ಸೋಮವಾರ, ಆಗಸ್ಟ್ 15, 2022
21 °C
ನಗರ ಸ್ಥಳೀಯ ಸಂಸ್ಥೆಗಳ ವರಮಾನದ ಮೇಲೆ ಕೋವಿಡ್ ಹೊಡೆತ

ನಿರೀಕ್ಷೆಯಷ್ಟು ಬಾರದ ಕರ: ಪ್ರಗತಿಗೆ ಗರ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್ ಸಂಕಷ್ಟದ ಕಾರಣದಿಂದಾಗಿ ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ.

ಸೋಂಕು ಹರಡದಂತೆ ತಡೆಯುವುದಕ್ಕಾಗಿ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು. ಇದರಿಂದಾಗಿ ಬಹಳಷ್ಟು ಮಂದಿಗೆ ಕೆಲಸ ಇರಲಿಲ್ಲ; ಗಳಿಕೆಯೂ ಇರಲಿಲ್ಲ. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಅವರಲ್ಲಿ ಬಹಳಷ್ಟು ಮಂದಿ ಈ ಬಾರಿ ತೆರಿಗೆ ಪಾವತಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಪರಿಣಾಮ, ಹಲವು ಸಂಸ್ಥೆಗಳು ತೆರಿಗೆ ಸಂಗ್ರಹದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಶೇ 64ರಷ್ಟು

ಜಿಲ್ಲೆಯಲ್ಲಿ ಒಟ್ಟು 33 ನಗರ ಸ್ಥಳೀಯ ಸಂಸ್ಥೆಗಳಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮನೆ, ವಾಣಿಜ್ಯ, ನೀರು ಮತ್ತು ಜಾಹೀರಾತು ತೆರಿಗೆ ಸೇರಿ ₹ 25.92 ಕೋಟಿ ತೆರಿಗೆ ಸಂಗ್ರಹದ ಗುರಿ (ಮಹಾನಗರ ಪಾಲಿಕೆ ಹೊರತುಪಡಿಸಿ) ಹೊಂದಲಾಗಿತ್ತು. ಈ ಪೈಕಿ ಡಿ.10ರವರೆಗೆ ₹ 16.72 ಕೋಟಿ ಮಾತ್ರವೇ ಸಂಗ್ರಹವಾಗಿದೆ. ಅಂದರೆ ಶೇ 64ರಷ್ಟು ಗುರಿ ಸಾಧನೆಯಷ್ಟೇ ಆಗಿದೆ. ಜನರ ಅದರಲ್ಲೂ ಮಧ್ಯಮ ವರ್ಗದವರ ಗಳಿಕೆಯ ಮೇಲೆ ಕೋವಿಡ್ ಎಷ್ಟರ ಮಟ್ಟಿಗೆ ಹೊಡೆತ ಕೊಟ್ಟಿದೆ ಎನ್ನುವುದಕ್ಕೆ ಈ ಅಂಕಿ–ಅಂಶಗಳು ಸಾಕ್ಷಿಯಾಗಿದೆ.

ಕೋವಿಡ್ ಪ್ರಕರಣಗಳು ಇಳಿಕೆ ಆಗುತ್ತಿರುವುದರಿಂದ, ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಆರ್ಥಿಕ ವರ್ಷದಲ್ಲಿ ಉಳಿದ ಮೂರು ತಿಂಗಳಲ್ಲಿ ಮತ್ತೊಂದಷ್ಟು ತೆರಿಗೆ ಸಂಗ್ರಹ ಆಗಬಹುದು ಎನ್ನುವುದು ಅಧಿಕಾರಿಗಳ ಆಶಾಭಾವವಾಗಿದೆ. ತೆರಿಗೆ ಸಂಗ್ರಹ ಕುಸಿತವಾದರೆ ಅಭಿವೃದ್ಧಿ ಕಾಮಗಾರಿಗಳ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಜಿಲ್ಲೆಯ ಒಟ್ಟು ಅಂಕಿ ಅಂಶ ಗಮನಿಸಿದರೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದನ್ನು ಗುರುತಿಸಬಹುದು. ಬಹುತೇಕ ಕಡೆಗಳಲ್ಲಿ ಕೋವಿಡ್ ಪರಿಸ್ಥಿತಿ ಪರಿಣಾಮ ಬೀರಿದೆ. ಕೆಲವೆಡೆ ಪರಿಸ್ಥಿತಿ ಉತ್ತಮವಾಗಿದೆ. ನಿಪ್ಪಾಣಿಯಲ್ಲಿ ಚೆನ್ನಾಗಿ ನಡೆದಿದೆ. ಪ್ರಸ್ತುತ ದಂಡ ಸಮೇತ ತೆರಿಗೆ ಪಾವತಿಗೆ  ಅವಕಾಶವಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ವಿಜಯಕುಮಾರ್ ಹೊನಕೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬೆಳಗಾವಿ ಮಹಾನಗರಪಾಲಿಕೆಯಿಂದ ಈ ವರ್ಷ ₹ 45 ಕೋಟಿ ತರಿಗೆ ಸಂಗ್ರಹದ ಗುರಿ ಇತ್ತು. ಇದರಲ್ಲಿ ಈವರೆಗೆ ₹ 30 ಕೋಟಿ ಸಂಗ್ರಹವಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಗ್ರಹಿಸಲು ಆಗಲಿಲ್ಲ. ಜನರೂ ತೊಂದರೆಯಲ್ಲಿದ್ದರು. ಈಗ, ಸಂಪೂರ್ಣ ಗುರಿ ಸಾಧನೆಗೆ ಕ್ರಮ ಕೈಗೊಳ್ಳಲಾಗುವುದು. ಹೋದ ವರ್ಷ ₹ 40 ಕೋಟಿ ಗುರಿ ಇತ್ತು. ಅಷ್ಟೂ ಬಂದಿತ್ತು’ ಎಂದು ಆಯುಕ್ತ ಕೆ.ಎಚ್. ಜಗದೀಶ್ ಮಾಹಿತಿ ನೀಡಿದರು.

ಸವದತ್ತಿಯಲ್ಲಿ ಪರಿಣಾಮ

ಕೋವಿಡ್ ಕಾರಣದಿಂದಾಗಿ ಸವದತ್ತಿ ಯಲ್ಲಮ್ಮ ಪುರಸಭೆ ವ್ಯಾಪ್ತಿಯಲ್ಲೂ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಶೇ 58.73ರಷ್ಟು ಕಡಿಮೆಯಾಗಿದೆ. ಜನರಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿರುವುದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪುರಸಭೆಯು ₹ 2.33 ಕೋಟಿ ನಿರೀಕ್ಷಿಸಿತ್ತು. ಈ ಪೈಕಿ ₹ 90.89 ಲಕ್ಷ ಬಂದಿದೆ. ಹಿಂದಿನ ವರ್ಷಗಳಲ್ಲಿ ಈ ಅವಧಿಗೆ ಸರಾಸರಿ ₹ 1.75 ಕೋಟಿ ಸಂಗ್ರಹವಾಗುತ್ತಿತ್ತು. ಪ್ರಸ್ತುತ ಶೇ 58.73ರಷ್ಟು ಸಂಗ್ರಹವಾಗಿದೆ.

ನಿಪ್ಪಾಣಿಯಲ್ಲಿ ಉತ್ತಮ

ನಿಪ್ಪಾಣಿ ನಗರಸಭೆಯು ಮನೆ ಹಾಗೂ ಅಂಗಡಿ ಮಂಗಟ್ಟುಗಳ ಕರ ₹ 2.80 ಕೋಟಿ ವಸೂಲಿ ಮಾಡಿದೆ. ಕೋವಿಡ್ ಮಧ್ಯೆಯೂ ಇಷ್ಟು ಕರ ವಸೂಲಾತಿಯಾಗಿದ್ದು ಗುರಿ ತಲುಪಿರುವುದು ವಿಶೇಷ. ಬಾಕಿ ಹಾಗೂ ದಂಡ ಸೇರಿ ₹ 40 ಲಕ್ಷವನ್ನೂ ಶೀಘ್ರವೇ ವಸೂಲಿ ಮಾಡಲಾಗುವುದು ಎಂದು ಪೌರಾಯುಕ್ತ ಮಹಾವೀರ ಬೋರನ್ನವರ ತಿಳಿಸಿದರು.

ಅಭಿವೃದ್ಧಿ ಕಾರ್ಯಕ್ಕೆ ತೊಂದರೆ

ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ ವಸೂಲಿಗೆ ಸೋಂಕು ಕಡಿವಾಣ ಹಾಕಿದ್ದು, ಅಭಿವೃದ್ಧಿ ಕಾರ್ಯಕ್ಕೆ ತಡೆ ನೀಡಿದಂತಾಗಿದೆ. ಪ್ರತಿ ವರ್ಷ  ₹ 15ರಿಂದ 20ಲಕ್ಷ ವಸೂಲಿ ಆಗುತ್ತಿತ್ತು. ಈ ಬಾರಿ ಶೇ 17ರಷ್ಟು ಮಾತ್ರ ಸಂದಾಯವಾಗಿದೆ. ಸಿಬ್ಬಂದಿ ಹಾಗೂ ಪೌರಕಾರ್ಮಿಕರ ವೇತನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಲು ಹಣಕಾಸಿನ ತೊಂದರೆ ಎದುರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಖಾನಾಪುರದಲ್ಲಿ ಶೇ 65ರಷ್ಟು

ಖಾನಾಪುರ ಪಟ್ಟಣ ಪಂಚಾಯಿತಿ ನ.30ರವರೆಗೆ ಶೇ 65ರಷ್ಟು ತೆರಿಗೆ ಸಂಗ್ರಹಿಸಿದೆ. ಪ್ರತಿ ಆರ್ಥಿಕ ವರ್ಷ ಆರಂಭದ ಎರಡು ತಿಂಗಳೊಳಗೆ ಕರ  ಪಾವತಿಸಿದ್ದಲ್ಲಿ ಶೇ 5ರಷ್ಟು ವಿನಾಯ್ತಿಯನ್ನು ನಗರಾಭಿವೃದ್ಧಿ ಇಲಾಖೆ ಆಸ್ತಿ ಮಾಲೀಕರಿಗೆ ಘೋಷಿಸಿರುವ ಕಾರಣ ಪ್ರತಿ ವರ್ಷ ಏಪ್ರಿಲ್-ಮೇಯಲ್ಲಿ ಶೇ 80ರಷ್ಟು ಕರ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್-ಮೇನಲ್ಲಿ ಕೋವಿಡ್ ಲಾಕ್‌ಡೌನ್ ಘೋಷಿಸಿದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಬಳಿಕ ಸುಧಾರಿಸಿದೆ.

ಆಸ್ತಿ ಕರ ವಸೂಲಿಗೂ ತಟ್ಟಿದ ಬಿಸಿ

ಚನ್ನಮ್ಮನ ಕಿತ್ತೂರಿನಲ್ಲಿ ಕೊರೊನಾ ಕೊರೊನಾ ಸಂಕಷ್ಟದ ಬಿಸಿ ಆಸ್ತಿ ಕರ ವಸೂಲಿಗೂ ತಟ್ಟಿದೆ. ಕೆಲಸವಿಲ್ಲ, ನಿರೀಕ್ಷಿತ ವ್ಯಾಪಾರ, ವಹಿವಾಟು ಇಲ್ಲ. ಹೀಗಾಗಿ ಕರ ಪಾವತಿಸುವುದು ಹಲವು ಕುಟುಂಬಗಳಿಗೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು. ‘ಪ್ರತಿ ವರ್ಷ ₹23ರಿಂದ ₹ 25 ಲಕ್ಷ ಕರ ಬೇಡಿಕೆ ಇದೆ. ಇದರಲ್ಲಿ  ಶೇ 85ಕ್ಕೂ ಮೇಲ್ಪಟ್ಟು ಕರ ವಸೂಲಾತಿ ಆಗಬೇಕಿತ್ತು. ಆದರೆ, ಈ ಬಾರಿ ಶೇ 52ರಷ್ಟು ಆಗಿದೆ. ಇದರಲ್ಲಿಯೇ ಪೌರಕಾರ್ಮಿಕರ ಸಂಬಳಕ್ಕಾಗಿ ಶೇ  25ರಷ್ಟು ಪಾವತಿಸಬೇಕು. ಇದು ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಕೊಟ್ಟಿದೆ’ ಎನ್ನುತ್ತಾರೆ ಮುಖ್ಯಾಧಿಕಾರಿ ಪ್ರಕಾಶ ಮಠದ.

ಅಭಿವೃದ್ಧಿ ಕಾರ್ಯಗಳು ಕುಂಠಿತ

‘ಗೋಕಾಕದಲ್ಲಿ ಮಾರ್ಚ್‌ ಕೊನೆ ವಾರದಿಂದ ಆಕ್ಟೋಬರ್‌ವರೆಗೆ ಕರ ವಸೂಲಿಯಲ್ಲಿ ಶೇ. 75ರಷ್ಟು ಹಿನ್ನಡೆಯಾಗಿದೆ. ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಬರಬೇಕಿದ್ದ ಅನುದಾನಗಳಲ್ಲೂ ಶೇ. 50ರಷ್ಟು ಕೊರತೆ ಎದುರಿಸಿದ ಪರಿಣಾಮ ನಗರಾಭಿವೃದ್ಧಿಯಲ್ಲೂ ಶೇ. 50ರಷ್ಟು ಹಿನ್ನಡೆ ಆಗಿದೆ’ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ತಿಳಿಸಿದರು. ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಸಂಬಳ ಮತ್ತು ವಾಹನಗಳ ನಿರ್ವಹಣೆ ವೆಚ್ಚಕ್ಕೆ ತೊಡಕಾಗಿದೆ.

ನಿರ್ವಹಣೆಗೆ ಸಂಕಷ್ಟ

ರಾಮದುರ್ಗದಲ್ಲಿ ಕರ ವಸೂಲಿ ಸಮರ್ಪಕವಾಗಿ ನಡೆದಿಲ್ಲದಿರುವುದರಿಂದ ಪುರಸಭೆಯು ಸಂಕಷ್ಟದಲ್ಲಿ ಮುಳುಗಿದೆ. ಆಸ್ತಿ ಕರ ಬೇಡಿಕೆ ₹ 93.45 ಲಕ್ಷ ಇತ್ತು. ಇದರಲ್ಲಿ ₹ 57ಸಾವಿರ ಸಂಗ್ರಹವಾಗಿದೆ. ನೀರಿನ ಕರ ₹ 50.38 ಲಕ್ಷದಲ್ಲಿ ₹ 19 ಲಕ್ಷ ಬಂದಿದೆ. ಅಂಗಡಿಗಳ ತೆರಿಗೆ ₹ 8.31 ಲಕ್ಷದಲ್ಲಿ ₹ 98ಸಾವಿರ ವಸೂಲಿಯಾಗಿದೆ. ಕೋವಿಡ್‌ನಿಂದಾಗಿ ಜನರಿಗೆ ತೆರಿಗೆ ಪಾವತಿಸುವ ಶಕ್ತಿ ಇಲ್ಲವಾಗಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಗ್ರಹ ಪ್ರಮಾಣ ಇಳಿಕೆ ಆಗಿರುವುದರಿಂದ ಸಿಬ್ಬಂದಿಗೆ ನೋಟಿಸ್ ಕೊಡಲಾಗಿದೆ!

ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ 2019–20ನೇ ಸಾಲಿನಲ್ಲಿ ₹34.30 ಲಕ್ಷ ಆಸ್ತಿ ತೆರಿಗೆ ಬರಬೇಕಾಗಿತ್ತು. ಆ ಪೈಕಿ ₹ 30.90 ಲಕ್ಷ ವಸೂಲಿಯಾಗಿ ಶೇ. 90ರಷ್ಟು ತೆರಿಗೆ ವಸೂಲಿಯಾಗಿತ್ತು. ಪ್ರಸಕ್ತ 2020–21ರ ಸಾಲಿನಲ್ಲಿ ₹40.61 ಲಕ್ಷ ಆಸ್ತಿ ತೆರಿಗೆ ಬರಬೇಕಾಗಿತ್ತು. ನವೆಂಬರ್‌ವರೆಗೆ ₹ ₹25.50 ಲಕ್ಷ ತೆರಿಗೆ, ಅಂದರೆ ಶೇ. 62.79ರಷ್ಟು ವಸೂಲಾಗಿದೆ.

‘ಹಿಂದಿನ ವರ್ಷಕ್ಕಿಂತ ಈ ಬಾರಿ ತೆರಿಗೆ ವಸೂಲಿ ಕಡಿಮೆಯಾಗಿದೆ. ಲಾಕ್‌ಡೌನ್‌ನಲ್ಲಿ ಅಂಗಡಿಗಳು ಬಂದ್‌ ಆಗಿದ್ದರಿಂದ ವರಮಾನವಿಲ್ಲ ಎಂದು ವರ್ತಕರು ಹೇಳುತ್ತಿದ್ದು, ಕರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ತೆರಿಗೆ ಅವಲಂಬಿಸಿದ ಅಭಿವೃದ್ಧಿ ಕಾರ್ಯಕ್ಕೆ ಕಷ್ಟವಾಗಲಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ತಿಳಿಸಿದರು. 

‘ಪ್ರಜಾವಾಣಿ’ ಗಮನಸೆಳೆದಿತ್ತು

ಕೋವಿಡ್–19 ಬಿಕ್ಕಟ್ಟಿನ ನಡುವೆಯೂ ಮಹಾನಗರಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ಪರಿಷ್ಕರಣೆಗೆ ಮುಂದಾಗಿದ್ದವು. ಈ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಜನಾಭಿಪ್ರಾಯ ಸಂಗ್ರಹಿಸಿ ಸರಣಿಯಾಗಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ತೆರಿಗೆ ಪರಿಷ್ಕರಣೆ ಪ್ರಕ್ರಿಯೆ ಮುಂದೂಡಲಾಯಿತು. ಇದರಿಂದಾಗಿ, ಜನರಿಗೆ ಆಗುತ್ತಿದ್ದ ಹೆಚ್ಚಿನ ‘ಹೊರೆ’ ತಪ್ಪಿತು.

ಪ್ರತಿಕ್ರಿಯೆಗಳು

ಕೋವಿಡ್ ಕಾರಣದಿಂದಾಗಿ ಪಟ್ಟಣದಲ್ಲಿ ಕರ ವಸೂಲಾತಿಯಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಇದರಿಂದ ಅಗತ್ಯ ಸೇವೆ ಹಾಗೂ ವೇತನ ಪಾವತಿಗೂ ತೊಂದೆರೆಯಾಗಿದೆ. ತೆರಿಗೆ ಬಂದರೆ ಅಭಿವೃದ್ಧಿಗೆ ಅನುಕೂಲ.

- ಐ.ಸಿ. ಸಿದ್ನಾಳ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಎಂ.ಕೆ. ಹುಬ್ಬಳ್ಳಿ

ಕೊರೊನಾ ಸೋಂಕಿನಿಂದಾಗಿ ಕರ ಸಂಗ್ರಹ ಪ್ರಮಾಣ ಇಳಿಮುಖವಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ. ಆದರೂ ನಿರ್ವಹಣೆ ಮಾಡುತ್ತಿದ್ದೇವೆ.

- ಶೋಭಾ ಶಂಕರ ಕಿಲ್ಲೇದಾರ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ, ಎಂ.ಕೆ. ಹುಬ್ಬಳ್ಳಿ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿವಿಧ ಯೋಜನೆಗಳಲ್ಲಿ ವಿಶೇಷ ಅನುದಾನ ಕೊಡಿಸುವ ಭರವಸೆ ನೀಡಿದ್ದರಿಂದ ಕೋವಿಡ್‌ ಸಂಕಷ್ಟದ ನಡುವೆಯೂ ಅಭಿವೃದ್ಧಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ

- ಹನಮಂತ ಗುಡ್ಲಮನಿ, ಅಧ್ಯಕ್ಷರು, ಪುರಸಭೆ, ಮೂಡಲಗಿ

ಅಧ್ಯಕ್ಷನಾಗಿ ಈಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಒಳಚರಂಡಿ ವ್ಯವಸ್ಥೆ, ದಿನದ 24 ಗಂಟೆಯೂ ನೀರು ಸರಬರಾಜು, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತೇನೆ. ತೆರಿಗೆ ಸಂಗ್ರಹದ ಬಗ್ಗೆಯೂ ಗಮನಹರಿಸುವೆ.

- ಮಝಹರ್ ಖಾನಾಪುರಿ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ, ಖಾನಾಪುರ

ಕೊರೊನಾ ಸೃಷ್ಟಿಸಿದ ದುಃಸ್ಥಿತಿಯಿಂದಾಗಿ ಪಟ್ಟಣ ಪಂಚಾಯಿತಿಗೆ ನಿರೀಕ್ಷೆಯಂತೆ ಕರ ಬಂದಿಲ್ಲ. ಗ್ರಾಮ ಪಂಚಾಯಿತಿ ಇದ್ದಾಗಿನ ಬಾಕಿಯೂ ಇದೆ. ಬಡ್ಡಿ ರಹಿತ ಬಾಕಿ ಪಾವತಿಸಲು ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

- ಹನುಮಂತ ಲಂಗೋಟಿ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ, ಚನ್ನಮ್ಮನ ಕಿತ್ತೂರು

ಸಾರ್ವಜನಿಕರು ಆಸ್ತಿ ಮತ್ತು ನೀರಿನ ತೆರಿಗೆಗಳನ್ನು ಸಕಾಲಕ್ಕೆ ಪಾವತಿಸಬೇಕು. ಪುರಸಭೆಯ ನಿರ್ವಹಣೆಗೆ ಸಹರಿಸಬೇಕು

- ಎಸ್‌.ಜಿ. ಅಂಬಿಗೇರ, ಮುಖ್ಯಾಧಿಕಾರಿ, ಪುರಸಭೆ, ರಾಮದುರ್ಗ

ಪ್ರಜಾವಾಣಿ ತಂಡ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ಎಸ್. ವಿಭೂತಿಮಠ, ಪ್ರಸನ್ನ ಕುಲಕರ್ಣಿ, ರಾಮೇಶ್ವರ ಕ‌ಲ್ಯಾಣಶೆಟ್ಟಿ, ಸುನೀಲ ಗಿರಿ, ಬಸವರಾಜ ಶಿರಸಂಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು