವಿಲ್ಲ

ಜನರ ಮೇಲೆ ಲಾಠಿಪ್ರಹಾರ ನಡೆಸಲು ಪೊಲೀಸರಿಗೆ ಅವಕಾಶವಿಲ್ಲ ಮತ್ತು ಅಧಿಕಾರವೂ ಇಲ್ಲ. ಅನಗತ್ಯವಾಗಿ ಓಡಾಡಿದರೆ ಅಥವಾ ಮಾರ್ಗಸೂಚಿ ಉಲ್ಲಂಘಿಸಿದರೆ ದಂಡಸಂಹಿತೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಹೊಡೆಯುವುದರಿಂದ ಮಾನವ ಹಕ್ಕು ಉಲ್ಲಂಘನೆಯೂ ಆಗುತ್ತದೆ. ಪ್ರಹಾರದ ಬದಲಿಗೆ ಜನರಿಗೆ ತಿಳಿವಳಿಕೆ ನೀಡಿ ಸೌಜನ್ಯದಿಂದ ಅವರು ನಡೆದುಕೊಳ್ಳಬೇಕು.

ಸುರೇಂದ್ರ ಉಗಾರೆ, ವಕೀಲ, ರಾಯಬಾಗ

ಸಂವಿಧಾನವಿರೋಧಿ ಕೃತ್ಯ

ಜನರ ಮೇಲೆ ಲಾಠಿಪ್ರಹಾರ ನಡೆಸುವುದು ಸಂವಿಧಾನವಿರೋಧಿ ಕೃತ್ಯ. ಆ ಅಧಿಕಾರವನ್ನು ಸಂವಿಧಾನ ಯಾರಿಗೂ ಕೊಟ್ಟಿಲ್ಲ. ಹಾಗೊಂದು ವೇಳೆ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಿ. ಹೊಡೆಯುವುದು ಅಮಾನವೀಯ ಕೃತ್ಯ. ಅಂತಹ ಪೊಲೀಸರ ವಿರುದ್ಧ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಮೊದಲನೇ ಅಲೆಯಲ್ಲಿ ಹೈಕೋರ್ಟ್‌ ಕೂಡ ಆದೇಶ ನೀಡಿತ್ತು. ಆದರೂ ಬಲಪ್ರಯೋಗವನ್ನು ಪೊಲೀಸರು ಮುಂದುವರಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಅವರು ಪಾಲಿಸದಿರುವುದು ಸರಿಯಲ್ಲ.

ಎನ್.ಆರ್. ಲಾತೂರ್, ವಕೀಲ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT