ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬರದ ಬವಣೆ ಮಧ್ಯೆಯೂ ಭಾನುವಾರ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು. ಸರ್ವಧರ್ಮೀಯರು ಆಚರಣೆಯಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದರು.
ಇಲ್ಲಿನ ಬಹುತೇಕ ಬಡಾವಣೆಗಳ ಮನೆಗಳ ಮುಂದೆ ಬಣ್ಣ–ಬಣ್ಣದ ರಂಗೋಲಿಗಳ ಚಿತ್ತಾರ ಅರಳಿತ್ತು. ವಿವಿಧ ದೇವಸ್ಥಾನಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನದತ್ತ ಹೆಜ್ಜೆಹಾಕಿ, ದೇವರ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ತಮ್ಮ ಮನೆಗಳ ಮುಂದೆ ಹಣತೆಗಳನ್ನು ಬೆಳಗಿ ಸಂಭ್ರಮಿಸಿದರು. ಮಕ್ಕಳು, ಯುವಕ ಮತ್ತು ಯುವತಿಯರು ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.
ನರಕ ಚತುರ್ದಶಿ ಅಂಗವಾಗಿ ಜನರು ತಮ್ಮ ಮನೆಗಳು, ಅಂಗಡಿ–ಮುಂಗಟ್ಟುಗಳು, ಹೋಟೆಲ್‌ಗಳು ಮತ್ತು ಕಾರ್ಖಾನೆಗಳಲ್ಲಿ ಲಕ್ಷ್ಮಿಪೂಜೆ ನೆರವೇರಿಸಿದರು.
ಖರೀದಿ ಜೋರು: ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರವೂ ಖರೀದಿ ಭರಾಟೆ ಕಂಡುಬಂತು. ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಪಾಂಗುಳ ಗಲ್ಲಿ, ರಾಮದೇವ ಗಲ್ಲಿಯಲ್ಲಿ ಆಕರ್ಷಕ ವಿನ್ಯಾಸಗಳ ಆಕಾಶಬುಟ್ಟಿಗಳು, ಅಲಂಕಾರಿಕ ವಸ್ತುಗಳು, ಹಣತೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿದರು. ಹಳೇ ಪಿ.ಬಿ. ರಸ್ತೆ ಮತ್ತು ಕಾಕತಿವೇಸ್ ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ಹೂವು, ಹಣ್ಣು, ಬಾಳೆ ಎಲೆ ವ್ಯಾಪಾರ ಜೋರಾಗಿತ್ತು.
ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕೋಟೆ ಮಾದರಿಗಳಿಗೆ ಮಕ್ಕಳು ಅಂತಿಮ ಸ್ಪರ್ಶ ನೀಡಿದರು. ಅವುಗಳ ವೀಕ್ಷಣೆಗೆ ಬಂದವರಿಗೆ ಶಿವಾಜಿ ಮಹಾರಾಜರ ಇತಿಹಾಸ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.