ಮಂಗಳವಾರ, ಜೂನ್ 28, 2022
22 °C

ಪ್ರವಾಹ ಸಂದರ್ಭದ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಿ: ಬೆಳಗಾವಿ ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಪ್ರವಾಹ ಸಂದರ್ಭದಲ್ಲಿ ಜನ-ಜಾನುವಾರು ತಕ್ಷಣ ರಕ್ಷಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಜೀವ ಹಾನಿಯಾದರೆ 24 ಗಂಟೆಗಳಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬೇಕು‘ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.

ಸಂಭವನೀಯ ಪ್ರವಾಹ ನಿರ್ವಹಣೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಶನಿವಾರ ವಿಡಿಯೊ ಸಂವಾದ ನಡೆಸಿದರು.

‘ಮನೆಗಳಿಗೆ ನೀರು ನುಗ್ಗಿದಾಗ ಆ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬ ಮಾಡಬಾರದು. ಮಳೆಗಾಲ ಆರಂಭಗೊಳ್ಳಲಿರುವುದರಿಂದ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನೆರೆಯ ರಾಜ್ಯದ ಜಲಾಶಯಗಳ ಸಂಗ್ರಹ, ಮಳೆ ಪ್ರಮಾಣದ ಮೇಲೆ ನಿಗಾ ವಹಿಸಲು ಅನುಕೂಲ ಆಗುವಂತೆ ನೀರಾವರಿ ಇಲಾಖೆಯ ಅಧಕಾರಿಗಳ ತಂಡ ರಚಿಸಬೇಕು’ ಎಂದು ತಿಳಿಸಿದರು.

‘ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ನಿರಂತರ ನಿಗಾ ವಹಿಸಿ ಪ್ರತಿ ದಿನ ಮಾಹಿತಿ ನೀಡುವಂತೆ ತಂಡ ರಚಿಸಿ ಒಬ್ಬ ನೋಡಲ್ ಅಧಿಕಾರಿ ನೇಮಿಸಬೇಕು’ ಎಂದರು.

ಸ್ಥಳೀಯರ ತಂಡ ರಚನೆಗೆ ಸೂಚನೆ: ‘ಕೃಷ್ಣಾ ನದಿ ತೀರದ ಗ್ರಾಮಗಳ ಸಮೀಕ್ಷೆ ಕೈಗೊಂಡು, ಹಿಂದಿನ ಹಾನಿ ಗಮನದಲ್ಲಿಟ್ಟುಕೊಂಡು ಬೋಟ್ ಮತ್ತಿತರ ಸಾಮಗ್ರಿಗಳನ್ನು ಸಜ್ಜಾಗಿಟ್ಟುಕೊಳ್ಳಬೇಕು. ಸ್ಥಳೀಯವಾಗಿ ತಕ್ಷಣವೆ ಸ್ಪಂದಿಸಲು ಅನುಕೂಲ ಆಗುವಂತೆ ಸ್ಥಳೀಯ ಮಟ್ಟದಲ್ಲಿ 10 ಜನರ ತಂಡ ರಚಿಸಿ, ಅದು ಸದಾ ತಯಾರಿರುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಎಸ್.ಡಿ.ಆರ್.ಎಫ್. ಹಾಗೂ ಅಗ್ನಿಶಾಮಕ ಅಧಿಕಾರಿಗಳು ಮುಂಚಿತವಾಗಿಯೇ ನದಿತೀರದ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆ, ಪಶುಪಾಲನೆ, ಗ್ರಾಮೀಣಾಭಿವೃದ್ಧಿ, ಪೊಲೀಸ್, ಕಂದಾಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪಂಚಾಯ್ತಿ ಮಟ್ಟದಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಂಡು ತಂಡಗಳನ್ನು ರಚಿಸಬೇಕು. ಮಳೆಗಾಲ ಆರಂಭ ಆಗುತ್ತಿರುವುದರಿಂದ ಯಾವುದೇ ಅಧಿಕಾರಿಗಳು ಹಾಗೂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ರಜೆ ನೀಡಬಾರದು’ ಎಂದು ಸೂಚಿಸಿದರು.

ಖರೀದಿಗೆ ಸಲಹೆ: ‘ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಅನುಕೂಲ ಆಗುವಂತೆ ಸ್ಥಳೀಯ ಶಾಸಕರ ಅನುದಾನದಲ್ಲಿ ಬೋಟ್ ಖರೀದಿಗೆ ಪ್ರಯತ್ನಿಸಬೇಕು’ ಎಂದು ತಹಶೀಲ್ದಾರರಿಗೆ ಸಲಹೆ ನೀಡಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ‘ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಬಾರಿಯ ಅನುಭವದ ಆಧಾರದ ಮೇಲೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀರಿನ ಹರಿವು ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ಸಜ್ಜಾಗಿರಬೇಕು. ಬೋಟ್‌ಗಳನ್ನು ದುರಸ್ತಿ ಮಾಡಿಸಿಕೊಳ್ಳಬೇಕು’ ಎಂದರು.

‘ನಗರ ಹಾಗೂ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನಾಲಾಗಳನ್ನು ಮೂರು ದಿನಗಳಲ್ಲಿ ಸ್ವಚ್ಛಗೊಳಿಸಬೇಕು. ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿಬಿದ್ದರೆ ತುರ್ತಾಗಿ ತೆರವುಗೊಳಿಸಬೇಕು. ಬೀದಿದೀಪ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು