ರಾಮದುರ್ಗ: ಬಾದಾಮಿ ತಾಲ್ಲೂಕಿನ ಉಗಲಾಟದಲ್ಲಿ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಿದ ದಲಿತ ಯುವಕನಿಗೆ ಸವರ್ಣೀಯರು ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಇಲ್ಲಿನ ಸಿಪಿಐ (ಎಂ) ಕಾರ್ಯಕರ್ತರು ಪ್ರತಿಭಟನೆ ಮಾಡಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಬಾದಾಮಿ ತಾಲ್ಲೂಕಿನ ಉಗಲಾಟ ಗ್ರಾಮದ ದ್ಯಾಮವ್ವನ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಿದ ದಲಿತ ಯುವಕ ಅರ್ಜುನ ಮಾದರನ ಮೇಲೆ ಸವರ್ಣೀಯರು ಹಲ್ಲೆ ಮಾಡಿದ ಘಟನೆ ಅಮಾನೀಯವಾಗಿದೆ. ತಪ್ಪಿತಸ್ಥರ ಮೇಲೆ ಶೀಘ್ರಮ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೆಲವೆ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಸಂಕನಾಳದಲ್ಲಿ ದಲಿತ ಯುವಕನ ಕೊಲೆ ಹಾಗೂ ಯಾದಗಿರಿ ಜಿಲ್ಲೆಯ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆ ಮಾಸುವಾಗಲೇ ಉಗಲಾಟದಲ್ಲಿ ಹಲ್ಲೆ ನಡೆಸಿರುವುದು ಮಾನವ ಕುಲ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ದಲಿತರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಡೆದು ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗೈಬು ಜೈನೆಖಾನ, ದಲಿತ ಮುಖಂಡ ಬಿ.ಆರ್. ದೊಡಮನಿ (ರಡ್ಡಿ) ಪಕ್ಷದ ಮುಖಂಡರಾದ ನಾಗಪ್ಪ ಸಂಗೊಳ್ಳಿ, ತುಳಸಮ್ಮ ಮಾಳದಕರ, ಮೀನಾಕ್ಷಿ ಸಂಶಿ, ರಾಚವ್ವ ರಾಮದುರ್ಗ, ಮಾಲಾ ಇಳಿಗೇರ, ಫಾರೂಖ್ ಶೇಖ್, ತೌಫಿಕ್ ಗೋಕಾಕ ಮತ್ತು ಅಶೋಕ ಸಾಳುಂಕೆ ಇದ್ದರು.