ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ: 2ನೇ ದಿನವೂ ಬೆಳಗಾವಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಹೊರವಲಯದಲ್ಲಿ ಕಾಣದ ನಿರ್ಬಂಧ, ಎಪಿಎಸಿಯಲ್ಲಿ ಜನಜಂಗುಳಿ
Last Updated 16 ಜನವರಿ 2022, 12:15 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರದ ಆದೇಶದಂತೆ ಜಾರಿಗೊಳಿಸಲಾಗಿದ್ದ ವಾರಾಂತ್ಯ ಕರ್ಫ್ಯೂವಿನ 2ನೇ ದಿನವಾದ ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಅವಶ್ಯ ಸಾಮಗ್ರಿಗಳ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಮಾತ್ರ ಪೊಲೀಸರು ನಿಗಾ ವಹಿಸಿದ್ದರು. ಹೊರವಲಯದಲ್ಲಿ ಚಟುವಟಿಕೆಗಳು ಎಂದಿನಂತೆ ಇದ್ದವು. ವಾಹನಗಳ ಸಂಚಾರವೂ ಕಂಡುಬಂತು. ಅಲ್ಲಲ್ಲಿ ಪೊಲೀಸರು ವಾಹನ ಸವಾರರು ಹಾಗೂ ಚಾಲಕರ ಮೇಲೆ ಪ್ರಕರಣ ದಾಖಲಿಸಿದರು. ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದವರ ಮೇಲೂ ಪ್ರಕರಣ ದಾಖಲಾಗಿದೆ.

ಎಪಿಎಂಸಿಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಕಂಡುಬಂತು. ಕೋವಿಡ್ ಭೀತಿಯ ನಡುವೆಯೂ ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದೆ ಜನರು ತರಕಾರಿಗಳ ಖರೀದಿಗೆ ಮುಗಿಬಿದ್ದರು. ನೆರೆಯ ಮಹಾರಾಷ್ಟ್ರದಿಂದಲೂ ರೈತರು ತರಕಾರಿ ಮಾರಲು ಬಂದಿದ್ದರು.

ಕಾರ್‌ನಲ್ಲಿ ಸಂಚರಿಸುತ್ತಿದ್ದ ವೈದ್ಯೆಯೊಬ್ಬರು ತಮ್ಮನ್ನು ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ‘ಕಾರಿನಲ್ಲಿದ್ದಾಗ ಮಾಸ್ಕ್‌ ಧರಿಸಿರಲಿಲ್ಲ. ಆದರೆ, ಇಳಿದಾಗ ಹಾಕಿದ್ದೇನೆ. ಪೊಲೀಸರು ಧರಿಸುವಂತೆ ಮೊದಲು ತಿಳಿಸಿ’ ಎಂದು ಹೇಳಿ ಹೊರಟರು.

ಸುರಕ್ಷತೆಗಾಗಿ ಮಾಸ್ಕ್‌ ಧರಿಸಿ:

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಡಿಸಿಪಿ ರವೀಂದ್ರ ಗಡಾದ ಪರಿಶೀಲಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜನರು ಪೊಲೀಸರು ದಂಡ ವಿಧಿಸುವ ಭಯದ ಬದಲಿಗೆ ಆರೋಗ್ಯ ರಕ್ಷಣೆಗಾಗಿ ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಬೇಕು. ಕೋವಿಡ್ ಭೀತಿ ಇರುವುದರಿಂದ ಸಾರ್ವಜನಿಕರು ಅಗತ್ಯವಿದ್ದರಷ್ಟೆ ಮನೆಯಿಂದ ಹೊರಗೆ ಬರಬೇಕು. ಆರೋಗ್ಯ ಕಾಪಾಡಿಕೊಂಡರೆ ಎಲ್ಲವೂ ಚೆನ್ನಾಗಿರುತ್ತದೆ ಎನ್ನುವುದನ್ನು ಮರೆಯಬಾರದು’ ಎಂದು ಕೋರಿದರು.

‘ಸುಶಿಕ್ಷತರಿಂದಲೇ ಸಹಕಾರ ಸಿಗದಿರುವುದು ವಿಷಾದದ ಸಂಗತಿ. ತಾವು ನಿಯಮ ಪಾಲಿಸದೆ ಬೇರೆಯವರತ್ತ ಬೊಟ್ಟು ತೋರಿಸುವವರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಳಿಕವೂ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುತ್ತಿದ್ದೇವೆ. ಶನಿವಾರ ಅನಗತ್ಯವಾಗಿ ಸಂಚರಿಸುತ್ತಿದ್ದವರಿಂದ 200 ವಾಹನಗಳನ್ನು ಜಪ್ತಿ ಮಾಡಲಾಗಿದೆ ಹಾಗೂ ಮಾಸ್ಕ್‌ ಧರಿಸದ 600 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ತಾಲ್ಲೂಕಿನ ಬಾಚಿ ಬಳಿ ಸೇರಿದಂತೆ ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಾಗಿ ತಪಾಸಣೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿ–ಪಿಸಿಆರ್‌ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದವರನ್ನು ವಾಪಸ್ ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT