ಶನಿವಾರ, ಜನವರಿ 18, 2020
24 °C
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಆದೇಶ

ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ಸಾರ್ವಜನಿಕ ರಸ್ತೆ, ಉದ್ಯಾನಗಳು ಮತ್ತು ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ನಡೆಸಬೇಕು. ಅವುಗಳಲ್ಲಿ ಅನಧಿಕೃತವಾದವುಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ 2019ರ ಸೆಪ್ಟೆಂಬರ್‌ನಲ್ಲಿ ತೀರ್ಪಿನಲ್ಲಿ ನಿರ್ದೇಶನ ನೀಡಿದೆ’ ಎಂದು ತಿಳಿಸಿದ್ದಾರೆ.

‘ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ಬಿಲ್ ಕಲೆಕ್ಷರ್‌ಗಳನ್ನು ಒಳಗೊಂಡು ತಾಲ್ಲೂಕುಮಟ್ಟ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು ತಂಡ ರಚಿಸಿಕೊಂಡು ಯೋಜನೆಯನ್ನು ರೂಪಿಸಿಕೊಂಡು ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಜ. 31ರೊಳಗೆ ಮಾಹಿತಿ, ವರದಿ ಸಲ್ಲಿಸಲು ಈಗಾಗಲೇ ನಿರ್ದೇಶನ ಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದಾಗಿ, ಕಟ್ಟಡಗಳನ್ನು ತೆರವುಗೊಳಿಸುವ ವೇಳೆ ಸ್ಥಳೀಯರು, ಆಯಾ ಧರ್ಮದವರ ಮನವೊಲಿಸಬೇಕು ಅಥವಾ ಅಂತಹ ಕಟ್ಟಡಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಈ ಕಾರ್ಯದಲ್ಲಿ ನಿರತವಾಗುವ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳಿಗೆ ಸೂಕ್ತವಾದ ರಕ್ಷಣೆ ಒದಗಿಸಲು ಪೊಲೀಸ್ ಆಯುಕ್ತರು ಹಾಗೂ ಎಸ್ಪಿ ಕ್ರಮ ಕೈಗೊಳ್ಳಬೇಕು. ಕಾರ್ಯಾಚರಣೆಗೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡಗಳು ಸ್ಥಾಪನೆಯಾಗಿರುವ ಕುರಿತು ಸಾರ್ವಜನಿಕರೂ ಮಾಹಿತಿ ನೀಡಬಹುದು. deo.belagavi@gmail.com ವಿಳಾಸಕ್ಕೆ ಇಮೇಲ್ ಕೂಡ ಮಾಡಬಹುದು. ಜಿಲ್ಲಾಧಿಕಾರಿ ಕಾರ್ಯಾಲಯ 0831-2406315 ನಗರಪಾಲಿಕೆ 0831-2405304, ಉಪ ವಿಭಾಗಾಧಿಕಾರಿ ಕಚೇರಿ 0831-2407284, ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ 08288-233160, ಚಿಕ್ಕೋಡಿ ಉಪ ವಿಭಾಗಾಧಿಕಾರಿ 08338-272132 ಹಾಗೂ ಸಂಬಂಧಿಸಿದ ತಹಶೀಲ್ದಾರ್‌ ಕಚೇರಿಗಳನ್ನು ಸಂಪರ್ಕಿಸಿ ಜನರು ಮಾಹಿತಿ ನೀಡಬಹುದಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಯುತ್ತಿರುವ ಕಾರ್ಯಾಚರಣೆಗೆ ಸಹಕಾರ ನೀಡಬೇಕು’ ಎಂದು ಅವರು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)