ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸ್ವಾಮೀಜಿಗೆ ಬೆದರಿಕೆ ಹಾಕಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ

Last Updated 27 ಮೇ 2020, 16:49 IST
ಅಕ್ಷರ ಗಾತ್ರ

ಬೆಳಗಾವಿ: ಲಿಂಗಾಯತ ಧರ್ಮದ ಪ್ರಖರ ಪ್ರವಚನಕಾರರಾಗಿರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಲಿಂಗಾಯತ ಪರ ಸಂಘಟನೆಗಳ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ ಗುಡಸ್ ಮಾತನಾಡಿ, ‘ಕೊರೊನಾ ಸಂಕಷ್ಟದ ಕಾಲದಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಕೆಡಿಸಲು ಕೆಲ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಶ್ರೀಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಧರ್ಮ ಪ್ರಚಾರ ನಿಲ್ಲಿಸದಿದ್ದರೇ ಎಂ.ಎಂ.ಕಲಬುರಗಿಯವರಿಗೆ ಕಾಣಿಸಿದ ಗತಿ ನಿಮಗೂ ಕಾಣಿಸುತ್ತೇವೆ. ಕೆಲವೇ ದಿನಗಳಲ್ಲಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಆ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಮುಂದೆ ಆಗಬಹುದಾದ ಅನಾಹುತ ತಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ನಿಜಗುಣಪ್ರಭು ಸ್ವಾಮೀಜಿ ಅವರು ಲಿಂಗಾಯತ ಧರ್ಮದ ಪ್ರಖರ ಪ್ರಚಾರಕರು. ಅವರ ವೈಚಾರಿಕ ಚಿಂತನೆಗಳಿಂದ ಲಿಂಗಾಯತ ಸಮಾಜ ಸೇರಿದಂತೆ ಅನೇಕ ಸಮುದಾಯಗಳ ಜನರು ಜಾಗೃತರಾಗುತ್ತಿದ್ದಾರೆ’ ಎಂದು ಹೇಳಿದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ‘ಲಿಂಗಾಯತ ಮತ್ತು ಹಿಂದುತ್ವದ ನಡುವೆ ಇರುವುದು ವೈಚಾರಿಕ ಸಂಘರ್ಷ ಎಂಬುವುದನ್ನು ಅರ್ಥಮಾಡಿಕೊಳ್ಳದ ಕೆಲ ಮೂಲಭೂತವಾದಿಗಳು ಕೊಲೆ ಮತ್ತು ಕೊಲೆ ಬೆದರಿಕೆಯ ಮಟ್ಟಕ್ಕೆ ಇಳಿದಿದ್ದಾರೆ. ಈ ಬೆದರಿಕೆಗಳಿಂದ ಲಿಂಗಾಯತ ಧರ್ಮದ ಹೋರಾಟ ನಿಲ್ಲುವುದಿಲ್ಲ. ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ದೊರೆಯುವವರೆಗೆ ಈ ಸಂಘರ್ಷ ಅಂತ್ಯಗೊಳ್ಳುವುದಿಲ್ಲ. ಕೊಲೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಬುದ್ಧಿ ಕಲಿಸಬೇಕು’ ಎಂದು ಒತ್ತಾಯಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಅರವಿಂದ ಪರುಶೆಟ್ಟಿ, ಅಶೋಕ ಮಳಗಲಿ, ಅನ್ನಪೂರ್ಣ ಮಳಗಲಿ, ಸದಾನಂದ ಬಸೆಟ್ಟಿ, ರಾಜು ಕುಂದಗೋಳ, ಪ್ರಭು ಬೆಣ್ಣಿ, ರಾಜು ಮಗದುಮ್, ಮಹಾಂತೇಶ ದಿವಟಗಿ, ಬಿ.ಪಿ.ಜೆವಣಿ, ಪತ್ರಕರ್ತ ಶಿವಾನಂದ ಮೆಟ್ಯಾಳ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT