ಭಾನುವಾರ, ಮೇ 22, 2022
24 °C
ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಕ್ರಮ: ಕಡಾಡಿ

ಗಮನಸೆಳೆದ ರಾಸುಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಹಳೆಬೆಳಗಾವಿ ಪ್ರದೇಶದ ಕಲ್ಮೇಶ್ವರ ಮಂದಿರದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆಕಳು, ಎಮ್ಮೆ ಹಾಗೂ ಕರುಗಳ ಪ್ರದರ್ಶನ ಮತ್ತು ಸ್ಪರ್ಧೆ ಸಾರ್ವಜನಿಕರ ಗಮನಸೆಳೆಯಿತು.

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ರೈತ ಮೋರ್ಚಾ ದಕ್ಷಿಣ ವಿಭಾಗ ಮತ್ತು ಪಶು ಚಿಕಿತ್ಸಾಲಯದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಆ ಭಾಗದ ರೈತರು ತಮ್ಮ ಆಕಳು, ಎಮ್ಮೆ ಹಾಗೂ ಕರುಗಳನ್ನು ತಂದು ಪ್ರದರ್ಶಿಸಿದರು. ವಿವಿಧ ತಳಿಗಳ 200ಕ್ಕೂ ಹೆಚ್ಚಿನ ರಾಸುಗಳು ಇದ್ದವು.

ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಕೃಷಿ ಉತ್ಪನ್ನಗಳನ್ನು ಒಳ್ಳೆಯ ಬೆಲೆ ಸಿಗುವ ಎಲ್ಲಿ ಬೇಕಾದರೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದರ ಬಗ್ಗೆ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಜನರನ್ನು ಅದರಲ್ಲೂ ಕೃಷಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅದಕ್ಕೆ ಕಿವಿಕೊಡಬಾರದು’ ಎಂದು ಕೋರಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆದಾಯ ದ್ವಿಗುಣಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರ ಪ್ರದೇಶದಲ್ಲಿ ರಾಸುಗಳ ಪ್ರದರ್ಶನ ಆಯೋಜಿಸಿ, ಇಲ್ಲಿನ ಹೈನುಗಾರರಿಗೆ ಮಾಹಿತಿ ಕೊಡುತ್ತಿರುವುದು ಶ್ಲಾಘನೀಯವಾಗಿದೆ’ ಎಂದರು.

ಗವಳಿಯೊಬ್ಬರು, ‘ಮೂರೂವರೆ ವರ್ಷದ ಪಂಢರಪುರ ತಳಿಯ ಎಮ್ಮೆಯನ್ನು ₹ 1.70 ಲಕ್ಷಕ್ಕೆ ಖರೀದಿಸಿ ತಂದಿದ್ದೇನೆ. ಇದು, ಬೆಳಗಾವಿಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ದಿನಕ್ಕೆ ಸರಾಸರಿ 15 ಲೀಟರ್ ಹಾಲು ಕೊಡುತ್ತಿದೆ’ ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಹೈನುಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು’ ಎಂದರು.

ಹೈನುಗಾರಿಕೆಯ ಮಹತ್ವ, ರಾಸುಗಳ ಸಾಕಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಪಾಲ್ಗೊಂಡಿದ್ದವುಗಳಲ್ಲಿ ಉತ್ಕೃಷ್ಟ ರಾಸುಗಳನ್ನು ಆಯ್ಕೆ ಮಾಡಿ ಅವುಗಳ ಮಾಲೀಕರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ ಕೊಳ್ಳ, ಸಹಾಯಕ ನಿರ್ದೇಶಕ ಡಾ.ಶ್ರೀಕಾಂತ ಗಾವಿ, ವಡಗಾವಿ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿನಯಕುಮಾರ ಸಂಗ್ರೋಳೆ, ಬಿಜೆಪಿ ಮಹಾನಗರ ರೈತ ಮೋರ್ಚಾ ಅಧ್ಯಕ್ಷ ಕಲ್ಲಪ್ಪ ಶಹಾಪೂರಕರ, ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತೀಶ ಖನ್ನೂಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು