ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಗದಿತ ಅವಧಿಯಲ್ಲಿ ಅನುದಾನ ಬಳಸಿ’

ಪರಿಶಿಷ್ಟ ಜಾತಿ ಪರಿಶಿಷ್ಟ, ಪಂಗಡಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ತಾಕೀತು
Last Updated 18 ಆಗಸ್ಟ್ 2022, 16:02 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಉಪಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯಲ್ಲಿ ಸಮರ್ಪಕ ಬಳಕೆ ಮಾಡಬೇಕು. ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ನಗದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ/ ಪರಿಶಿಷ್ಟ ಪಂಗಡಗಳ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೈ ಕಿಸಾನ್ ಆ್ಯಪ್ ಮುಲಕ ಅರ್ಜಿ ಸಲ್ಲಿಸಿ, ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆದ ಕೃಷಿ ಇಲಾಖೆ ಫಲಾನುಭವಿಗಳ ಮಾಹಿತಿ ನೀಡಬೇಕು ಅದನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿತ ವೆಬ್‌ಸೈಟ್‌ನಲ್ಲಿ ಲಿಂಕ್ ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ದಾಸ್ತಾನು ಶೇಖರಣೆ ಮಾಡಿ, 46 ಸಾವಿರ ಕ್ವಿಂಟಲ್ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರಸ, ಗೊಬ್ಬರಗಳು ಕೊರತೆಯಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ವಿವರಿಸಿದರು.

ಜುಲೈ ತಿಂಗಳಲ್ಲಿ ಕೃಷಿ ಪರಿಕರಗಳಿಗೆ ಹಾಗೂ ಯಾವುದೇ ಯೋಜನೆಗಳಿಗೆ ಕೃಷಿ ಇಲಾಖೆಗೆ ಅನುದಾನ ಬಿಡುಗಡೆ ಆಗಿಲ್ಲ ಆದರೂ ರಾಷ್ಟೀಯ ಆಹಾರ ಭದ್ರತಾ ಯೋಜನೆಯಡಿ, ಜಿಂಕ್, ಜಿಪ್ಸಮ್ ರೈತರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಅನುದಾನ ಬಳಕೆಯಲ್ಲಿ ಗುರಿ ಬಾಕಿ ಇರುವ ಇಲಾಖೆಗಳು ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳ ವಿವರ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಜಿಲ್ಲಾಡಳಿತದ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಎಚ್.ವಿ, ನಗರಾಭಿವೃದ್ದಿ ಇಲಾಖೆಯ ಆಯುಕ್ತ ಪ್ರೀತಂ, ನಸಲಾಪುರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ ಕೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

*

20ರಂದು ಮುಗಳಿಹಾಳಕ್ಕೆ ಡಿ.ಸಿ

ಬೆಳಗಾವಿ: ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ನಿತೇಶ್ ಪಾಟೀಲ ಅವರು ಆ. 20ರಂದು ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಲಿದ್ದಾರೆ.

ಅಂದು ಬೆಳಿಗ್ಗೆ ಗ್ರಾಮಕ್ಕೆ ತೆರಳಲಿರುವ ಜಿಲ್ಲಾಧಿಕಾರಿ, ಶಾಲೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವರು. ಸಾಮಾಜಿಕ ಭದ್ರತಾ‌‌ ಪಿಂಚಣಿ ಹಾಗೂ ಇತರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳು ಮತ್ತು ಮಂಜೂರಾತಿ ಪತ್ರ ವಿತರಿಸವರು.

ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂದಾಖಲೆಗಳು, ಆರೋಗ್ಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹೆಸ್ಕಾಂ, ಪಶುಪಾಲನೆ, ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ತಹಶೀಲ್ದಾರರ ಭೇಟಿ: ಜಿಲ್ಲೆಯ ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಕೂಡ ಆ.20ರಂದು ತಮ್ಮ ವ್ಯಾಪ್ತಿಯ ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗಾವಿ (ಝಾಡಶಹಾಪೂರ), ಖಾನಾಪುರ (ನಾಗರಗಾಳಿ), ಹುಕ್ಕೇರಿ (ಹೆಬ್ಬಾಳ), ಬೈಲಹೊಂಗಲ (ಚಿವಟಗುಂಡಿ), ರಾಮದುರ್ಗ (ನಂದಿಹಾಳ), ಗೋಕಾಕ (ಬಗರನಾಳ), ಮೂಡಲಗಿ (ತಿಮ್ಮಾಪುರ), ಕಿತ್ತೂರು (ಕುಲಮನಟ್ಟಿ), ಚಿಕ್ಕೋಡಿ (ಕರಗಾಂವ), ಅಥಣಿ (ಜಂಬಗಿ), ರಾಯಬಾಗ (ಕುಡಚಿ), ನಿಪ್ಪಾಣಿ (ಬೂದಿಹಾಳ), ಕಾಗವಾಡ (ಕೆಂಪವಾಡ) ಗ್ರಾಮಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT