ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ತೀರ್ಪು ಪ್ರಕಟ: ಬೆಳಗಾವಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಮಾರ್ಚ್‌ 15ರಿಂದ

Last Updated 14 ಮಾರ್ಚ್ 2022, 15:18 IST
ಅಕ್ಷರ ಗಾತ್ರ

ಬೆಳಗಾವಿ: ಹಿಜಾಬ್‌ ನಿರ್ಬಂಧ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 15ರ ಬೆಳಿಗ್ಗೆ 6ರಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಆದೇಶ ಹೊರಡಿಸಿದ್ದಾರೆ.

ತೀರ್ಪು ಪ್ರಕಟಗೊಂಡ ನಂತರ ಜನರು ಗುಂಪುಗೂಡುವುದು, ಸಂಭ್ರಮಾಚರಣೆ ಅಥವಾ ಪ್ರತಿಭಟನೆಗಳು ನಡೆಯಲಿರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಭಂಗ ಮಾಡುವ ಉದ್ದೇಶದಿಂದ ಐವರು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡಿ ಓಡಾಡುವುದು, ಸಾರ್ವಜನಿಕ ಸಭೆ–ಮೆರವಣಿಗೆ (ಶವಸಂಸ್ಕಾರ, ಹೋಟೆಲ್, ಚಲನಚಿತ್ರ ಮಂದಿರ, ಧಾರ್ಮಿಕ ಹಾಗೂ ಮದುವೆ ಮೆರವಣಿಗೆಗೆ ಅನ್ವಯಿಸುವುದಿಲ್ಲ), ಆಯುಧ ಮತ್ತು ಸ್ಫೋಟಕಗಳನ್ನು ಇಟ್ಟುಕೊಂಡು ಸಂಚರಿಸುವುದು, ಪಟಾಕಿಗಳನ್ನು ಸುಡುವುದು ಹಾಗೂ ಸರ್ಕಾರಿ ಬಸ್ ಅಥವಾ ಇತರ ವಾಹನಗಳಿಗೆ ಅಡೆತಡೆ ಉಂಟು ಮಾಡುವುದನ್ನು ಪ್ರತಿಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT