ಮಂಗಳವಾರ, ಜೂನ್ 15, 2021
27 °C

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಭಿಮಾನಿಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಪೀರಣವಾಡಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ನೂರಾರು ಜನ ರಾಯಣ್ಣನ ಅಭಿಮಾನಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರ್‌.ಟಿ.ಒ ಕಚೇರಿಯಿಂದ ಹಾಗೂ ಕೆಲವರು ಪೀರಣವಾಡಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಜೈ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ಕರ್ನಾಟಕ ನವ ನಿರ್ಮಾಣ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

‘ಪೀರಣವಾಡಿ ವೃತ್ತದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದೇವು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಆಗಸ್ಟ್‌ 15ರಂದು ನಾವೇ ಸ್ಥಾಪಿಸಿದೇವು. ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಕೆಲವು ಪೊಲೀಸ್‌ ಅಧಿಕಾರಿಗಳು ಸ್ವ ಇಚ್ಛೆಯಿಂದ ಪ್ರತಿಮೆಯನ್ನು ಕೆಳಗಿಳಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜೈ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ನಾಗರಾಜ ಶಹಾಪುರಕರ ಒತ್ತಾಯಿಸಿದರು. 

‘ರಾಯಣ್ಣ ಹುಟ್ಟಿದ ನೆಲದಲ್ಲಿಯೇ ಆತನಿಗೆ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಅಧಿಕಾರಿಗಳ ನಡೆ ಖಂಡನೀಯ. ಮರಾಠಿಗರ ಮತಗಳಿಕೆಗಾಗಿ ಕೆಲವು ರಾಜಕೀಯ ಮುಖಂಡರು ಕೂಡ ಇದಕ್ಕೆ ಸಾಥ್‌ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ತಕ್ಷಣ ಪ್ರತಿಮೆಯನ್ನು ಪುನಃ ಸ್ಥಾಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳಾದ ನಾಗರಾಜ ದೊಡಮನಿ, ಸಂತೋಷ ಗುಬಚಿ, ಮಂಜುನಾಥ ಪಾಟೀಲ, ಮಂಜುನಾಥ ಹಡಪದ ಎಚ್ಚರಿಕೆ ನೀಡಿದರು.

ಹರಸಾಹಸ:

ನಿರೀಕ್ಷೆಗೂ ಮೀರಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದಾಗ ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹೆಚ್ಚುವರಿ ಜಿಲ್ಲಾಧಿಕಾರಿ ದುಡಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರವೂ ಪ್ರತಿಭಟನಾಕಾರರು ಸ್ಥಳದಲ್ಲಿಯೇ ಇದ್ದರು. ಇವರನ್ನು ಸಾಗಹಾಕಲು ಪೊಲೀಸರು ಪರದಾಡಿದರು. ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು