ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೈಲವಾಡದಲ್ಲಿ ಡಿಸಿ ವಾಸ್ತವ್ಯ 20ರಂದು

ಎಸಿ, ತಹಶೀಲ್ದಾರ್‌ಗಳಿಂದಲೂ ಗ್ರಾಮಗಳಿಗೆ ಭೇಟಿ
Last Updated 17 ಫೆಬ್ರುವರಿ 2021, 14:44 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ತಹಶೀಲ್ದಾರರು ಫೆ. 20ರಂದು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಎಂಬ ಘೋಷದಡಿ ಎಂ.ಜಿ. ಹಿರೇಮಠ ಅವರು ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಬೈಲಹೊಂಗಲ ತಾಲ್ಲೂಕಿನ ಬೈಲವಾಡದಲ್ಲಿ ನಡೆಸಲಿದ್ದಾರೆ. ಆಯಾ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಕೂಡ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಕಿತ್ತೂರು ತಹಶೀಲ್ದಾರ್‌ (ಬಸರಖೋಡ), ಬೆಳಗಾವಿ (ಧಾಮಣೆ ಎಸ್. ಬೈಲೂರ), ಖಾನಾಪುರ (ಪೋಟೋಳಿ), ಹುಕ್ಕೇರಿ (ಹುಳ್ಳೊಳ್ಳಿ), ರಾಮದುರ್ಗ (ಚಿಂಚನೂರ), ಸವದತ್ತಿ (ಜಾಲಿಕಟ್ಟಿ), ಗೋಕಾಕ (ಏಳಪಟ್ಟಿ), ಮೂಡಲಗಿ (ಹನಮಾಪುರ), ಚಿಕ್ಕೋಡಿ (ಹತ್ತರವಾಟ), ನಿಪ್ಪಾಣಿ (ಶೆಂಡೂರ), ರಾಯಬಾಗ (ಬೂದಿಹಾಳ), ಅಥಣಿ (ಐಗಳಿ) ಹಾಗೂ ಕಾಗವಾಡ (ಲೋಕೂರ) ತಹಶೀಲ್ದಾರರು ಕೂಡ ಗ್ರಾಮಗಳಲ್ಲಿ ವಾಸ್ತವ್ಯ ಇರಲಿದ್ದಾರೆ.

ಆ ಗ್ರಾಮದಲ್ಲಿನ ಪಹಣಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅರ್ಹರಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ವಿವಿಧ ವಿಷಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸಲಾಗುವುದು. ಇಲ್ಲದಿದ್ದಲ್ಲಿ ಕಲ್ಪಿಸಲು, ಆಶ್ರಯ ಯೋಜನೆಗೆ ಅಗತ್ಯವಿದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸಲು ಕ್ರಮ ವಹಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ, ಬರ/ ಪ್ರವಾಹ ಪರಿಹಾರ ಒದಗಿಸಲಾಗುವುದು. ಪ್ರವಾಹದ ಹಾನಿ ತಡೆಗೆ ಸಲಹೆ ನೀಡಲಾಗುವುದು.

ಕಂದಾಯ ಗ್ರಾಮಗಳ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಎಸ್.ಸಿ., ಎಸ್.ಟಿ., ಬಿಸಿಎಂ ವಸತಿನಿಲಯಗಳಿದ್ದಲ್ಲಿ ಪರಿಶೀಲಿಸಲಾಗುವುದು. ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಲಾಗುವುದು. ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಆದೇಶಿಸಲಾಗುವುದು.

ವಿವಿಧ ಯೋಜನೆಗಳಲ್ಲಿ ಮನೆ ಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡುವುದು. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಆಯಾ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT