ಸೋಮವಾರ, ಮೇ 23, 2022
30 °C
ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

ಕಬ್ಬಿನ ಬಿಲ್ ಪಾವತಿಸದಿದ್ದರೆ ಶಿಸ್ತು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಅಧಿನಿಯಮದ ಪ್ರಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆಗಳ ಸಿಇಒಗಳು, ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಬ್ಬು ಪೂರೈಸಿದ ರೈತರಿಗೆ ಕಬ್ಬು ನಿಯಂತ್ರಣ ಅಧಿನಿಯಮದ ಪ್ರಕಾರ 14 ದಿನಗಳ ಒಳಗೆ ಬಿಲ್‌ ಪಾವತಿಸಬೇಕು ಎನ್ನುವ ನಿಯಮವಿದೆ. ಅದನ್ನು ಪಾಲಿಸಬೇಕು. ಸಕ್ಕರೆ ಕಾರ್ಖಾನೆಯವರು ಕೂಡಲೇ ರೈತರಿಗೆ ಬಿಲ್ ಪಾವತಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘2020–21ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿಸಬೇಕು. ಕಾರ್ಖಾನೆಗಳಿಗೆ ಜನವರಿ ಅಂತ್ಯದವರೆಗೆ ಕಬ್ಬು ನೀಡಿದ ರೈತರಿಗೆ ಫೆ.25ರ ಒಳಗೆ ಹಣ ಪಾವತಿಸಿ ವರದಿ ನೀಡಬೇಕು. ಕಬ್ಬು ಕಟಾವು ತಂಡದವರು ಕಬ್ಬು ಕಟಾವು ಮಾಡಲು ಹೆಚ್ಚಿನ ಮೊತ್ತ ಬೇಡಿಕೆ ಇಡುತ್ತಿರುವುದಾಗಿ ದೂರುಗಳು ರೈತರಿಂದ ಬಂದಿವೆ. ಹೀಗಾಗಿ, ರೈತರಿಂದ ಹಣದ ಬೇಡಿಕೆ ಇಡದಂತೆ ಆ ತಂಡದವರಿಗೆ ಕಾರ್ಖಾನೆಗಳವರು ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ತಾಕೀತು ಮಾಡಿದರು.

‘ಕಾರ್ಖಾನೆ ವತಿಯಿಂದ ನೇಮಿಸಿರುವ ಕಬ್ಬು ಕಟಾವು ತಂಡದವರು ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು. ಬೆಂಗಳೂರು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸೂಚನೆಯಂತೆ ಸಕ್ಕರೆ ಮಾರಾಟಕ್ಕೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು