ಶುಕ್ರವಾರ, ನವೆಂಬರ್ 27, 2020
23 °C

ಬೆಳಗಾವಿ: ಡಿಸಿಸಿ ಬ್ಯಾಂಕ್: ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ 14ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ನ.14ರಂದು ಮುಹೂರ್ತ ನಿಗದಿಯಾಗಿದೆ.

‘ಬ್ಯಾಂಕ್‌ನಲ್ಲಿ ಅಂದು ಬೆಳಿಗ್ಗೆ 11ಕ್ಕೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 1ರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡೂ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣಾ ಪ್ರಕ್ರಿಯೆ ಜರುಗಲಿದೆ’ ಎಂದು ಚುನಾವಣಾಧಿಕಾರಿ ಸಯೀದಾ ಅಫ್ರೀನಬಾನು ಬಳ್ಳಾರಿ ತಿಳಿಸಿದರು.

16 ಸ್ಥಾನಗಳ ನಿರ್ದೇಶಕರ ಸ್ಥಾನಗಳಿಗೆ, ಬಿಜೆಪಿ ವರಿಷ್ಠರ ಸೂಚನೆಯಂತೆ ಜಿಲ್ಲೆಯ ಆ ಪಕ್ಷದ ನಾಯಕರು ಅವಿರೋಧ ಆಯ್ಕೆಗೆ ತಂತ್ರ ರೂಪಿಸಿದ್ದರು. ಹಲವು ಬಣಗಳಾಗಿದ್ದ ನಾಯಕರು ಒಗ್ಗೂಡಿದ್ದರು. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದರು. 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 3 ಸ್ಥಾನಗಳಿಗೆ ಚುನಾವಣೆ ಜರುಗಿತ್ತು. ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಅವಿರೋಧ ಆಯ್ಕೆಯಾಗುವುದೋ ಅಥವಾ ಚುನಾವಣೆ ನಡೆಯುವುದೋ ಎನ್ನುವ ಕುತೂಹಲ  ಮೂಡಿದೆ.

ಪ್ರಸ್ತುತ ಬಲಾಬಲ ಗಮನಿಸಿದರೆ, ನಿರ್ದೇಶಕ ಮಂಡಳಿಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕ ಮಹಾಂತೇಶ ದೊಡ್ಡಗೌಡರ ಮರು ಆಯ್ಕೆಯಾಗಿದ್ದಾರೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಎಲ್ಲ ನಿರ್ದೇಶಕರೂ ಸೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು ಒಮ್ಮತದ ಅಭ್ಯರ್ಥಿಗಳಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹಾಲಿ ಅಧ್ಯಕ್ಷ ರಮೇಶ ಕತ್ತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅವರೇ ಆ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನದ ಮೇಲೆ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಶಿವಾನಂದ ಡೋಣಿ, ರಾಜೇಂದ್ರ ಅಂಕಲಗಿ ಕಣ್ಣಿಟ್ಟಿದ್ದಾರೆ. ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಉಮೇಶ ಕತ್ತಿ ಮೊದಲಾದವರಲ್ಲಿ ಒಮ್ಮತ ಮೂಡಿರುವುದರಿಂದ ಎರಡು ಸ್ಥಾನಗಳಿಗೂ ಅವಿರೋಧ ಆಯ್ಕೆ ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.