ಭಾನುವಾರ, ಸೆಪ್ಟೆಂಬರ್ 15, 2019
26 °C
ಮೊಬೈಲ್‌ ಆ್ಯಪ್‌ ಬಳಕೆ

ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ಆರಂಭ

Published:
Updated:
Prajavani

ಬೆಳಗಾವಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮೊಬೈಲ್ ಆ್ಯಪ್‌ ಬಳಸಿ ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಲನೆ ನೀಡಿದ್ದಾರೆ.

‘ಪೂರ್ವ ಮುಂಗಾರು ಬೆಳೆ ಬೆಳೆಯುವಂತಹ ರಾಮದುರ್ಗ, ಸವದತ್ತಿ ಹಾಗೂ ಅಥಣಿ ತಾಲ್ಲೂಕುಗಳಲ್ಲಿ ಸಮೀಕ್ಷೆ ಪ್ರಗತಿಯಲ್ಲಿದೆ. ಇನ್ನುಳಿದ ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ ಹಾಗೂ ರಾಯಬಾಗ ತಾಲ್ಲೂಕುಗಳಲ್ಲಿ ಮುಂಗಾರು ಬೆಳೆಗಳ ಸಮೀಕ್ಷೆ ಆರಂಭಿಸಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಸಾಂಖ್ಯಿಕ ಇಲಾಖೆಯವರ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಸಂಗ್ರಹವಾದ ಮಾಹಿತಿಯನ್ನು ಆಯಾ ತಾಲ್ಲೂಕು ಆಡಳಿತ ಪರಿಶೀಲಿಸಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.

‌ವಿಧಾನ: ಮೊಬೈಲ್ ಆ್ಯಪ್‌ ಬಳಸಿ, ಗ್ರಾಮದಲ್ಲಿ ಲಭ್ಯವಿರುವ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಇರುವ ಯುವಕರ ಸೇವೆಯನ್ನು (ಖಾಸಗಿ ನಿವಾಸಿ) ಮತ್ತು ಇಲಾಖೆ ಸಿಬ್ಬಂದಿ ಮೂಲಕ ಸಮೀಕ್ಷೆ ನಡೆಸಲು ಸರ್ಕಾರ ಆದೇಶಿಸಿದೆ. ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡವರು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಮಾಹಿತಿ ಸಂಗ್ರಹಿಸಿ ಆ್ಯಪ್‌ನಲ್ಲಿ ಅಪಲೋಡ್ ಮಾಡುತ್ತಾರೆ.

‘ಸಂಗ್ರಹವಾಗುವ ಮಾಹಿತಿಯನ್ನು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಎನ್ಆರ್‌ಡಿಎಫ್‌, ಎಸ್‌ಆರ್‌ಡಿಎಫ್‌ ಸಹಾಯಧನ ನೀಡಲು, ವರದಿ ತಯಾರಿಸಲು, ಬೆಳೆ ವಿಮೆ ಯೋಜನೆಯಡಿ ರೈತರ ತಾಕುವಾರು ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನ, ಆರ್‌ಟಿಸಿಯಲ್ಲಿ ಬೆಳೆ ಮಾಹಿತಿ ನಮೂದಿಸಲು, ಸಾಂಖ್ಯಿಕ ಇಲಾಖೆಯ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಎಣಿಕೆ ಕಾರ್ಯದಲ್ಲಿ ಬಳಸಲು ಅನುಮತಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ರೈತರು ‘ಬೆಳೆ ದರ್ಶಕ’ ಆ್ಯಪ್‌ ಅನ್ನು ಗೂಗಲ್‌ನ ಪ್ಲೇಸ್ಟೋರ್‌ನಲ್ಲಿ  ಡೌನಲೋಡ್ ಮಾಡಿಕೊಳ್ಳಬಹುದು. ಆ ಆ್ಯಪ್‌ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿ ದಾಖಲಾಗಿರುವುದನ್ನು ಛಾಯಾಚಿತ್ರ ಸಮೇತವಾಗಿ ವೀಕ್ಷಿಸಬಹುದು. ಬೆಳೆಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಇದ್ದರೆ ಆ್ಯಪ್‌ನಲ್ಲೇ ದಾಖಲಿಸುವ ಅಥವಾ ಧ್ವನಿ ಮುದ್ರಣ ಮಾಡುವ ಮೂಲಕ ಸಲ್ಲಿಸಬಹುದಾಗಿದೆ. ರೈತರು, ಸಮೀಕ್ಷೆ ನಡೆಸಲು ಬರುವವರಿಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ತಿಳಿಸಿದ್ದಾರೆ.

Post Comments (+)