ಮಂಗಳವಾರ, ಜನವರಿ 19, 2021
26 °C

ಕೋವಿಡ್ ಲಸಿಕೆ ‘ಅಣಕು ಕಾರ್ಯಾಚರಣೆ’ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ವಂಟಮೂರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಮತ್ತು ಹುಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ‘ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆ’ (ಡ್ರೈ ರನ್) ಶನಿವಾರ ಯಶಸ್ವಿಯಾಗಿ ನಡೆಯಿತು.

ಮೂರು ಕೇಂದ್ರಗಳಲ್ಲೂ ತಲಾ 25 ಮಂದಿ ‘ಕೊರೊನಾ ಸೇನಾನಿ’ಗಳನ್ನು (ಆರೋಗ್ಯ ಇಲಾಖೆಯವರು, ಆಶಾ ಹಾಗೂ ಅಂಗನವಾಡಿ ಕಾರ್ಯರ್ತೆಯರು) ಬಳಸಲಾಯಿತು.

ಮೊದಲಿಗೆ ಅವರನ್ನು ನೋಂದಣಿ ಮಾಡಿಕೊಳ್ಳಲಾಯಿತು. ದಾಖಲೆಗಳನ್ನು ಪರಿಶೀಲಿಸಲಾಯಿತು. ಬಳಿಕ ಅವರಿಗೆ, ವೈದ್ಯಕೀಯ ಸಿಬ್ಬಂದಿಯು ಲಸಿಕೆ ನೀಡಿದಂತೆ ಅಭಿನಯಿಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರನ್ನು ಅರ್ಧ ಗಂಟೆವರೆಗೆ ನಿಗಾದಲ್ಲಿರಿಸಿದಂತೆ ಮಾಡಲಾಯಿತು. ಎಲ್ಲ ಮಾಹಿತಿಯನ್ನೂ ಕೇಂದ್ರ ಸರ್ಕಾರ ರೂಪಿಸಿರುವ ‘ಕೋ–ವಿನ್’ ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಾಖಲಿಸಲಾಯಿತು. ಎಲ್ಲ 25 ಮಂದಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನೂ ಸರಾಸರಿ ಒಂದೂವರೆ ಗಂಟೆಯಲ್ಲಿ ನಡೆಸಲಾಯಿತು.

ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಅಕಸ್ಮಾತ್ ಏನಾದರೂ ರಿಯಾಕ್ಷನ್ ಆದಲ್ಲಿ, ಹೇಗೆ ಸ್ಪಂದಿಸಬೇಕು ಎನ್ನುವ ಅಣಕನ್ನೂ ನಡೆಸಲಾಯಿತು. ವೈದ್ಯಕೀಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೈಕೆ ನೀಡಿದಂತೆ ಹಾಗೂ ಪರಿಸ್ಥಿತಿ ನಿಭಾಯಿಸುವಂತೆ ಕಾರ್ಯನಿರ್ವಹಿಸಿದರು.

ವಂಟಮೂರಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಟಿಎಚ್‌ಒ ಡಾ.ಸಂಜಯ ಡುಮ್ಮಗೋಳ ಇದ್ದರು.

‘ಅಣಕು ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿ ನಡೆಯಿತು. ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಿಸಲಾಯಿತು. ‘ಕೋ–ವಿನ್‌’ ತಂತ್ರಾಂಶದಲ್ಲಿ ಯಾವುದೇ ತಾಂತ್ರಿಕ ತೊಂದರೆ ಎದುರಾಗಲಿಲ್ಲ. ಹೀಗೆಯೇ ಎಲ್ಲವೂ ನಡೆದರೆ, ಲಸಿಕೆ ಬಂದಾಗಲೂ ಅಭಿಯಾನ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಸಿಬ್ಬಂದಿಯಲ್ಲಿ ಬಂದಿದೆ. ಲಸಿಕೆ ಬಂದಾಗ ಹಾಕುವುದಕ್ಕೆ ನಾವೆಷ್ಟು ಸಿದ್ಧವಿದ್ದೇನೆ ಎನ್ನುವ ಪರೀಕ್ಷಿಸಿಕೊಳ್ಳುವ ಅಣಕು ಇದಾಗಿತ್ತು’ ಎಂದು ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ (ಆರ್‌ಸಿಎಚ್‌) ಅಧಿಕಾರಿ ಡಾ.ಈಶ್ವರ ಪಿ.ಗಡಾದ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು