ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರ ಬೇಡಿಕೆಗೆ ಜಗ್ಗದ ಜಿಲ್ಲಾಧಿಕಾರಿ

ನ್ಯಾಯಾಲಯದ ಆದೇಶ ಪಾಲನೆಯಾಗಲೇಬೇಕು– ಡಿ.ಸಿ
Last Updated 2 ಜುಲೈ 2019, 15:32 IST
ಅಕ್ಷರ ಗಾತ್ರ

ಬೆಳಗಾವಿ: ಶಾಲಾ ಆಟೊಗಳ ಚಾಲಕರ ಬೇಡಿಕೆಗೆ ಮಣಿಯದ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಯಾವುದೇ ಕಾರಣಕ್ಕೂ ನಿಗದಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಆಟೊದಲ್ಲಿ ಕರೆದೊಯ್ಯಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ಭೇಟಿಯಾದ ಆಟೊ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚಾಲಕನೂ ಸೇರಿದಂತೆ ಶಾಲಾ ಆಟೊಗಳಲ್ಲಿ ಆರು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು. ಯಾವುದೇ ಕಾರಣಕ್ಕೂ ಆಟೊಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹಾಕಬಾರದು. ಹಾಕಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಮಕ್ಕಳ ಸುರಕ್ಷತೆ ಅತಿ ಮುಖ್ಯವಾದುದು. ಮಿತಿಗಿಂತ ಹೆಚ್ಚು ಮಕ್ಕಳನ್ನು ಹಾಕುವುದರಿಂದ ಆಟೊಗಳ ನಿಯಂತ್ರಣ ತಪ್ಪಿ, ಅಪಘಾತಕ್ಕೀಡಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನ್ಯಾಯಾಲಯವು ಈ ಆದೇಶ ನೀಡಿದೆ. ಅಲ್ಲದೇ, ಈ ಆದೇಶ ಪಾಲನೆಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಅಫಿಡವಿಟ್‌ ಕೂಡ ಕೇಳಿದೆ. ಹೀಗಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕಾಗಿದೆ’ ಎಂದರು.

‘ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ, ಬಾಡಿಗೆ ಹಣ ದುಪ್ಪಟ್ಟು ಪಡೆಯಬೇಕಾಗುತ್ತದೆ. ಅಷ್ಟೊಂದು ಹಣವನ್ನು ಪಾಲಕರು ನೀಡುವುದಿಲ್ಲ. ಆಟೊ ಬಿಡಿಸಿ, ಬಸ್ಸಿಗೆ ಕಳುಹಿಸಿಕೊಡುತ್ತಾರೆ ಅಥವಾ ತಮ್ಮ ತಮ್ಮ ಬೈಕ್‌–ಸ್ಕೂಟರ್‌ಗಳಲ್ಲಿ ಬಿಟ್ಟುಬರುತ್ತಾರೆ. ಹೀಗಾದರೆ, ನಮ್ಮ ಉಪಜೀವನ ಹೇಗೆ? ಕನಿಷ್ಠ 8 ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅನುಮತಿ ನೀಡಿ’ ಎಂದು ಕೆಲವು ಚಾಲಕರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮನಹಳ್ಳಿ, ‘ನ್ಯಾಯಯುತವಾದ ಬಾಡಿಗೆ ದರವನ್ನು ನಿಗದಿಗೊಳಿಸಿ. ಮಕ್ಕಳ ಸುರಕ್ಷತೆ ಹಾಗೂ ನ್ಯಾಯಾಲಯದ ಆದೇಶದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಿ. ಪಾಲಕರು ಖಂಡಿತವಾಗಿ ಹೆಚ್ಚಿನ ಹಣ ನೀಡುತ್ತಾರೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹಾರ ಕಂಡುಕೊಳ್ಳೋಣ’ ಎಂದು ಹೇಳಿದರು.

ತೀರ್ಮಾನವಾಗಿಲ್ಲ: ‘ಜಿಲ್ಲಾಧಿಕಾರಿ ಜೊತೆ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಶಾಲಾ ಆಟೊಗಳ ಮುಷ್ಕರ ಮುಂದುವರಿಯಲಿದೆ’ ಎಂದು ಚಾಲಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT