ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಾಂಸ್ಕೃತಿಕ ಸಂಗಮ‌ ದಾಂಡಿಯಾ

ಕನ್ನಡ, ಮರಾಠಿ, ಗುಜರಾತಿಗರಿಂದ ಮೇಳೈಸಿದ ಸಾಂಪ್ರದಾಯಿಕ ವೇಷಭೂಷಣ
Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ನವರಾತ್ರಿ ಉತ್ಸವಕ್ಕೆ ಬೆಳಗಾವಿಗೆ ಬರಬೇಕು ನೀವು. ಈ ಒಂಬತ್ತು ದಿನಗಳ ಪ್ರತಿ ರಾತ್ರಿಗೂ ರಂಗು ತುಂಬುತ್ತದೆ ದಾಂಡಿಯಾ. ಕನ್ನಡ, ಮರಾಠಿ, ಗುಜರಾತಿ ಮೂರೂ ಸಂಸ್ಕೃತಿಗಳ ‘ಕೂಡಲಸಂಗಮ’ ಈ ಕೋಲಾಟ.

ಬೆಳಗಾವಿ ನಗರದ ಪ್ರತಿ ಗಲ್ಲಿ, ರಸ್ತೆ, ಬಡಾವಣೆ, ಅಪಾರ್ಟ್‌ಮೆಂಟ್‌, ಮೈದಾನಗಳು, ಕಲ್ಯಾಣ ಮಂಟಪಗಳು... ಹೀಗೆ ಎಲ್ಲೆಲ್ಲಿ ಜಾಗವಿದೆಯೋ ಅಲ್ಲಿ ದಾಂಡಿಯಾ ಗುಂಗೇರಿದೆ. ಈಗೀಗ ಹಳ್ಳಿಗಳಿಗೂ ಹರಿದುಹೋಗಿರುವ ಈ ನೃತ್ಯ ಗ್ರಾಮೀಣ ಹೃದಯಗಳನ್ನೂ ಕುಣಿಸುತ್ತಿದೆ. ಸಾಂಪ್ರದಾಯಿಕ ಹಾಡು, ಸಿನಿಮಾ ಗೀತೆಗಳನ್ನು ಹಚ್ಚಿ ಅದರ ಬೀಟ್‌ಗಳಿಗೆ ತಕ್ಕಂತೆ ಕೋಲಾಟವಾಡುತ್ತ ಹೆಜ್ಜೆ ಹಾಕುವುದೇ ಸೊಗಸು. ಅದನ್ನು ನೋಡುವುದು ಇನ್ನೂ ಸೊಬಗು.

ರಾಣಿ ಚನ್ನಮ್ಮ ನಗರದಲ್ಲಿ ಶಾಸಕ ಅಭಯ ಪಾಟೀಲ, ಸರ್ದಾರ್‌ ಮೈದಾನದಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಆಯಾ ಶಾಸಕರೇ ಮುಂದೆ ನಿಂತು ದಾಂಡಿಯಾ ಆಯೋಜನೆ ಮಾಡಿದ್ದಾರೆ. ಹಲವೆಡೆ ದಾಂಡಿಯಾ ಕ್ಲಬ್‌ಗಳು ತಲೆೆ ಎತ್ತಿದ್ದು, ಟಿಕೆಟ್‌ ಆಧಾರದಲ್ಲೂ ಸಂಭ್ರಮ ಹಂಚಲು ಮುಂದಾಗಿವೆ. ಶಾಹೂನಗರ, ಶಿವಾಜಿ ನಗರ, ಆಟೊ ನಗರ, ಹನುಮಾನ್‌ ನಗರ, ಅಜಂನಗರ, ಬಸವೇಶ್ವರ ನಗರ, ಟೀಚರ್ಸ್‌ ಕಾಲೊನಿ, ವಡಗಾವಿ, ಶಹಾಪುರ... ಹೀಗೆ ಸಂಜೆಯಾದರೆ ಸಾಕು ಇಡೀ ನಗರ ದಾಂಡಿಯಾ ದಂಡೇ ಕಾಣಿಸುತ್ತದೆ.

80ರ ದಶಕದಲ್ಲಿ ಬೆಳಗಾವಿಯ ಬಡಾವಣೆಗಳಿಗೆ ಸೀಮಿತವಾಗಿದ್ದ ದಾಂಡಿಯಾ 90ರ ದಶಕದಲ್ಲಿ ಸಾರ್ವಜನಿಕ ಉತ್ಸವವಾಯಿತು. 20 ವರ್ಷಗಳಿಂದ ಈಚೆಗೆ ಸ್ಥಳೀಯ ಸಂಸ್ಕೃತಿಯ ಭಾಗ ಎಂಬಷ್ಟು ಬೆಸುಗೆ ಕಂಡಿದೆ.

ಕನ್ನಡತಿಯರ ಸಾಂಪ‍್ರದಾಯಿಕ ಉಡುಗೆ, ಮರಾಠಿಗರ ಪರಂಪರಾಗತ ಅಲಂಕಾರ, ಗುಜರಾತಿಗರ ಹೆಜ್ಜೆಶೈಲಿ ಮಿಳಿತವಾಗುವ ಮೂಲಕ ದಾಂಡಿಯಾ ಹೊಸರೂಪ ಪಡೆದಿದ್ದು ಈ ಊರಿನ ವಿಶೇಷ. ಭಾಷೆ, ಧರ್ಮ, ಗಡಿಯ ಅಹಮ್ಮುಗಳ ಆಚೆಗೆ ಬಂದು ಸಾಂಸ್ಕೃತಿಕ ಸುಖ ಹಂಚುವಲ್ಲಿ ಯಶಸ್ವಿಯಾದ ಆಟವಿದು ಎನ್ನವುದು ವನಿತೆಯರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT