ಮಂಗಳವಾರ, ನವೆಂಬರ್ 19, 2019
29 °C
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

ಬೆಳೆ ಹಾನಿ: ಸಂಪೂರ್ಣ ವರದಿ ಬಂದಿಲ್ಲ

Published:
Updated:

ಅಥಣಿ: ‘ಜಿಲ್ಲೆಯಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ನಿಖರವಾಗಿ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎನ್ನುವ ಸಂಪೂರ್ಣ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ವರದಿ ಆಧರಿಸಿ ಸರ್ಕಾರದಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ‘ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳು ರಾಜ್ಯಕ್ಕೆ ಎಷ್ಟು ಅನುದಾನ ನೀಡಿವೆ? ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟು ಕೊಟ್ಟಿದೆ ಎನ್ನುವುದನ್ನು ನೋಡಲಿ. ಟೀಕಾಕಾರರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು.

‘ಸಚಿವ ಸಂಪುಟ ಎಲ್ಲ ಸದಸ್ಯರೂ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದೇವೆ. ಪ್ರಾಥಮಿಕ ಅಂಕಿ–ಅಂಶದ ಪ್ರಕಾರ ₹ 36 ಸಾವಿರ ಕೋಟಿ ಹಾನಿಯಾಗಿದೆ. ಇದು ಅಂತಿಮವಲ್ಲ; ಇನ್ನೂ ಸಮೀಕ್ಷೆ ನಡೆದಿದೆ. ಶೀಘ್ರವೇ ಪ್ರಧಾನ ಮಂತ್ರಿ ಭೇಟಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ನೆರೆ ಅಧ್ಯಯನಕ್ಕೆ ಕೇಂದ್ರದ ತಂಡವೂ ಬಂದು ಹೋಗಿದೆ. ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಆ ತಂಡದ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ. ಸರ್ಕಾರದಿಂದ ತಾತ್ಕಾಲಿಕ ಪರಿಹಾರವಾಗಿ ತಲಾ ₹ 10ಸಾವಿರ ನೀಡಿದ್ದೇವೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡುತ್ತಿದ್ದೇವೆ. ಬಾಡಿಗೆ ಮನೆಯಲ್ಲಿ ಇರಲು ಮುಂದಾದರೆ ತಿಂಗಳಿಗೆ ₹ 5 ಸಾವಿರ ಬಾಡಿಗೆ ಕೊಡುತ್ತೇವೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ ₹ 5 ಲಕ್ಷ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಕೊಚ್ಚಿ ಹೋದ ಇಬ್ಬರ ಶವ ದೊರೆತಿಲ್ಲ. ವಿಶೇಷ ‍ಪ್ರಕರಣಗಳೆಂದು ಪರಿಗಣಿಸಿ ಅವರು ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದರು.

‘ಸಾರಿಗೆ ಇಲಾಖೆಯು ಭಾರಿ ನಷ್ಟದಲ್ಲಿದೆ. ಪರಿಸ್ಥಿತಿ ಸುಧಾರಿಸುವುದಕ್ಕಾಗಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಸೋರಿಕೆಗಳಿದ್ದು, ತಡೆಗಟ್ಟಲಾಗುವುದು. ಇಲಾಖೆಯನ್ನು ಲಾಭದತ್ತ ತರಲು ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರಿಗೆ ಗುಣಮಟ್ಟದ ಸೇವೆ ಒದಗಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)