ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ
Last Updated 5 ಮಾರ್ಚ್ 2021, 14:53 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‌ಪಿ) ಅನುದಾನ ಬಳಕೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಗುರಿ ಸಾಧನೆಗೆ ಕಡಿಮೆ ಸಮಯ ಇದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಕಾಮಗಾರಿಗಳನ್ನು ಕೈಗೊಳ್ಳುವ ಬದಲು ನಿಯಮಾವಳಿಗಳನ್ನು ಪಾಲಿಸಿ ಫಲಾನುಭವಿಗಳಿಗೆ ಅನುಕೂಲ ಆಗುವಂತಹ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್, ನೆರೆ ಹಾವಳಿ ಮತ್ತಿತರ ನೆಪಗಳನ್ನು ಹೇಳಬಾರದು. ಬಿಡುಗಡೆ ಆಗಿರುವ ಅನುದಾನವನ್ನು ಸಂಪೂರ್ಣವಾಗಿ ಬಳಸಬೇಕು’ ಎಂದು ತಾಕೀತು ಮಾಡಿದರು.

ಶೂನ್ಯ ಪ್ರಗತಿ ಸಾಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು. ‘ಜಿಲ್ಲೆಯಲ್ಲಿ ಎಸ್.ಸಿ.ಪಿ ಶೇ.78.03 ಮತ್ತು ಟಿ.ಎಸ್.ಪಿ ಶೇ.76.81 ಪ್ರಗತಿ ಸಾಧಿಸಲಾಗಿದೆ’ ಎಂದು ತಿಳಿಸಿದರು.ಟಿ.ಎಸ್.ಪಿ.ಯಲ್ಲಿ ಬಾಕಿ ಉಳಿದ ಅನುದಾನದಲ್ಲಿ ಎಸ್.ಟಿ. ಮೀಸಲು ಕ್ಷೇತ್ರದ ವ್ಯಾಪ್ತಿಯ ಜನರಿಗೆ ಅನುಕೂಲ ಆಗುವಂತೆ ಆಂಬ್ಯುಲನ್ಸ್ ಖರೀದಿಸುವ ಸಂಬಂಧ ಚರ್ಚಿಸಲಾಯಿತು.

‘ಅನುದಾನ ಉಳಿಯುವುದರಿಂದ ಜನರ ಬೇಡಿಕೆಗೆ ಅನುಗುಣವಾಗಿ ಆಂಬ್ಯುಲನ್ಸ್ ಖರೀದಿಸುವ ಅಗತ್ಯವಿದೆ’ ಎಂದು ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಎಸ್.ಎಸ್. ಬಳ್ಳಾರಿ ಹಾಗೂ ಡಿಎಚ್ಒ ಡಾ.ಶಶಿಕಾಂತ ಮುನ್ಯಾಳ ಅಭಿಪ್ರಾಯಪಟ್ಟರು. ಈ ಅಭಿಪ್ರಾಯ ಪರಿಗಣಿಸಿ ಆಂಬ್ಯುಲನ್ಸ್ ಖರೀದಿಗೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಪಾಲ್ಗೊಂಡಿದ್ದರು.

‘ನ್ಯಾಯ ದೊರಕಿಸಲು ಕ್ರಮ’

ಬೆಳಗಾವಿ: ‘ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಅನುಸೂಚಿತ ಜಾತಿ, ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಅನ್ವಯ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಧಿನಿಯಮ ಅನ್ವಯ ದಾಖಲಾದ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಮಂಜೂರು ಮಾಡಲಾಗಿದೆ. ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿಲ್ಲ. ಸ್ಮಶಾನಕ್ಕೆ ಜಾಗ ನೀಡುವ ಪ್ರಕ್ರಿಯೆ ನಡೆದಿದೆ. ಜಮೀನು ಲಭ್ಯವಿರುವ ಕಡೆಗಳಲ್ಲಿ ಖರೀದಿಸಲಾಗುವುದು ಹಾಗೂ ಲಭ್ಯವಿರುವ ಸ್ಮಶಾನ ಭೂಮಿ ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡ ವಿಜಯ ತಳವಾರ, ‘ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮವಾಗಿ ಬಂಧನದಲ್ಲಿ ಇರಿಸುವ ಪ್ರಕರಣಗಳು ಕಂಡುಬಂದಿವೆ. ಈ ಬಗ್ಗೆ ಆಯುಕ್ತರು ಗಮನಹರಿಸಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಗರದ ರಸ್ತೆಗೆ ವೀರ ಮದಕರಿ ನಾಯಕರ ಹೆಸರು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಹೇಳಿದ್ದು...

* ವೀರ ಮದಕರಿ ನಾಯಕರ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

* ಗಾಯರಾಣ ಜಮೀನು ಸಕ್ರಮಕ್ಕೆ ಸರ್ಕಾರದ ಹಂತದಲ್ಲಿ ನಿರ್ಧಾರವಾದರೆ ಮಾತ್ರ ಸ್ಥಳೀಯವಾಗಿ ಕ್ರಮ ಸಾಧ್ಯ.

* ಪ್ರಕರಣಗಳ ತ್ವರಿತ ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು. ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.

* ದೌರ್ಜನ್ಯ ಅಧಿನಿಯಮ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಸುವರ್ಣ ವಿಧಾನಸೌಧದಲ್ಲಿ ಮಾರ್ಚ್‌ 19ರಂದು ಬೆಳಗಾವಿ ವಿಭಾಗಮಟ್ಟದ ಕಾರ್ಯಾಗಾರ ಆಯೋಜಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT