ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಕುಂಟೆ ಪಾರ್ಕ್ ಅಭಿವೃದ್ಧಿಗೆ ಒತ್ತಾಯ

ವಿಜಯಪುರ: ಅವ್ಯವಸ್ಥೆಯ ತಾಣವಾದ ಉದ್ಯಾನ ಪ್ರದೇಶ
Last Updated 20 ಸೆಪ್ಟೆಂಬರ್ 2020, 3:36 IST
ಅಕ್ಷರ ಗಾತ್ರ

ವಿಜಯಪುರ: ‘ಇಲ್ಲಿನ ದೇವನಕುಂಟೆಯ ಸಮೀಪದ ಪುರಸಭೆಯ ಉದ್ಯಾನ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಪಾಳು ಬಿದ್ದಿದ್ದು, ಇಲ್ಲಿ ಸುಂದರ ಪಾರ್ಕ್ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸ್ಥಳೀಯ ನಿವಾಸಿ ರಾಜಣ್ಣ ಒತ್ತಾಯಿಸಿದ್ದಾರೆ.

ಇಲ್ಲಿ ಗಿಡಗಂಟಿಗಳು ಬೆಳೆದು ಆಗಾಗ ಹಾವುಗಳ ದರ್ಶನ, ಸಮತಟ್ಟಾಗಿಲ್ಲದ ರಸ್ತೆ, ಇಲ್ಲಿ ನೀರಿನ ಟ್ಯಾಂಕರ್‌ ಹೋಗುವಾಗ ಕೆಸರಿನಲ್ಲಿ ಸಿಲುಕುವುದುಂಟು.

ಪಾರ್ಕಿನಲ್ಲಿ ನೀರಿನ ಸಂಪು ಇದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಸಂಜೆಯಾದರೆ ಕುಡುಕರಿಗೆ ಆಶ್ರಯತಾಣವಾಗಿದೆ. ಬಯಲಿನಲ್ಲಿ
ನಿಂತಲ್ಲೆ ನಿಂತಿರುವ ಕೊಳಚೆ ನೀರಿನಿಂದಾಗಿ ಸಂಜೆಯಾದರೆ ದುರ್ವಾಸನೆ ಬೀರುತ್ತದೆ.

ಒಳಚರಂಡಿ ಮಂಡಳಿಯಿಂದ ₹11.5 ಕೋಟಿ ವೆಚ್ಚದಡಿಯಲ್ಲಿ 3 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಬೃಹತ್ ಗಾತ್ರದ ನೀರಿನ ತೊಟ್ಟಿಯ ಸಿಮೆಂಟ್‌ ತುಂಡುಗಳು ಉದುರುತ್ತಿವೆ.

ಸ್ಥಳೀಯ ನಿವಾಸಿ ಶ್ರೀನಿವಾಸ್ ಮಾತನಾಡಿ, ‘ಪುರಸಭೆಯಪಾರ್ಕಿನ ಜಾಗವು ಒತ್ತುವರಿಯಾಗಿರುವ ಅನುಮಾನಗಳಿವೆ. ಈ ಬಗ್ಗೆ
ಸರ್ವೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ನಿಗದಿಗೊಳಿಸುವಂತೆ ಅನೇಕ ಬಾರಿ ಪುರಸಭೆಗೆ ಅರ್ಜಿಗಳು ಕೊಟ್ಟಿದ್ದರೂ ಇದುವರೆಗೂ ಸರ್ಕಾರಿ ಸ್ವತ್ತು ಉಳಿಸಿಕೊಳ್ಳುವಂತಹ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಒಂದು ದಿನವೂ ಮುಖ್ಯಾಧಿಕಾರಿಯಾಗಲಿ, ಎಂಜಿನಿಯರ್‌ಗಳಾಗಲಿ ಈ ಕಡೆಗೆ ಬಂದಿಲ್ಲ. ಈ ಪಾರ್ಕಿಗೆ ಗೇಟ್ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಹೆಣ್ಣು ಮಕ್ಕಳು ಓಡಾಡಲಿಕ್ಕೆ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ‘ದೇವನಕುಂಟೆಯ ಜಾಗ ಪಟ್ಟಣದಲ್ಲಿರುವುದರಿಂದ ಮೂರು ಕಡೆ ಕಾಂಪೌಂಡ್ ನಿರ್ಮಾಣವಾಗಿದೆ. ಅದು ಕಂದಾಯ ಇಲಾಖೆಗೆ ಸೇರಿದ್ದು, ಕೆಲವರು ಈ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಇದುವರೆಗೂ ಕಾಂಪೌಂಡ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಯುಜಿಡಿ ಪೈಪ್ ಲೈನ್ ಹಾದು ಹೋಗಿರುವುದರಿಂದ ನೀರು ನಿಲ್ಲುವಂತಾಗಿದೆ. 15ನೇ ಹಣಕಾಸಿನ ಯೋಜನೆಯಡಿ ಕಾಂಪೌಂಡ್ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ತಯಾರು ಮಾಡಿದ್ದೇವೆ. ಅನುಮೋದನೆಗೆ ಕಳುಹಿಸಿದ್ದೇವೆ. ಅನುಮೋದನೆ ಮಾಡಿದ ನಂತರ ಕಾಮಗಾರಿ ಶುರು ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT