‘ನೋಂದಾಯಿಸದಿದ್ದರೆ, ಕಲಬೆರಕೆ ಮಾಡಿದರೆ ₹ 5 ಲಕ್ಷ ದಂಡ’

ಬೆಳಗಾವಿ: ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಲ್ಲಿ ನೋಂದಣಿ ಇಲ್ಲದೆ ವಹಿವಾಟು ಮಾಡುವವರು, ಜನರಿಗೆ ಸುರಕ್ಷಿತವಲ್ಲದ ಆಹಾರ ಪೂರೈಸಿಸುವವರು ಅಥವಾ ಕಲಬೆರಕೆ ಮಾಡುವವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ₹ 5 ಲಕ್ಷದವರೆಗೆ ದಂಡ ವಿದಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯ ಎಲ್ಲ ಆಹಾರ ಪದಾರ್ಥ ವಹಿವಾಟು ಮಾಡುವವರು, ಹೋಟೆಲ್ ಮಾಲೀಕರು ಮತ್ತು ಆಹಾರ ತಯಾರಿಸುವವರು, ಹಾಲಿನ ಉತ್ಪಾದಕರು ಹಾಗೂ ಇತರ ಯಾವುದೇ ವರ್ತಕರು ಕಡ್ಡಾಯವಾಗಿ ಎಫ್.ಎಸ್.ಎಸ್.ಎ. ಅಡಿ ನೋಂದಣಿ ಮಾಡಿಸಿ ಪರವಾನಗಿ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.
‘ಸುರಕ್ಷಿತ ಆಹಾರ ಪೂರೈಸಬೇಕು. ಅಧಿಕಾರಿಗಳು ಸಹ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
‘ಸುರಕ್ಷಿತವಲ್ಲದಿದ್ದರೆ ಅದು ಆಹಾರವೇ ಅಲ್ಲ. ಆಹಾರವು ಕೇವಲ ಎಲೆಯಲ್ಲ ಊಟ ಬಡಿಸುವುದಲ್ಲ. ಅದು ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಹಿತಕರವಾಗಿರಬೇಕು. ಪರಿಸರಕ್ಕೂ ಹಿತಕರವಾಗಿರಬೇಕು. ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಸಾಮಾನ್ಯ ಜನರನ್ನು ತಲುಪಿಸಬೇಕು. ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಹಾನಿಕಾರಕವಲ್ಲದ್ದನ್ನು ಪೂರೈಕೆ ಮಾಡಬೇಕು’ ಎಂದು ಎಫ್.ಎಸ್.ಎಸ್.ಎ. ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜೇಂದ್ರ ಭಾಲ್ಕೆ ತಿಳಿಸಿದರು.
ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ವಿಜಯ ಸಾಲಿಯಾನ ಮತ್ತು ಅಜಯ ಪೈ ಪಾಲ್ಗೊಂಡಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.