ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಚುನಾವಣೆಯಲ್ಲಿ ಸೋಲಿಸಿದವರನ್ನೇ ಗೆಲ್ಲಿಸಬೇಕಾದ ಸ್ಥಿತಿಯಲ್ಲಿ ಡಿಸಿಎಂ

ಸವದಿಗೆ ‘ಸವಾಲು’ ಕೊಟ್ಟ ಬಿಜೆಪಿ !
Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೇ ವಹಿಸಿರುವುದರಿಂದ ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ‘ಹೈವೋಲ್ಟೇಜ್‌ ಕಣ’ ಎನಿಸಿದೆ.

2018ರ ಚುನಾವಣೆಯಲ್ಲಿ ಗೆದ್ದಿದ್ದ ಮಹೇಶ ಕುಮಠಳ್ಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಅವರು ‘ಅನರ್ಹ ಶಾಸಕ’ ಎನಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಈಗ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯೂ ಆಗಿದ್ದಾರಲ್ಲದೇ, ಆ ಪಕ್ಷದ ಟಿಕೆಟ್‌ ಕೂಡ ಸಿಕ್ಕಿದೆ.

ಹಿಂದಿನ 2 ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಒಮ್ಮೆ ಸೋತು, ಒಮ್ಮೆ ಗೆದ್ದಿರುವ ಸಾಂಪ್ರದಾಯಿಕ ಎದುರಾಳಿ ಕುಮಠಳ್ಳಿ ‘ಪರ’ವೇ ಕೆಲಸ ಮಾಡಬೇಕಾದ ಅನಿವಾರ್ಯ ಸವದಿ ಅವರದು. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿದೆ. ಮುಖಂಡರ ಮಟ್ಟದಲ್ಲಿ ‘ಹೊಂದಾಣಿಕೆ’ ಆಗಿರಬಹುದು. ಆದರೆ, ಕಾರ್ಯಕರ್ತರ ಮನೋಭಾವವನ್ನೂ ಬದಲಾಯಿಸಬೇಕಾದ ‘ಸವಾಲು’ ಬಿಜೆಪಿ ವರಿಷ್ಠರಿಗಿದೆ.

ಅಡಕತ್ತರಿಯಲ್ಲಿ:ಕ್ಷೇತ್ರ ಕಳೆದುಕೊಳ್ಳುವ ನೋವು ಒಂದೆಡೆಯಾದರೆ, ಇಲ್ಲಿವರೆಗೂ ವಿರೋಧಿಸುತ್ತಾ ಬಂದವರೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕಾದ ಸ್ಥಿತಿ ಅವರದು. ಅಲ್ಲದೇ, ಅದೆಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ವ್ಯತಿರಿಕ್ತ ಫಲಿತಾಂಶ ಬಂದಲ್ಲಿ ಅದಕ್ಕೂ ‘ಹೊಣೆಗಾರ’ ಆಗಬೇಕಾಗುತ್ತದೆ. ಸವದಿ ‘ಮನಪೂರ್ವಕ’ವಾಗಿ ಕೆಲಸ ಮಾಡಲಿಲ್ಲ ಎನ್ನುವ ಮಾತುಗಳಿಗೆ ಗುರಿಯಾಗಬೇಕಾಗುತ್ತದೆ! ‌ಸೋತರೂ ಉಪಮುಖ್ಯಮಂತ್ರಿಯಂತಹ ದೊಡ್ಡ ಹುದ್ದೆ ಪಡೆದಿರುವ ಅವರು ಈಗ ಅಡಕತ್ತರಿಗೆ ಸಿಲುಕಿದ್ದಾರೆ ಮತ್ತು ಅವರ ರಾಜಕೀಯ ಭವಿಷ್ಯವೂ ಅತಂತ್ರವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕ್ಷೇತ್ರದ ಜನಪ್ರತಿನಿಧಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರಿಂದ ಉಪಚುನಾವಣೆ ನಡೆಯುತ್ತಿರುವು ಇದೇ ಮೊದಲು. ಅಲ್ಲಿ 1967ರಿಂದ 2018ರವರೆಗೆ 12 ಚುನಾವಣೆಗಳು ನಡೆದಿವೆ. ಆರಂಭದಲ್ಲಿ ಇದು ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಡಿ.ಬಿ. ಪವಾರ ದೇಸಾಯಿ 3 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ಮಹಿಳೆಯೊಬ್ಬರಿಗೆ (ಲೀಲಾದೇವಿ ಆರ್. ಪ್ರಸಾದ್) ಮತದಾರರು ಮಣೆ ಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಶಹಜಹಾನ್ ಇಸ್ಮಾಯಿಲ್ ಡೊಂಗರಗಾಂವ ಅವಕಾಶ ಪಡೆದಿದ್ದರು. 2004ರಿಂದ 2013ರವರೆಗೆ ಬಿಜೆಪಿಯ ಸವದಿ ‘ಗೆಲುವಿನ ಹ್ಯಾಟ್ರಿಕ್‌ ಸಾಧನೆ’ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ವಿರುದ್ಧ ಸೋತಿದ್ದರು.

ಜೋಡೆತ್ತಿನಂತೆ ದುಡಿಯಬೇಕಿದೆ:ಆಗ, ಸವದಿ ವಿರುದ್ಧ ರಮೇಶ ಜಾರಕಿಹೊಳಿ ಕೆಲಸ ಮಾಡಿದ್ದರು. ಈಗ, ಸವದಿ–ರಮೇಶ ಜಾರಕಿಹೊಳಿ ಜೋಡೆತ್ತಿನಂತೆ ಕೆಲಸ ಮಾಡಿ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ‘ಟಾಸ್ಕ್‌’ನಲ್ಲಿ ಪಾಲ್ಗೊಳ್ಳಬೇಕಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸವದಿ, ‘ಪಕ್ಷದ ನಿರ್ಧಾರಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಹಿಂದಿನ ವಿರಸಗಳೆಲ್ಲವನ್ನೂ ಮರೆತು ಪಕ್ಷದ ಹಿತಕ್ಕಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅವರು ಗೆಲ್ಲುತ್ತಾರೆ ಎನ್ನುವ ಭರವಸೆ ಇದೆ. ನಮ್ಮನ್ನೆಲ್ಲವನ್ನೂ ಮೀರಿ, ಜನರು ಕೊಡುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಪಕ್ಷಕ್ಕೆ ಬಂದವರೆಲ್ಲರೂ ಈಗ ನಮ್ಮವರೇ. ಎಲ್ಲರೊಂದಿಗೂ ಬೆರೆಯಬೇಕಾಗುತ್ತದೆ’ ಎಂದು ತಿಳಿಸಿದರು.

ಇಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದೂ ಕುತೂಹಲ ಮೂಡಿಸಿದೆ. ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸೋಲಿಸಲು ‘ಪ್ರಬಲ’ ಅಭ್ಯರ್ಥಿಗಾಗಿ ‘ಕೈ’ ಬಹಳಷ್ಟು ಲೆಕ್ಕಾಚಾರ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT