ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕವಾಗಿ ಸಬಲರು’ ಬಿಪಿಎಲ್ ಕಾರ್ಡ್ ಹಿಂದಿರುಗಿಸಿ

ಜಿಲ್ಲಾಧಿಕಾರಿ ಸೂಚನೆ; ಕೊಡದಿದ್ದರೆ ಕ್ರಿಮಿನಲ್ ಮೊಕದ್ದಮೆ!
Last Updated 5 ಸೆಪ್ಟೆಂಬರ್ 2019, 12:58 IST
ಅಕ್ಷರ ಗಾತ್ರ

ಬೆಳಗಾವಿ: ‘ಆರ್ಥಿಕವಾಗಿ ಸಬಲರಾದವರು’ ಅನಧಿಕೃತವಾಗಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದ್ದಾರೆ.

‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿಪಿಎಲ್ ಪಡಿತರವನ್ನು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅಂಥವರು ಕೂಡಲೇ ಚೀಟಿ ವಾಪಸ್‌ ಮಾಡಬೇಕು’ ಎಂದು ತಿಳಿಸಿದ್ದಾರೆ.

ಅನರ್ಹರು ಯಾರು?

ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತ ದೊಡ್ಡದಾದ ಮನೆ ಹೊಂದಿರುವವರು. ಸರ್ಕಾರಿ ನೌಕರರು. ಸಹಕಾರ ಸಂಘಗಳ ಕಾಯಂ ನೌಕರರು. ಸ್ವಾಯತ್ತ ಸಂಸ್ಥೆ, ಮಂಡಳಗಳ ನೌಕರರು. ಬ್ಯಾಂಕ್ ನೌಕರರು. ಆಸ್ಪತ್ರೆ ನೌಕರರು. ವಕೀಲರು, ಆಡಿಟರ್‌ಗಳು. ದೊಡ್ಡ ಅಂಗಡಿ ಮತ್ತು ಹೋಟೆಲ್ ವರ್ತಕರು. ಸ್ವಂತ ಕಾರು, ಜೆಸಿಬಿ, ಲಾರಿ ಮೊದಲಾದ ವಾಹನ ಹೊಂದಿರುವವರು. ಅನುದಾನಿತ ಶಾಲಾ– ಕಾಲೇಜುಗಳ ನೌಕರರು. ಗುತ್ತಿಗೆದಾರರು. ಕಮಿಷನ್‌ ಏಜೆಂಟ್‌ಗಳು. ಮನೆ, ಕಟ್ಟಡಗಳನ್ನು ಬಾಡಿಗೆ ನೀಡಿರುವವರು. ಬಹು ರಾಷ್ಟ್ರೀಯ ಕಂಪನಿ ಉದ್ದಿಮೆದಾರರು. ನಿವೃತ್ತಿ ವೇತನ ಪಡೆಯುತ್ತಿರುವವರು. ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚಿನ ಆದಯ ಹೊಂದಿರುವ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಪಡೆಯುವುದು ಶಿಕ್ಷಾರ್ಹವಾಗಿದೆ.

‘ಕೆ.ಜಿ. ಅಕ್ಕಿಗೆ ₹ 35ರಂತೆ ಸರ್ಕಾರವು ಹಣ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ಕೆಲವು ಸದೃಢವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದಿರುವುದು ವಿಷಾದನೀಯ. ಈ ರೀತಿಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ. ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಪಡಿತರ ಚೀಟಿ ಪಡೆದುಕೊಂಡಿರುವವರು ಸೆ. 30ರ ಒಳಗೆ ಕಚೇರಿಗೆ ಹಿಂತಿರುಗಿಸಬೇಕು. ಇಲ್ಲವಾದರೆ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿ ಯಾವಾಗಿನಿಂದ ಎಷ್ಟು ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕಾ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗುವುದು. ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT