ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ ಸರಿಯಾದ ಆಯ್ಕೆಯೇ?

Last Updated 13 ಡಿಸೆಂಬರ್ 2019, 5:58 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಇಂಥ ಒಂದು ಸಲಹೆಯನ್ನು ಪಡೆಯದವರೇ ಇರಲಾರರು. ನಿಮ್ಮ ಮೊಬೈಲ್‌ ಫೋನ್‌ನ ಮೆಸೇಜ್‌ ಬಾಕ್ಸ್‌ ಒಳಗೆ ಇಣುಕಿದರೆ ನಿಮ್ಮ ಸಂಬಂಧಿಕರು, ಸ್ನೇಹಿತರು ಕಳಿಸಿರುವ ಇಂಥ ಸಲಹೆಯ ಕೆಲವು ಸಂದೇಶಗಳು ಕಾಣಿಸಬಹುದು.

ಟಿ.ವಿ. ವಾಹಿನಿಗಳಲ್ಲಂತೂ ಇಂಥ ಜಾಹೀರಾತುಗಳ ಸರಣಿಯೇ (‘ಮ್ಯೂಚುವಲ್‌ ಫಂಡ್ಸ್‌ ಸಹೀ ಹೈ’ ಸರಣಿ) ಬರುತ್ತಿದೆ. ಆದರೆ ಇಷ್ಟೊಂದು ಆಯ್ಕೆಗಳು ಇರುವಾಗ ಹೂಡಿಕೆ ಮಾಡುವುದಾದರೂ ಯಾವುದರಲ್ಲಿ? ನಮಗೆ ಸರಿಯಾದದ್ದನ್ನು ಆಯ್ಕೆ ಮಾಡುವುದಾದರೂ ಹೇಗೆ? ಒಂದು ಉದಾಹರಣೆಯ ಮೂಲಕ ನಿಮಗೆ ಒಂದಿಷ್ಟು ಸಹಾಯ ಮಾಡೋಣ...

ನೀವು 2007ನೇ ಇಸವಿಯಲ್ಲಿದ್ದೀರಿ ಎಂದು ಭಾವಿಸಿಕೊಳ್ಳಿ. ಹತ್ತು ವರ್ಷಗಳ ಬಳಿಕ ಹೆಚ್ಚು ಸಂಪಾದನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ನೀವು ಹೂಡಿಕೆ ಮಾಡಲು ಯೋಚಿಸುತ್ತೀರಿ. ಅದರಂತೆ ನಿಶ್ಚಿತ ಠೇವಣಿಯಲ್ಲಿ (ಎಫ್‌ಡಿ), ಚಿನ್ನದಲ್ಲಿ ಹಾಗೂ ಷೇರು ಆಧರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ತಲಾ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ.

ಹತ್ತು ವರ್ಷಗಳ ಬಳಿಕ ನೀವು ಈ ಎಲ್ಲ ಹೂಡಿಕೆಗಳನ್ನು ವಾಪಸ್‌ ಪಡೆಯಲು ನಿರ್ಧರಿಸುತ್ತೀರಿ. ಆಗ ನಿಮ್ಮ ನಿಶ್ಚಿತ ಠೇವಣಿ ₹ 1.92 ಲಕ್ಷ ಆಗಿರುತ್ತದೆ. ಚಿನ್ನದಲ್ಲಿ ಮಾಡಿರುವ ಹೂಡಿಕೆ ಬೆಳೆದು ₹ 2.85 ಲಕ್ಷ ಆಗಿರುತ್ತದೆ. ಮ್ಯೂಚುವಲ್‌ ಫಂಡ್‌ನಲ್ಲಿ ಮಾಡಿರುವ ಹೂಡಿಕೆ ₹ 3.85 ಲಕ್ಷ ಆಗಿರುತ್ತದೆ (ಫಂಡ್ಸ್‌ ಇಂಡಿಯಾ ನೀಡುವ 10ವರ್ಷಗಳ ಸರಾಸರಿ ಗಳಿಕೆ ವರದಿ ಪ್ರಕಾರ. ತೆರಿಗೆ ನಂತರದ ಗಳಿಕೆ). ಈಗ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇಂದು ನೀವು ಹೂಡಿಕೆ ಮಾಡಬೇಕು ಎಂದುಕೊಂಡರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?

ಏನಿದು ಮ್ಯೂಚುವಲ್‌ ಫಂಡ್‌?

ಮ್ಯೂಚುವಲ್‌ ಫಂಡ್‌ ಎಂದರೆ, ಜನರಿಂದ ಹಣವನ್ನು ಸಂಗ್ರಹಿಸಿ, ಆ ಹಣವನ್ನು ವಿವಿಧ ಕಂಪನಿಗಳ ಷೇರುಗಳು, ಬಾಂಡ್‌ ಹಾಗೂ ಇತರ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉತ್ಪನ್ನ. ಹೀಗೆ ಜನರು ಮಾಡಿದ ಹೂಡಿಕೆಯ ಹಣವನ್ನು ಹಣಕಾಸು ಹಾಗೂ ಹೂಡಿಕೆ ತಜ್ಞರ ತಂಡ ನಿರ್ವಹಣೆ ಮಾಡುತ್ತದೆ. ಅವರನ್ನು ‘ಫಂಡ್‌ ಮ್ಯಾನೇಜರ್‌’ಗಳೆಂದು ಕರೆಯುತ್ತಾರೆ.

ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಎನ್ನುವವರಿಗೆ ಮ್ಯೂಚುವಲ್‌ ಫಂಡ್‌ಗಳು ಒಳ್ಳೆಯ ಆಯ್ಕೆ. ಇಲ್ಲಿ ಹಣವನ್ನು ಸರಿಯಾದ ಫಂಡ್‌ನಲ್ಲಿ ಹೂಡಿಕೆ ಮಾಡುವುದಷ್ಟೇ ನಿಮ್ಮ ಕೆಲಸ. ಉಳಿದ ಕೆಲಸವನ್ನು ಫಂಡ್‌ ಮ್ಯಾನೇಜರ್‌ಗಳು ಮಾಡುತ್ತಾರೆ. ಈ ಒಂದು ಉದಾಹರಣೆಯನ್ನು ಗಮನಿಸಿ. ಷೇರು ಅಥವಾ ಬಾಂಡ್‌ಗಳಲ್ಲಿ ನೀವೇ ನೇರವಾಗಿ ಹೂಡಿಕೆ ಮಾಡುವುದೆಂದರೆ ನಿಮ್ಮ ಕಾರನ್ನು ನೀವೇ ಓಡಿಸಿದಂತೆ. ನಿಮಗೆ ಕಾರಿನ ಮೇಲೆ ಪೂರ್ಣ ನಿಯಂತ್ರಣ ಇರುತ್ತದೆ. ಆದರೆ ಚಾಲನೆಯಲ್ಲಿ ನೀವು ಪರಿಣಿತರಾಗಿರಬೇಕು ಮತ್ತು ನಿರಂತರವಾಗಿ ನಿಮ್ಮ ಗಮನ ರಸ್ತೆಯ ಮೇಲಿರಬೇಕು. ಜೊತೆಗೆ ಇಂಧನದ ವೆಚ್ಚ, ರಿಪೇರಿ ವೆಚ್ಚಗಳನ್ನು ನೀವೇ ಭರಿಸಬೇಕು. ಎಲ್ಲಕ್ಕೂ ಮೊದಲು ನೀವು ಕಾರನ್ನು ಖರೀದಿಸಿರಬೇಕು. ಇವೆಲ್ಲವೂ ದುಬಾರಿ ಬಾಬ್ತುಗಳೇ.

ಇನ್ನೊಂದೆಡೆ ಮ್ಯೂಚುವಲ್‌ ಫಂಡ್‌ಗಳು. ಇವುಗಳಲ್ಲಿ ಹೂಡಿಕೆ ಮಾಡುವುದೆಂದರೆ ‘ಷೇರ್‌ ಟ್ಯಾಕ್ಸಿ’ ಪಡೆದಂತೆ. ಕಾರಿನ ಮೇಲೆ ನಿಮಗೆ ಪೂರ್ತಿ ನಿಯಂತ್ರಣ ಇರುವುದಿಲ್ಲ. ಆದರೆ ಈ ಪ್ರಯಾಣ ಅಗ್ಗ. ಡ್ರೈವಿಂಗ್‌ ಬಗ್ಗೆಯಾಗಲಿ, ಪ್ರಯಾಣದ ದಾರಿಯ ಬಗ್ಗೆಯಾಗಲಿ, ಕಾರಿನ ದುರಸ್ತಿ ಬಗ್ಗೆಯಾಗಲಿ ನೀವು ತಲೆಕೆಡಿಸಬೆಕಾಗಿಲ್ಲ. ನಿಮ್ಮ ಕಾರಿನ ಚಾಲಕ (ಮ್ಯೂಚುವಲ್‌ ಫಂಡ್‌ ಮ್ಯಾನೇಜರ್‌) ಅವೆಲ್ಲವನ್ನೂ ಮಾಡುತ್ತಾರೆ. ಸರಳವಾಗಿ ಹೇಳುವುದಾದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಸೌಲಭ್ಯಗಳು ಹೆಚ್ಚು ಮತ್ತು ಮಾನಸಿಕ ಒತ್ತಡ ಕಡಿಮೆ ಇರುತ್ತದೆ.

ಹೂಡಿಕೆ ಯಾಕೆ?

ಹೆಚ್ಚು ಗಳಿಕೆ ಮಾಡಬೇಕೆಂದರೆ ಮ್ಯೂಚುವಲ್‌ ಫಂಡ್‌ ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ (ಮೇಲಿನ ಉದಾಹರಣೆ ಗಮನಿಸಿ). ಆದರೆ ಗಳಿಕೆ ಮಾತ್ರವಲ್ಲದೆ ಮ್ಯೂಚುವಲ್‌ ಫಂಡ್‌ನಿಂದ ಇನ್ನೂ ಕೆಲವು ಲಾಭಗಳಿವೆ. ವುಗಳೆಂದರೆ;

ಇವುಗಳಲ್ಲಿ ಹೂಡಿಕೆ ಮಾಡುವುದು ಸುಲಭ. ಪ್ರತಿ ತಿಂಗಳೂ ಒಂದು ಮೊತ್ತವನ್ನು ನಿಗದಿ ಮಾಡಿ, ಎಸ್‌ಐಪಿ ಮೂಲಕ ಸರಳವಾಗಿ ಹೂಡಿಕೆ ಮಾಡಬಹುದು. ತಿಂಗಳಿಗೆ ಒಂದು ಸಾವಿರ ರೂಪಾಯಿ ಸಣ್ಣ ಮೊತ್ತ ಎನಿಸಿದರೂ ದೀರ್ಘಾವಧಿಯಲ್ಲಿ ಅದು ತಂದುಕೊಡುವ ಗಳಿಕೆ ದೊಡ್ಡದಾಗಿರುತ್ತದೆ.

ಇತರ ಹೂಡಿಕೆಗಳಿಗಿಂತ ಮ್ಯೂಚುವಲ್‌ ಫಂಡ್‌ ಹೂಡಿಕೆಯ ಗಳಿಕೆ ಹೆಚ್ಚು ಎಂಬುದು ಮೇಲಿನ ಉದಾಹರಣೆ ಸ್ಪಷ್ಟಪಡಿಸಿದೆ. ತಿಂಗಳಿಗೆ ₹ 10ಸಾವಿರ ಹೂಡಿಕೆ ಮಾಡುತ್ತ ಹೋದರೆ 20ವರ್ಷಗಳ ಅವಧಿಯಲ್ಲಿ ಅದು ಸುಮಾರು 1 ಕೋಟಿ ರೂಪಾಯಿ ಗಳಿಕೆ ಮಾಡಬಲ್ಲದು.

ಸಾಂಪ್ರದಾಯಿಕ ಹೂಡಿಕಾ ವಿಧಾನಗಳಿಗೆ ಹೋಲಿಸಿದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೆಚ್ಚು ಆಯ್ಕೆ ಇದೆ. ಹೂಡಿಕೆಯ ಅವಧಿ, ಮೊತ್ತವನ್ನು ನಿರ್ಧರಿಸಿ ನಿಮಗೆ ಹೊಂದಿಕೆಯಾಗುವಂಥ ಫಂಡ್‌ ಆಯ್ಕೆ ಮಾಡಿಕೊಂಡು ಹೂಡಿಕೆ ಆರಂಭಿಸಬಹುದು.

ಆರಂಭ ಹೇಗೆ?: ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಮಾಹಿತಿ ಇದ್ದರಷ್ಟೇ ಸಾಲದು. ಮಾರುಕಟ್ಟೆಯಲ್ಲಿ ಇರುವ ಅನೇಕ ಫಂಡ್‌ಗಳಲ್ಲಿ ಸರಿಯಾದುದನ್ನೇ ಆಯ್ಕೆ ಮಾಡಬೇಕು. ಯಾರೋ ಕೊಟ್ಟ ಸಲಹೆಗೆ ತಲೆದೂಗುವುದರಿಂದ ಲಾಭ ಆಗಲಾರದು. ಹೆಚ್ಚಿನ ಮಾಹಿತಿ ಇಲ್ಲದಿದ್ದಲ್ಲಿ ತಜ್ಞರ ಸಲಹೆ ಪಡೆದು ಹೂಡಿಕೆ ಆರಂಭಿಸುವುದು ಸೂಕ್ತ.

ಒಟ್ಟಿನಲ್ಲಿ ಇಂದಿನಿಂದಲೇ ಮ್ಯೂಚುವಲ್‌ ಫಂಡ್‌ ಹೂಡಿಕೆ ಆರಂಭಿಸಿ.

(ಫಂಡ್ಸ್‌ ಇಂಡಿಯಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT